ಬೆಂಗಳೂರು (ಆ.21): ಒಂದೆಡೆ ಗುಂಡಿಗಳಿಂದ ಬೆಂಗಳೂರಿನ ರಸ್ತೆಗಳು ತುಂಬಿ ಹೋಗಿದ್ದರೆ, ಬಿಎಂಟಿಸಿ ಬಸ್ಗಳ ಡ್ರೈವರ್ಗಳು ಗುಂಡಿ ತುಂಬಿದ ರಸ್ತೆಗಳಲ್ಲಿ ತನ್ನ ಬೇಜವಾಬ್ದಾರಿ ಚಾಲನೆಯನ್ನು ಮುಂದುವರಿಸಿದ್ದಾರೆ. ಇದರಿಂದಾಗಿ ರಾಜಧಾನಿಯಲ್ಲಿ ದಿನಕ್ಕೊಂದರಂತೆ ಬಿಎಂಟಿಸಿ ಅಡಿಗೆ ಬಿದ್ದು ಜನರು ಪ್ರಾಣ ಕಳೆದುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ.
ಕಳೆದೊಂದು ವಾರದಲ್ಲಿ ಬೆಂಗಳೂರಿನ ವಿವಿಧ ಪ್ರದೇಶಗಳಲ್ಲಿ ಒಟ್ಟು ನಾಲ್ಕು ಇಂಥ ಘಟನೆಗಳು ನಡೆದಿದ್ದವು. ಗುರುವಾರ ಬೆಳಗ್ಗೆ ಬಿಎಂಟಿಸಿ ಬಸ್ಗೆ 10 ವರ್ಷ ಮಗು ಬಲಿಯಾಗಿದೆ. ಯಲಹಂಕ ಕೋಗಿಲು ಕ್ರಾಸ್ ಬಳಿ ಘಟನೆ ನಡೆದಿದ್ದು, KA57 F:5375 ಬಸ್ ನಿಂದ ಅಪಘಾತ ಸಂಭವಿಸಿದೆ. ಮಾರುತಿನಗರ ಹತ್ತಿರ ಹೋಗುವಾಗ ಎಡಗಡೆ ದ್ವಿಚಕ್ರ ವಾಹನ ಬಂದಿದೆ. ಈ ವೇಳೆ ಬೈಕ್ ಸ್ಕಿಡ್ ಆಗಿದ್ದರಿಂದ ಬಸ್ನ ಚಕ್ರದಡಿ ಮಗು ಸಿಲುಕಿ ಸಾವು ಕಂಡಿದೆ. ಬೆಳಿಗ್ಗೆ 8.20 ರ ಸುಮಾರಿಗೆ ಈ ಘಟನೆ ನಡೆದಿದ. ಈ ಸಂಬಂಧ N E S ಪೊಲೀಸ್ ಸ್ಟೇಷನ್ ನಲ್ಲಿ ಪ್ರಕರಣ ದಾಖಲಾಗಿದೆ.
ತಾಯಿ ಜೊತೆ ಶಾಲೆಗೆ ಹೋಗುವಾಗ ಈ ಘಟನೆ ನಡೆದಿದೆ. ಬಿಎಂಟಿಸಿಗೆ ಬಸ್ಗೆ ಬಲಿಯಾದ ಮಗುವನ್ನು ತನ್ವಿ ಕೃಷ್ಣ ಎಂದು ಗುರುತಿಸಲಾಗಿದ್ದು, ಮಿಲಿನಿಯಮ್ ಶಾಲೆಯಲ್ಲಿ 5 ನೇ ತರಗತಿ ಓದುತ್ತಿತ್ತು ಎನ್ನಲಾಗಿದೆ. ತಾಯಿ ಹರ್ಷಿತಾ ಜೊತೆ ತೆರಳುವಾಗ ಬೈಕ್ ಸ್ಕಿಡ್ ಆಗಿ ಅಪಘಾತ ಸಂಭವಿಸಿದೆ.
ಚಾಲಕರ ನಿರ್ಲಕ್ಷ್ಯ ಮತ್ತು ಅಜಾಗರೂಕತೆಯೇ ಅಪಘಾತಗಳಿಗೆ ಕಾರಣ ಎಂದು ಆರೋಪಿಸಲಾಗಿದೆ. ಕಳೆದೊಂದು ವಾರದಲ್ಲಿ ನಡೆದ ಮೂರು ಘಟನೆಯಲ್ಲಿ ಇಬ್ಬರು ವ್ಯಕ್ತಿ ಬೈಕ್ ಸವಾರರಾಗಿದ್ದರೆ, ಇನ್ನೊಬ್ಬ ಬಿಎಂಟಿಸಿ ಪ್ರಯಾಣಿಕನಾಗಿದ್ದ.
