ಬೆಂಗಳೂರು: ಕ್ಯಾನ್ಸರ್ ಶೀಘ್ರ ಪತ್ತೆಯಾದಷ್ಟೂ ಚಿಕಿತ್ಸೆ ಪರಿಣಾಮಕಾರಿಯಾಗುತ್ತದೆ ಎಂದು ವೈದ್ಯರು ಹೇಳಿದ್ದಾರೆ. ವಿಶೇಷವಾಗಿ ಸ್ತನ ಕ್ಯಾನ್ಸರ್ 1, 2 ಅಥವಾ 3ನೇ ಹಂತದಲ್ಲೇ ಪತ್ತೆಯಾದರೆ ಬದುಕುಳಿಯುವ ಸಾಧ್ಯತೆಗಳು ಗಣನೀಯವಾಗಿ ಹೆಚ್ಚಾಗುತ್ತವೆ. ಇದಕ್ಕಾಗಿ ಮಹಿಳೆಯರು ತಮ್ಮ ದೇಹದಲ್ಲಿ ನಡೆಯುವ ಬದಲಾವಣೆಗಳಿಗೆ ಎಚ್ಚರಿಕೆಯಿಂದ ಗಮನಿಸಬೇಕು ಎಂದು ವೈದ್ಯರು ಸಲಹೆ ನೀಡುತ್ತಾರೆ.
ದೆಹಲಿ ಬಿಎಲ್ಕೆ ಮತ್ತು ಮ್ಯಾಕ್ಸ್ ಆಸ್ಪತ್ರೆಯ ರೇಡಿಯೇಶನ್ ಆಂಕೊಲಾಜಿ ಹಾಗೂ ಆಂಕೊಸರ್ಜರಿ ವಿಭಾಗದ ಹಿರಿಯ ಸಲಹೆಗಾರ್ತಿ ಡಾ. ಗರಿಮಾ ಸಿಂಗ್ ಅವರ ಪ್ರಕಾರ, ಸ್ತನ ಕ್ಯಾನ್ಸರ್ನ ಪ್ರಾಥಮಿಕ ಲಕ್ಷಣಗಳನ್ನು ಮನೆಯಲ್ಲಿಯೇ ಸ್ವಯಂ ಪರೀಕ್ಷೆ ಮೂಲಕ ಪತ್ತೆಹಚ್ಚಬಹುದು. ಮಹಿಳೆಯರು ಪ್ರತಿ ತಿಂಗಳು ಒಮ್ಮೆ ಈ ಪರೀಕ್ಷೆಯನ್ನು ಮಾಡುವುದು ಉತ್ತಮ.
ಅಮೆರಿಕನ್ ಕಾಲೇಜ್ ಆಫ್ ಅಬ್ಸ್ಟೆಟ್ರಿಷಿಯನ್ಸ್ ಮತ್ತು ಗೈನಕಾಲಜಿಸ್ಟ್ ಸಂಸ್ಥೆಗಳು ಈ ಸ್ವಯಂ ಪರೀಕ್ಷೆಯನ್ನು ಶಿಫಾರಸು ಮಾಡದಿದ್ದರೂ, ನಿಯಮಿತ ಪರೀಕ್ಷೆಯಿಂದ ಚರ್ಮದ ಕ್ಯಾನ್ಸರ್ ಹಾಗೂ ವೃಷಣ ಕ್ಯಾನ್ಸರ್ ಮುಂತಾದ ರೋಗಗಳ ಪತ್ತೆ ಮಾಡಲು ಸಹಕಾರಿಯಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಸ್ತನ ಕ್ಯಾನ್ಸರ್ ಪತ್ತೆ ಮಾಡುವ ಹಂತಗಳು
1. ಕನ್ನಡಿಯ ಮುಂದೆ ಪರಿಶೀಲನೆ
ನಿಮ್ಮ ಕೈಗಳನ್ನು ಸೊಂಟದ ಮೇಲೆ ಇಟ್ಟು, ನೇರವಾಗಿ ನಿಂತು ಕನ್ನಡಿಯಲ್ಲಿ ನಿಮ್ಮ ಸ್ತನಗಳ ಗಾತ್ರ, ಆಕಾರ ಹಾಗೂ ಬಣ್ಣದಲ್ಲಿ ಏನಾದರೂ ಬದಲಾವಣೆಗಳಿದ್ದರೆ ಗಮನಿಸಿ.
