ಹಾಸನ, (ಆ.30): ಇಬ್ಬರ ಮಕ್ಕಳ ನಡುವಿನ ಜಗಳದ ಕಾರಣಕ್ಕೆ ತಂದೆ-ತಾಯಿಯರ ನಡುವೆ ಜಗಳಕ್ಕೆ ಕಾರಣವಾಗಿ ಓರ್ವ ಮಗುವಿನ ತಂದೆಯಿಂದ ಇನ್ನೊರ್ವ ಮಗುವಿನ ತಂದೆಯನ್ನ ಬರ್ಬರವಾಗಿ ಕೊಲೆ ಮಾಡಿದ ಆಘಾತಕಾರಿ ಘಟನೆ ಹಾಸನ ಜಿಲ್ಲೆಯ, ಅರಸೀಕೆರೆ ತಾಲೂಕಿನ ಮುಜವಾರ್ ಮೊಹಲ್ಲಾದಲ್ಲಿ ನಡೆದಿದೆ.
ತೌಫಿಕ್ (28), ದುರ್ಘಟನೆಯಲ್ಲಿ ಕೊಲೆಯಾದ ವ್ಯಕ್ತಿ. ಫರಾನ್ ಕೊಲೆಗೈದ ವ್ಯಕ್ತಿ. ಈ ಘಟನೆಯಿಂದ ತೌಫಿಕ್ನ ಕುಟುಂಬಸ್ಥರು ರೊಚ್ಚಿಗೆದ್ದು, ಆರೋಪಿ ಫರಾನ್ನ ಮನೆಯ ಮೇಲೆ ದಾಳಿ ನಡೆಸಿ, ಮನೆ ಜಖಂಗೊಳಿಸಿ ಕಾರಿಗೆ ಬೆಂಕಿ ಹಚ್ಚಿದ್ದಾರೆ.
ಪ್ರಕರಣದ ವಿವರ:
ಅರಸೀಕೆರೆ ನಗರದ ಖಾಸಗಿ ಶಾಲೆಯಲ್ಲಿ ಓದುತ್ತಿದ್ದ ತೌಫಿಕ್ ಹಾಗೂ ಫರಾನ್ನ ಮಕ್ಕಳು ಆಗಸ್ಟ್ 25 ರಂದು ಕ್ಷುಲ್ಲಕ ಕಾರಣಕ್ಕೆ ಗಲಾಟೆ ಮಾಡಿಕೊಂಡಿದ್ದರು. ಈ ವಿಷಯವೇ ತಂದೆಯರಾದ ತೌಫಿಕ್ ಮತ್ತು ಫರಾನ್ ನಡುವೆ ಗೊಂದಲಕ್ಕೆ ಕಾರಣವಾಗಿದೆ. ಕಳೆದ ನಾಲ್ಕು ದಿನಗಳ ಹಿಂದೆ ಅರಸೀಕೆರೆಯ ಬಿಎಚ್ ರಸ್ತೆಯ ಲಸ್ಸಿ ಶಾಪ್ನಲ್ಲಿ ಎದುರುಬದರಾದ ಇಬ್ಬರು, ಮಕ್ಕಳ ಜಗಳದ ವಿಷಯವನ್ನು ಮತ್ತೆ ಕೆದಕಿದ್ದಾರೆ. ಈ ವೇಳೆ ಗಲಾಟೆ ತಾರಕಕ್ಕೇರಿದ್ದು, ಫರಾನ್ ತೌಫಿಕ್ನನ್ನು ತಳ್ಳಿದ್ದಾನೆ. ಇದರಿಂದ ಮೆಟ್ಟಿಲುಗಳ ಮೇಲೆ ಬಿದ್ದ ತೌಫಿಕ್ ತೀವ್ರವಾಗಿ ಗಾಯಗೊಂಡಿದ್ದರು. ಗಾಯಗೊಂಡ ತೌಫಿಕ್ನನ್ನು ಹಾಸನದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಆಗಸ್ಟ್ 29 ರ ರಾತ್ರಿ ತೌಫಿಕ್ ಮೃತಪಟ್ಟಿದ್ದಾರೆ.
ಈ ಸಾವಿನಿಂದ ಕುಪಿತಗೊಂಡ ತೌಫಿಕ್ನ ಕುಟುಂಬಸ್ಥರು ಮತ್ತು ಸಂಬಂಧಿಕರು ಫರಾನ್ನ ಮನೆಗೆ ನುಗ್ಗಿ ದಾಂಧಲೆ ನಡೆಸಿದ್ದಾರೆ. ಹತ್ತಾರು ಮಂದಿ ಜನರು ಫರಾನ್ನ ಮನೆಯನ್ನು ಜಖಂಗೊಳಿಸಿ, ಅವರ ಕಾರಿಗೆ ಬೆಂಕಿ ಹಚ್ಚಿದ್ದಾರೆ. ಈ ಘಟನೆಯಿಂದ ಉಂಟಾದ ಉದ್ವಿಗ್ನ ಪರಿಸ್ಥಿತಿಯನ್ನು ತಡೆಗಟ್ಟಲು ಅರಸೀಕೆರೆ ನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.
ಪ್ರಕರಣದ ಕುರಿತು ಅರಸೀಕೆರೆ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ವಿಚಾರಣೆ ಮುಂದುವರಿದಿದೆ. ಈ ಘಟನೆಯಿಂದ ಮುಜವಾರ್ ಮೊಹಲ್ಲಾದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಸ್ಥಳೀಯರು ಶಾಂತಿ ಕಾಪಾಡುವಂತೆ ಪೊಲೀಸರು ಮನವಿ ಮಾಡಿದ್ದಾರೆ.

[…] […]