ನವದೆಹಲಿ: ಭಾರತ ಮತ್ತು ಅಮೆರಿಕ ನಡುವಿನ ತೆರಿಗೆ ಜಟಾಪಟಿಯ ನಡುವೆಯೇ, ಕೇಂದ್ರ ಸರ್ಕಾರ ಸರಕು ಮತ್ತು ಸೇವಾ ತೆರಿಗೆ (GST) ಕಡಿತಗೊಳಿಸುವ ನಿರ್ಧಾರ ಕೈಗೊಳ್ಳಲು ಮುಂದಾಗಿದೆ. ಶಾಂಪೂಗಳಿಂದ ಹಿಡಿದು ಹೈಬ್ರಿಡ್ ಕಾರುಗಳವರೆಗೆ ಸುಮಾರು 175 ಉತ್ಪನ್ನಗಳ ಮೇಲಿನ ತೆರಿಗೆಯನ್ನು ಕನಿಷ್ಠ ಶೇ.10ರಷ್ಟು ಇಳಿಸಲು ಚಿಂತನೆ ನಡೆಯುತ್ತಿದೆ.
ಟಾಲ್ಕಮ್ ಪೌಡರ್, ಟೂತ್ಪೇಸ್ಟ್, ಶಾಂಪೂ ಮುಂತಾದ ದೈನಂದಿನ ಬಳಕೆಯ ಗ್ರಾಹಕ ವಸ್ತುಗಳ ಮೇಲಿನ ತೆರಿಗೆ ಶೇ.18ರಿಂದ ಶೇ.5ಕ್ಕೆ ಇಳಿಸುವ ಪ್ರಸ್ತಾಪವಾಗಿದೆ. ಇದರಿಂದ ಹಿಂದೂಸ್ತಾನ್ ಯೂನಿಲಿವರ್, ಗೋದ್ರೇಜ್ ಇಂಡಸ್ಟ್ರೀಸ್ ಸೇರಿದಂತೆ ಪ್ರಮುಖ ಕಂಪನಿಗಳ ಮಾರಾಟ ಹೆಚ್ಚುವ ನಿರೀಕ್ಷೆಯಿದೆ.
ಇದೇ ವೇಳೆ ದೀಪಾವಳಿ ಶಾಪಿಂಗ್ ಹಂಗಾಮಿಯ ವೇಳೆಗೆ ಏರ್ಕಂಡೀಷನರ್ ಹಾಗೂ ಟಿವಿ ಸೆಟ್ಗಳ ಮೇಲಿನ ಜಿಎಸ್ಟಿ ಶೇ.28ರಿಂದ ಶೇ.18ಕ್ಕೆ ಇಳಿಯುವ ಸಾಧ್ಯತೆಯಿದೆ. ಇದರಿಂದ ಸ್ಯಾಮ್ಸಂಗ್, ಎಲ್ಜಿ, ಸೋನಿ ಮುಂತಾದ ಎಲೆಕ್ಟ್ರಾನಿಕ್ಸ್ ಬ್ರ್ಯಾಂಡ್ಗಳಿಗೆ ಮಾರುಕಟ್ಟೆಯಲ್ಲಿ ಹೆಚ್ಚುವರಿ ಉತ್ತೇಜನ ದೊರೆಯುವ ಸಾಧ್ಯತೆ ಇದೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ನೇತೃತ್ವದಲ್ಲಿ ಸೆಪ್ಟೆಂಬರ್ 3-4ರಂದು ನಡೆಯಲಿರುವ ಸಭೆಯಲ್ಲಿ ತೆರಿಗೆ ಕಡಿತಕ್ಕೆ ಒಳಪಡುವ ವಸ್ತುಗಳ ಅಂತಿಮ ಪಟ್ಟಿ ನಿರ್ಧಾರವಾಗಲಿದೆ.
ಆರ್ಥಿಕ ತಜ್ಞರ ಪ್ರಕಾರ, ಈ ಕ್ರಮ ದೇಶೀಯ ಬಳಕೆಯನ್ನು ಹೆಚ್ಚಿಸುವುದು, ಕೃಷಿ ಆದಾಯಕ್ಕೆ ಪೂರಕವಾಗುವುದು ಹಾಗೂ ಭಾರತೀಯ ಉತ್ಪಾದಕರ ಸ್ವಾವಲಂಬನೆಯನ್ನು ಉತ್ತೇಜಿಸುವುದು. ಜೊತೆಗೆ ಅಮೆರಿಕದೊಂದಿಗಿನ ವಾಣಿಜ್ಯ ಸಂಬಂಧಗಳಲ್ಲಿನ ಕುಸಿತವನ್ನು ನಿಯಂತ್ರಿಸುವ ಗುರಿಯನ್ನೂ ಹೊಂದಿದೆ ಎಂದು ತಿಳಿಸಲಾಗಿದೆ.
