ಕಾಬೂಲ್: ಅಫ್ಘಾನಿಸ್ತಾನದಲ್ಲಿ ಇತ್ತೀಚೆಗೆ ಸಂಭವಿಸಿದ ಭೀಕರ ಭೂಕಂಪವು 2 ಸಾವಿರಕ್ಕೂ ಅಧಿಕ ಮಂದಿಯನ್ನು ಬಲಿಪಡೆದುಕೊಂಡಿದ್ದು, ಸಾವಿರಾರು ಜನರನ್ನು ಸಂಕಷ್ಟಕ್ಕೀಡುಮಾಡಿದೆ. ಈ ಪ್ರಾಕೃತಿಕ ದುರಂತದ ನಡುವೆಯೇ, ತಾಲಿಬಾನ್ ವಿಧಿಸಿರುವ ಕಠಿಣ ಲಿಂಗ ನಿಯಮಗಳಿಂದಾಗಿ ಮಹಿಳೆಯರ ರಕ್ಷಣಾ ಕಾರ್ಯಕ್ಕೆ ತೀವ್ರ ಅಡ್ಡಿಯಾಗಿದೆ.
“ಸಂಬಂಧವಿಲ್ಲದ ಪುರುಷರು ಮಹಿಳೆಯರನ್ನು ಸ್ಪರ್ಶಿಸಬಾರದು” ಎಂಬ ನಿಯಮದಿಂದಾಗಿ, ಅವಶೇಷಗಳಡಿ ಸಿಲುಕಿರುವ ಮಹಿಳೆಯರನ್ನು ರಕ್ಷಿಸಲು ಪುರುಷ ರಕ್ಷಕರು ಹಿಂಜರಿಯುತ್ತಿದ್ದು, ಅವರನ್ನು ಅಲ್ಲೇ ಸಾಯಲು ಬಿಡಲಾಗುತ್ತಿದೆ!
ತಾಲಿಬಾನ್ನ ಕಠಿಣ ನಿಯಮ
ಕಳೆದ ನಾಲ್ಕು ವರ್ಷಗಳಿಂದ ಅಫ್ಘಾನಿಸ್ತಾನದಲ್ಲಿ ಆಡಳಿತ ನಡೆಸುತ್ತಿರುವ ತಾಲಿಬಾನ್ ಜಾರಿಗೊಳಿಸಿರುವ ಕಟ್ಟುನಿಟ್ಟಿನ ಸಾಂಸ್ಕೃತಿಕ ಮತ್ತು ಧಾರ್ಮಿಕ ನಿಯಮಗಳ ಪ್ರಕಾರ, ಮಹಿಳೆಯ ತಂದೆ, ಸಹೋದರ, ಪತಿ ಅಥವಾ ಮಗನಂತಹ ಹತ್ತಿರದ ಪುರುಷ ಸಂಬಂಧಿಗಳು ಮಾತ್ರ ಆಕೆಯನ್ನು ಸ್ಪರ್ಶಿಸಬಹುದು. ಅಂತೆಯೇ, ಮಹಿಳೆಯರು ತಮ್ಮ ಕುಟುಂಬದ ಹೊರಗಿನ ಪುರುಷರನ್ನು ಸ್ಪರ್ಶಿಸುವುದನ್ನು ನಿಷೇಧಿಸಲಾಗಿದೆ. ಈ ನಿಯಮವು ರಕ್ಷಣಾ ಕಾರ್ಯಾಚರಣೆಯ ಸಂದರ್ಭದಲ್ಲಿ ಮಹಿಳೆಯರ ಪಾಲಿಗೆ ಶಾಪವಾಗಿ ಪರಿಣಮಿಸಿದೆ.
