ಹಾಸನ: ವಿಶ್ವ ಪ್ರಸಿದ್ಧ ಮೈಸೂರು ದಸರಾ ಮಹೋತ್ಸವ ಉದ್ಘಾಟನೆಗೆ ಈ ಬಾರಿ ಬೂಕರ್ ಪ್ರಶಸ್ತಿ ವಿಜೇತ ಲೇಖಕಿ ಭಾನು ಮುಷ್ತಾಕ್ ಅವರನ್ನು ಆಹ್ವಾನಿಸಲಾಗಿದೆ. ಮೈಸೂರಿನ ದಸರಾ ಸಮಿತಿ ಬುಧವಾರ ಹಾಸನದ ಅಮೀರ್ ಮೊಹಲ್ಲಾದಲ್ಲಿರುವ ಭಾನು ಮುಷ್ತಾಕ್ ಅವರ ನಿವಾಸಕ್ಕೆ ಆಗಮಿಸಿ ಅಧಿಕೃತ ಆಹ್ವಾನ ನೀಡಿತು.
ಮೈಸೂರು ಜಿಲ್ಲಾಧಿಕಾರಿ ಲಕ್ಷ್ಮಿಕಾಂತ ರೆಡ್ಡಿ ನೇತೃತ್ವದ ತಂಡದಲ್ಲಿ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ), ಕಮಿಷನರ್ ಹಾಗೂ ಎಡಿಷನಲ್ ಡಿಸ್ಟ್ರಿಕ್ಟ್ ಕಲೆಕ್ಟರ್ (ಎಡಿಸಿ) ಸೇರಿದಂತೆ ಸಮಿತಿ ಸದಸ್ಯರು ಭಾಗವಹಿಸಿದ್ದರು. ಅವರು ಭಾನು ಮುಷ್ತಾಕ್ ಅವರಿಗೆ ಮೈಸೂರು ಪೇಟ ತೊಡಿಸಿ, ಆನೆಯ ಕಲಾಕೃತಿಯ ಸ್ಮರಣಿಕೆ ಹಾಗೂ ಅಧಿಕೃತ ಆಹ್ವಾನ ಪತ್ರಿಕೆಯನ್ನು ನೀಡಿ ಗೌರವಿಸಿದರು.
ಕುಟುಂಬ ಸಮೇತ ಆಗಮಿಸಲು ಆಹ್ವಾನ
ದಸರಾ ಸಮಿತಿಯ ಸದಸ್ಯರು ಭಾನು ಮುಷ್ತಾಕ್ ಅವರನ್ನು ಕುಟುಂಬ ಸಮೇತ ಮೈಸೂರಿಗೆ ಬಂದು ಕಾರ್ಯಕ್ರಮವನ್ನು ಉದ್ಘಾಟಿಸಲು ಮನವಿ ಮಾಡಿದರು. ಪ್ರತಿಯಾಗಿ ಭಾನು ಮುಷ್ತಾಕ್ ಅವರು ಸಮಿತಿಯ ಎಲ್ಲ ಸದಸ್ಯರಿಗೆ ತಮ್ಮ ಸಹಿ ಸಮೇತವಾಗಿ ‘ಎದೆಯ ಹಣತೆ’ ಪುಸ್ತಕವನ್ನು ಉಡುಗೊರೆಯಾಗಿ ನೀಡಿದರು.
ಬೂಕರ್ ಪ್ರಶಸ್ತಿಗೆ ಪಾತ್ರವಾದ ಕೃತಿ
ಭಾನು ಮುಷ್ತಾಕ್ ಅವರ ಕನ್ನಡ ಕಾದಂಬರಿ ಎದೆಯ ಹಣತೆ ಅನ್ನು ಇಂಗ್ಲಿಷ್ಗೆ ಹಾರ್ಟ್ ಲ್ಯಾಂಪ್ ಎಂಬ ಶೀರ್ಷಿಕೆಯಲ್ಲಿ ಅನುವಾದಿಸಲಾಯಿತು. ಈ ಅನುವಾದಿತ ಕೃತಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಬೂಕರ್ ಪ್ರಶಸ್ತಿ ಲಭಿಸಿತ್ತು.
ಈ ವರ್ಷದ ಮೈಸೂರು ದಸರಾ ಉದ್ಘಾಟನೆಗೆ ಅಂತರಾಷ್ಟ್ರೀಯ ಖ್ಯಾತಿಯ ಕನ್ನಡ ಸಾಹಿತ್ಯದ ಹೆಮ್ಮೆಯ ಧ್ವನಿಯಾಗಿರುವ ಭಾನು ಮುಷ್ತಾಕ್ ಅವರನ್ನು ಆಹ್ವಾನಿಸಿರುವುದು ಹಾಸನ ಹಾಗೂ ಕರ್ನಾಟಕದ ಸಾಹಿತ್ಯ ಪ್ರೇಮಿಗಳಿಗೆ ಹೆಮ್ಮೆಯ ವಿಷಯವಾಗಿದೆ.
