ಬೆಂಗಳೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಉದ್ಘಾಟನೆಗೆ ಮುನ್ನ, ಮುಖ್ಯ ಅತಿಥಿಯಾಗಿ ಆಹ್ವಾನಿತರಾದ ಸಾಹಿತ್ಯಿಕರು ಶ್ರೀಮತಿ ಬಾನು ಮುಪ್ತಾಕ್ ಅವರು ತಾಯಿ ಭುವನೇಶ್ವರಿ ಹಾಗೂ ತಾಯಿ ಚಾಮುಂಡೇಶ್ವರಿ ಬಗ್ಗೆ ಗೌರವವನ್ನು ಸ್ಪಷ್ಟಪಡಿಸುವುದು ಅತ್ಯಂತ ಅಗತ್ಯ ಎಂದು ಮೈಸೂರು ರಾಜವಂಶಸ್ಥ ಹಾಗೂ ಬಿಜೆಪಿ ಸಂಸದ ಯದುವೀರ್ ಕೃಷ್ಣದತ್ತ ಒಡೆಯರ್ ಹೇಳಿದ್ದಾರೆ.
ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಅಭಿಪ್ರಾಯ ವ್ಯಕ್ತಪಡಿಸಿರುವ ಯದುವೀರ್ ಒಡೆಯರ್ ಅವರು, “ದಸರಾ ಕೇವಲ ಸಾಂಸ್ಕೃತಿಕ ಉತ್ಸವವಲ್ಲ, ಶಾಸ್ತ್ರ-ಪುರಾಣಗಳಲ್ಲಿ ಉಲ್ಲೇಖಗೊಂಡಿರುವ, ವಿಜಯನಗರ ಸಾಮ್ರಾಜ್ಯ ಹಾಗೂ ಮೈಸೂರು ಸಂಸ್ಥಾನದ ಪರಂಪರೆಯಿಂದ ವೈಭವವಾಗಿ ಆಚರಿಸಲ್ಪಡುವ ಹಿಂದೂ ಧಾರ್ಮಿಕ ಹಬ್ಬವಾಗಿದೆ. ಇಂಥ ಪವಿತ್ರ ಪರಂಪರೆಯ ಹಿನ್ನೆಲೆಯಲ್ಲಿ, ಉದ್ಘಾಟನೆಗೂ ಮುನ್ನ ಬಾನು ಮುಪ್ತಾಕ್ ಅವರು ಕನ್ನಡ ತಾಯಿ ಹಾಗೂ ತಾಯಿ ಚಾಮುಂಡೇಶ್ವರಿ ಬಗ್ಗೆ ತಮ್ಮ ಗೌರವವನ್ನು ಸ್ಪಷ್ಟಪಡಿಸಬೇಕು” ಎಂದು ಹೇಳಿದ್ದಾರೆ.
ಇದಕ್ಕೂ ಮೊದಲು ಯದುವೀರ್ ಒಡೆಯರ್ ಅವರು ಬಾನು ಮುಪ್ತಾಕ್ ಅವರ ನೇಮಕವನ್ನು ರಾಜ್ಯ ಸರ್ಕಾರದ ನಿರ್ಧಾರವಾಗಿ ಸ್ವಾಗತಿಸಿದ್ದರೂ, ಇದೀಗ ಅವರ ಯೂ-ಟರ್ನ್ ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.
ಬಾನು ಮುಪ್ತಾಕ್ ಅವರು ಅಂತರಾಷ್ಟ್ರೀಯ ಬೂಕರ್ ಪ್ರಶಸ್ತಿ ಗೆದ್ದ ಮೊದಲ ಕನ್ನಡ ಲೇಖಕಿ ಎಂಬ ಹೆಗ್ಗಳಿಕೆಯನ್ನು ಪಡೆದಿದ್ದು, ಕನ್ನಡ ಸಾಹಿತ್ಯ ಲೋಕಕ್ಕೆ ಹೆಮ್ಮೆ ತಂದಿದ್ದರೂ, ಭುವನೇಶ್ವರಿ ತಾಯಿ ಕುರಿತು ಮುನ್ನಡೆಸಿದ ಕೆಲವು ಹೇಳಿಕೆಗಳು ವಿವಾದಕ್ಕೆ ಕಾರಣವಾಗಿವೆ.
ಇತ್ತ, ದಸರಾ ಉದ್ಘಾಟನೆಗೆ ಮುಸ್ಲಿಂ ಸಮುದಾಯದವರನ್ನು ಆಹ್ವಾನಿಸಿರುವುದಕ್ಕೆ ಬಿಜೆಪಿ ಕೆಲ ನಾಯಕರು ವಿರೋಧ ವ್ಯಕ್ತಪಡಿಸಿದ್ದು, ಈ ತಾಜಾ ಬೆಳವಣಿಗೆಗೆ ಮತ್ತಷ್ಟು ರಾಜಕೀಯ ಬಣ್ಣ ಸೇರುವ ಸಾಧ್ಯತೆ ಇದೆ.

[…] […]