ಹಾಸನ: ಗೋವಾದಲ್ಲಿ ನವೆಂಬರ್ 17ರಿಂದ ಆರಂಭವಾಗಲಿರುವ 2026-27ನೇ ಸಾಲಿನ ಪ್ರತಿಷ್ಠಿತ ಅಖಿಲ ಭಾರತ ನಾಗರಿಕ ಸೇವಾ ಫುಟ್ಬಾಲ್ ಪಂದ್ಯಾವಳಿಗೆ (All India Civil Services Football Tournament) ಕರ್ನಾಟಕ ರಾಜ್ಯ ತಂಡದಿಂದ ಹಾಸನ ಜಿಲ್ಲೆಯ ಮೂವರು ಸರ್ಕಾರಿ ನೌಕರರು ಆಯ್ಕೆಯಾಗಿದ್ದಾರೆ. ಈ ಮೂಲಕ ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಜಿಲ್ಲೆಯನ್ನು ಪ್ರತಿನಿಧಿಸುವ ಅವಕಾಶ ಅವರಿಗೆ ಲಭಿಸಿದೆ.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿಗಳ ಆದೇಶದಂತೆ ಕರ್ನಾಟಕ ರಾಜ್ಯ ತಂಡವನ್ನು ಆಯ್ಕೆ ಮಾಡಲಾಗಿದೆ. ಹಾಸನ ಜಿಲ್ಲೆಯಿಂದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ವೇಣುಗೋಪಾಲ್ ಹಾಗೂ ಹರೀಶ್ ಕೆ. ಮತ್ತು ಪಶುಪಾಲನಾ ಇಲಾಖೆಯ ಲೋಕೇಶ್ ಹೆಚ್.ಕೆ. ಅವರು ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ನವೆಂಬರ್ 17ರಿಂದ 24ರವರೆಗೆ ಗೋವಾದ ಬಾಂಬೋಲಿಮ್ನ ಅಟಲ್ ಸ್ಟೇಡಿಯಂ ಹಾಗೂ ಫಟೋರ್ಡಾದ ಪಿಎನ್ಜೆ ಸ್ಟೇಡಿಯಂನಲ್ಲಿ ಪಂದ್ಯಾವಳಿ ನಡೆಯಲಿದೆ. ದೇಶದ ವಿವಿಧ ರಾಜ್ಯಗಳ ನಾಗರಿಕ ಸೇವಾ ತಂಡಗಳು ಈ ಪ್ರತಿಷ್ಠಿತ ಫುಟ್ಬಾಲ್ ಟೂರ್ನಿಯಲ್ಲಿ ಭಾಗವಹಿಸಲಿವೆ.
ಕರ್ನಾಟಕ ರಾಜ್ಯ ತಂಡದಲ್ಲಿ ಒಟ್ಟು 22 ಪುರುಷ ಆಟಗಾರರು, ಒಬ್ಬ ತರಬೇತುದಾರ ಹಾಗೂ ಒಬ್ಬ ವ್ಯವಸ್ಥಾಪಕರು ಸೇರಿದಂತೆ 24 ಸದಸ್ಯರ ತಂಡ ಪಾಲ್ಗೊಳ್ಳಲಿದೆ.
ಸರ್ಕಾರಿ ಕರ್ತವ್ಯಗಳ ನಡುವೆಯೂ ಕ್ರೀಡಾಸಕ್ತಿಯನ್ನು ಬೆಳೆಸಿಕೊಂಡು ರಾಜ್ಯ ತಂಡಕ್ಕೆ ಆಯ್ಕೆಯಾಗಿರುವ ಹಾಸನದ ಮೂವರು ನೌಕರರ ಸಾಧನೆ ಜಿಲ್ಲೆಯ ಕ್ರೀಡಾ ವಲಯದಲ್ಲಿ ಸಂತಸ ಮೂಡಿಸಿದೆ. ಇವರ ಆಯ್ಕೆಗೆ ಇಲಾಖಾ ಸಿಬ್ಬಂದಿ ಹಾಗೂ ಕ್ರೀಡಾಭಿಮಾನಿಗಳು ಅಭಿನಂದನೆ ಸಲ್ಲಿಸಿದ್ದಾರೆ.