ರಕ್ಷಣಾ ಕಾರ್ಯದಲ್ಲಿ ಅಡ್ಡಿ
ಆಫ್ಘನ್ ನಲ್ಲಿ ಮಹಿಳಾ ರಕ್ಷಣಾ ಕಾರ್ಯಕರ್ತರೂ ಇಲ್ಲ. ಹಾಗಾಗಿ ಈ ನಿಯಮವು ಪರಿಸ್ಥಿತಿಯನ್ನು ಮತ್ತಷ್ಟು ಗಂಭೀರವಾಗಿಸಿದೆ. ಅನೇಕ ಸಂದರ್ಭಗಳಲ್ಲಿ, ಅವಶೇಷಗಳಡಿ ಸಿಲುಕಿರುವ ಜೀವಂತ ಮಹಿಳೆಯರನ್ನು ರಕ್ಷಿಸುವ ಬದಲು, ಸತ್ತವರನ್ನು ಮಾತ್ರ ಹೊರತೆಗೆಯಲಾಗುತ್ತಿದೆ. ಪುರುಷ ರಕ್ಷಕರು ಮೊದಲು ಪುರುಷರು ಮತ್ತು ಮಕ್ಕಳಿಗೆ ಚಿಕಿತ್ಸೆ ನೀಡುತ್ತಾರೆ, ಆದರೆ ಗಾಯಗೊಂಡ ಮಹಿಳೆಯರು ದೂರದಲ್ಲಿ ಕುಳಿತು ಆರೈಕೆಗಾಗಿ ಕಾಯುತ್ತಾರೆ ಎಂದು ಸ್ವಯಂಸೇವಕರು ಹೇಳಿದ್ದಾರೆ. ಒಂದು ವೇಳೆ ಪುರುಷ ಸಂಬಂಧಿಕರು ಇಲ್ಲದಿದ್ದರೆ, ಮಹಿಳೆಯರ ಮೃತದೇಹಗಳನ್ನು ಸಹ ಸ್ಪರ್ಶಿಸುವುದನ್ನು ತಪ್ಪಿಸಲು ಬಟ್ಟೆಯಿಂದ ಎಳೆದು ಹೊರತೆಗೆಯಲಾಗುತ್ತಿದೆ.
ಮಹಿಳಾ ಆರೋಗ್ಯ ಕಾರ್ಯಕರ್ತೆಯರ ಕೊರತೆ
ತಾಲಿಬಾನ್ ಸರ್ಕಾರವು 2023ರಲ್ಲಿ ಮಹಿಳೆಯರಿಗೆ ವೈದ್ಯಕೀಯ ಶಿಕ್ಷಣ ಮತ್ತು ಇತರ ಸಾರ್ವಜನಿಕ ಕ್ಷೇತ್ರಗಳಲ್ಲಿ ಭಾಗವಹಿಸುವುದನ್ನು ನಿಷೇಧಿಸಿದೆ. ಇದರ ಪರಿಣಾಮವಾಗಿ, ದೇಶದಲ್ಲಿ, ವಿಶೇಷವಾಗಿ ಗ್ರಾಮೀಣ ಮತ್ತು ವಿಪತ್ತು ಪೀಡಿತ ಪ್ರದೇಶಗಳಲ್ಲಿ ಮಹಿಳಾ ವೈದ್ಯರು ಮತ್ತು ದಾದಿಯರ ತೀವ್ರ ಕೊರತೆ ಉಂಟಾಗಿದೆ. ಇದು ಭೂಕಂಪದಿಂದ ಗಾಯಗೊಂಡ ಮಹಿಳೆಯರಿಗೆ ಚಿಕಿತ್ಸೆ ನೀಡುವಲ್ಲಿ ದೊಡ್ಡ ಸಮಸ್ಯೆಯನ್ನು ಸೃಷ್ಟಿಸಿದೆ.
ಮಹಿಳೆಯರ ಮೇಲಿನ ದಬ್ಬಾಳಿಕೆ
ಅಫ್ಘಾನಿಸ್ತಾನವು ಮಹಿಳೆಯರು ಮತ್ತು ಹೆಣ್ಣುಮಕ್ಕಳಿಗೆ ವಿಶ್ವದ ಅತ್ಯಂತ ದಬ್ಬಾಳಿಕೆಯ ಸ್ಥಳಗಳಲ್ಲಿ ಒಂದಾಗಿದೆ. ಹೆಣ್ಣು ಮಕ್ಕಳು ಆರನೇ ತರಗತಿಯ ನಂತರ ಶಾಲೆಗೆ ಹೋಗುವುದನ್ನು ನಿಷೇಧಿಸಲಾಗಿದೆ. ಮಹಿಳೆಯರು ಅಲ್ಪ ದೂರ ಪ್ರಯಾಣಿಸಲು ಸಹ ಪುರುಷ ಪಾಲಕರೊಂದಿಗೆ ಹೋಗಬೇಕೆಂಬ ನಿಯಮವಿದೆ. ಹೆಚ್ಚಿನ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶಗಳಿಂದಲೂ ಅವರನ್ನು ವಂಚಿತರನ್ನಾಗಿ ಮಾಡಲಾಗಿದೆ. ಈ ಭೂಕಂಪವು ತಾಲಿಬಾನ್ ಆಡಳಿತದಲ್ಲಿ ಮಹಿಳೆಯರು ಎದುರಿಸುತ್ತಿರುವ ಆಳವಾದ ಲಿಂಗ ತಾರತಮ್ಯವನ್ನು ಮತ್ತೊಮ್ಮೆ ಜಗಜ್ಜಾಹೀರು ಮಾಡಿದೆ.