2. ಕೈಗಳನ್ನು ತಲೆಯ ಮೇಲೆ ಎತ್ತಿ ಪರೀಕ್ಷೆ
ಕೈಗಳನ್ನು ತಲೆಯ ಮೇಲೆ ಎತ್ತಿ, ಬೆರಳುಗಳಿಂದ ಸ್ತನವನ್ನು ವೃತ್ತಾಕಾರದ ಚಲನೆಯಲ್ಲಿ ಒತ್ತಿ. ಯಾವುದೇ ಗಡ್ಡೆ ಅಥವಾ ನೋವು ಇದ್ದೇನು ಎಂದು ಪರಿಶೀಲಿಸಿ.
3. ಸಂಪೂರ್ಣ ಸ್ತನ ಪರಿಶೀಲನೆ
ಕಂಕುಳಿನಿಂದ ಹೊಟ್ಟೆಯ ಮೇಲ್ಭಾಗದವರೆಗೆ, ಕಾಲರ್ಬೋನ್ನಿಂದ ಸೀಳಿನವರೆಗೆ ಸ್ತನವನ್ನು ಸಣ್ಣಸಣ್ಣ ಭಾಗಗಳಲ್ಲಿ ಒತ್ತಿ ಪರಿಶೀಲಿಸಬೇಕು. ಇದನ್ನು ನಿಂತು ಹಾಗೂ ಕುಳಿತುಕೊಂಡು ಎರಡೂ ರೀತಿಯಲ್ಲಿ ಮಾಡಬೇಕು.
4. ಒತ್ತಡದ ಪ್ರಮಾಣ ಬದಲಾವಣೆ
- ಚರ್ಮದ ಮೇಲಿನ ಭಾಗಗಳನ್ನು ಲಘು ಒತ್ತಡದಿಂದ ಪರಿಶೀಲಿಸಿ.
- ಮಧ್ಯಮ ಅಂಗಾಂಶಗಳನ್ನು ಮಧ್ಯಮ ಒತ್ತಡದಿಂದ ಪರಿಶೀಲಿಸಿ.
- ಆಳವಾದ ಅಂಗಾಂಶಗಳಿಗೆ ಬಲವಾದ ಒತ್ತಡ ನೀಡಬೇಕು.
ಪರಿಶೀಲನೆ ವೇಳೆ ಗಮನಿಸಬೇಕಾದ ಲಕ್ಷಣಗಳು
- ಸ್ತನದ ಗಾತ್ರ, ಆಕಾರ ಅಥವಾ ಬಣ್ಣದಲ್ಲಿ ಬದಲಾವಣೆ.
- ಚರ್ಮದಲ್ಲಿ ಗಾಯ, ಸುಕ್ಕು, ಉಬ್ಬು ಅಥವಾ ದದ್ದು ಕಾಣಿಸಿಕೊಳ್ಳುವುದು.
- ಮೊಲೆತೊಟ್ಟಿನ ಸ್ಥಿತಿಯಲ್ಲಿ ಬದಲಾವಣೆ ಅಥವಾ ಒಳಮುಖವಾಗಿ ಮುಳುಗುವುದು.
- ನೋವಿಲ್ಲದ ಗಡ್ಡೆ ಕಂಡುಬರುವುದು.
ಅಸಾಮಾನ್ಯತೆ ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ
ಈ ಲಕ್ಷಣಗಳಲ್ಲಿ ಯಾವುದಾದರೂ ಕಂಡುಬಂದರೆ ತಕ್ಷಣ ಸ್ತ್ರೀರೋಗ ತಜ್ಞರನ್ನು ಸಂಪರ್ಕಿಸಬೇಕು. ವೈದ್ಯರು ದೈಹಿಕ ಪರೀಕ್ಷೆ, ಅಲ್ಟ್ರಾಸೌಂಡ್, ಮ್ಯಾಮೋಗ್ರಫಿ ಹಾಗೂ CA15.3 ಪರೀಕ್ಷೆ ಮೂಲಕ ಕ್ಯಾನ್ಸರ್ನ ಹಂತವನ್ನು ನಿರ್ಧರಿಸುತ್ತಾರೆ.
ವೈದ್ಯರ ಸಲಹೆ:
ಪ್ರತಿ ತಿಂಗಳು ಸ್ವಯಂ ಪರೀಕ್ಷೆ ಮಾಡುವುದರೊಂದಿಗೆ, ವರ್ಷಕ್ಕೊಮ್ಮೆ ವೈದ್ಯಕೀಯ ಪರೀಕ್ಷೆ ಮಾಡಿಸುವುದು ಅತ್ಯಂತ ಮುಖ್ಯ. ಶೀಘ್ರ ಪತ್ತೆಯಾದ ಕ್ಯಾನ್ಸರ್ನ ಚಿಕಿತ್ಸೆಯ ಫಲಿತಾಂಶ ಉತ್ತಮವಾಗಿರುತ್ತದೆ.
– ವರದಿ: ಆರೋಗ್ಯ ಡೆಸ್ಕ್
