ನವದೆಹಲಿ: ಭಾರತದಲ್ಲಿ ಕ್ಯಾನ್ಸರ್ ಪ್ರಕರಣಗಳು ಆತಂಕಕಾರಿ ಮಟ್ಟದಲ್ಲಿ ಏರಿಕೆಯಾಗುತ್ತಿದ್ದು, ಇತ್ತೀಚಿನ ವರದಿ ಪ್ರಕಾರ ಪ್ರತಿ 11 ಜನರಲ್ಲಿ ಒಬ್ಬರಿಗೆ ಕ್ಯಾನ್ಸರ್ ಬರುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. 2024ರಲ್ಲಿ ಮಾತ್ರವೇ ದೇಶದಲ್ಲಿ 15.6 ಲಕ್ಷ ಹೊಸ ಕ್ಯಾನ್ಸರ್ ಪ್ರಕರಣಗಳು ದಾಖಲಾಗಿವೆ.
ಹೆಚ್ಚು ಬಾಧಿತ ರಾಜ್ಯಗಳು
ಉತ್ತರ ಪ್ರದೇಶ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಬಿಹಾರ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಕ್ಯಾನ್ಸರ್ ಪ್ರಕರಣಗಳು ಹೆಚ್ಚು ಕಂಡುಬರುತ್ತಿದ್ದು, ಪುರುಷರಲ್ಲಿ ಶ್ವಾಸಕೋಶದ ಕ್ಯಾನ್ಸರ್ ಹಾಗೂ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಸಾಮಾನ್ಯವಾಗಿದೆ.
ಏಕೆ ಹೆಚ್ಚುತ್ತಿದೆ ಕ್ಯಾನ್ಸರ್?
ತಜ್ಞರ ಪ್ರಕಾರ, ಕ್ಯಾನ್ಸರ್ಗೆ ಕಾರಣವಾಗುವ 30-40% ಅಂಶಗಳು ಜೀವನಶೈಲಿಯಿಂದ ಸಂಬಂಧಿಸಿದವು. ತಂಬಾಕು ಸೇವನೆ, ಮದ್ಯಪಾನ, ಹಣ್ಣು-ತರಕಾರಿಗಳ ಕೊರತೆ, ಸ್ಥೂಲಕಾಯ ಮತ್ತು ವ್ಯಾಯಾಮದ ಅಭಾವವು ಅಪಾಯವನ್ನು ಹೆಚ್ಚಿಸುತ್ತಿವೆ. ಜೊತೆಗೆ, ಜನಸಂಖ್ಯೆ ಹೆಚ್ಚಳವೂ ಪ್ರಕರಣಗಳ ಏರಿಕೆಗೆ ಕಾರಣವಾಗಿದೆ.
ತಡೆಗಟ್ಟುವಿಕೆ ಮತ್ತು ಜಾಗೃತಿ
ಆರಂಭಿಕ ತಪಾಸಣೆ, ಆರೋಗ್ಯಕರ ಆಹಾರ, ನಿಯಮಿತ ವ್ಯಾಯಾಮ, ತಂಬಾಕು ಮತ್ತು ಮದ್ಯ ಸೇವನೆ ತಪ್ಪಿಸುವುದು ಹಾಗೂ ತೂಕ ನಿಯಂತ್ರಣವು ಕ್ಯಾನ್ಸರ್ ಅಪಾಯ ಕಡಿಮೆ ಮಾಡುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಸೆಲೆನಿಯಂ, ಫೋಲಿಕ್ ಆಸಿಡ್, ವಿಟಮಿನ್ ಡಿ ಮತ್ತು ಆಂಟಿಆಕ್ಸಿಡೆಂಟ್ಗಳ ಸೇವನೆಯು ರಕ್ಷಣಾತ್ಮಕ ಪರಿಣಾಮ ಬೀರುತ್ತದೆ ಎಂದು ಅಧ್ಯಯನಗಳು ಸೂಚಿಸುತ್ತವೆ.
ಮುಂದಿನ ಭವಿಷ್ಯ
2025ರ ವೇಳೆಗೆ ಭಾರತದಲ್ಲಿ ಕ್ಯಾನ್ಸರ್ ಪ್ರಕರಣಗಳು 15.7 ಲಕ್ಷಕ್ಕೆ, 2040ರ ವೇಳೆಗೆ 20 ಲಕ್ಷಕ್ಕೆ ಏರಿಕೆಯಾಗುವ ಸಾಧ್ಯತೆಯಿದೆ. ತಜ್ಞರು ಈ ಆತಂಕಕಾರಿ ಪರಿಸ್ಥಿತಿಯನ್ನು ಎದುರಿಸಲು ಸರಕಾರ, ಆರೋಗ್ಯ ಸಂಸ್ಥೆಗಳು ಮತ್ತು ಜನಸಾಮಾನ್ಯರು ಒಟ್ಟಾಗಿ ಕಾರ್ಯಚರಣೆ ಕೈಗೊಳ್ಳಬೇಕೆಂದು ಸಲಹೆ ನೀಡಿದ್ದಾರೆ.
