ದೊಡ್ಡಬಳ್ಳಾಪುರ : ತಾಲೂಕಿನ ಮುತ್ತೂರು ಗ್ರಾಮದಲ್ಲಿ ಗಣಪತಿ ವಿಸರ್ಜನೆ ಮೆರವಣಿಗೆಯ ವೇಳೆ ಪಟಾಕಿ ಸ್ಫೋಟಗೊಂಡು ಒಬ್ಬ ವಿದ್ಯಾರ್ಥಿ ಸಾವನ್ನಪ್ಪಿದ್ದು, ಇನ್ನೂ ಆರು ಜನರಿಗೆ ಗಾಯಗಳಾಗಿವೆ.
ಸಂಜೆ 5:45ರ ಸುಮಾರಿಗೆ ನಡೆದ ಈ ದುರಂತದಲ್ಲಿ, ಗಣಪತಿಯನ್ನು ಮೆರವಣಿಗೆಗೆ ಸಾಗಿಸುತ್ತಿದ್ದ ಪವರ್ ಲಿಫ್ಟ್ ಗಾಡಿಯ ಇಂಜಿನ್ ಹತ್ತಿರ ಇಡಲಾದ ಪಟಾಕಿಗಳು ಬಿಸಿಗೆ ಸಿಡಿದು ಬ್ಲಾಸ್ಟ್ ಆಗಿವೆ. ಸ್ಫೋಟದ ಪರಿಣಾಮ ಗಾಡಿ ಅಕ್ಕಪಕ್ಕದಲ್ಲಿ ನಿಂತಿದ್ದ ತನುಷ್ ರಾವ್ (15, ಮರಾಠ ಜನಾಂಗ) ಗಂಭೀರವಾಗಿ ಗಾಯಗೊಂಡು ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.
ಗಾಯಾಳುಗಳು:
- ಗಣೇಶ್ (16, ವಿದ್ಯಾರ್ಥಿ, ಮಂಜುನಾಥನ ಪುತ್ರ)
- ಯೋಗೇಶ್ (15, ವಿದ್ಯಾರ್ಥಿ, ಮುನಿ ನಾರಾಯಣನ ಪುತ್ರ)
- ಮುನಿರಾಜು (27, ಪವರ್ ಲಿಫ್ಟ್ ಚಾಲಕ, ನಾರಾಯಣಸ್ವಾಮಿ ಪುತ್ರ)
- ನಾಗರಾಜು (35, ಪರಿಶಿಷ್ಟ ಜಾತಿ, ಪರಮೇಶ್ವರಪ್ಪ ಪುತ್ರ)
- ಚೇತನ್ ಶಾವಿ (13, ವಿದ್ಯಾರ್ಥಿ)
ಇವರಿಗೆ ವಿವಿಧ ಮಟ್ಟದ ಸುಟ್ಟ ಗಾಯಗಳಾಗಿದ್ದು, ಮಣಿಪಾಲ್ ಹಾಗೂ ಆದ್ಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅದೇ ವೇಳೆ ಬಂದೋಬಸ್ತು ಕರ್ತವ್ಯದಲ್ಲಿದ್ದ ಪೊಲೀಸ್ ಕಾನ್ಸ್ಟೇಬಲ್ ಜಾಕಿರ್ ಹುಸೇನ್ ಅವರಿಗೂ ಪಟಾಕಿ ಸಿಡಿದು ಕೈಗೆ ಸುಟ್ಟ ಗಾಯಗಳಾಗಿವೆ.
ಈ ಘಟನೆ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಆತಂಕದ ವಾತಾವರಣ ಉಂಟಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
