ನವದೆಹಲಿ: ದೇಶದ ನೂತನ ಉಪರಾಷ್ಟ್ರಪತಿಯಾಗಿ ಸಿ.ಪಿ. ರಾಧಾಕೃಷ್ಣನ್ ಇಂದು ಬೆಳಿಗ್ಗೆ ಪ್ರಮಾಣ ವಚನ ಸ್ವೀಕರಿಸಿದರು. ರಾಷ್ಟ್ರಪತಿ ಭವನದಲ್ಲಿ ಬೆಳಿಗ್ಗೆ 10 ಗಂಟೆಗೆ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರಾಧಾಕೃಷ್ಣನ್ ಅವರಿಗೆ ಪ್ರಮಾಣ ವಚನ ಬೋಧಿಸಿದರು.
ಇತ್ತೀಚೆಗೆ ನಡೆದ ಉಪರಾಷ್ಟ್ರಪತಿ ಚುನಾವಣೆಯಲ್ಲಿ ರಾಧಾಕೃಷ್ಣನ್ ಅವರು ಜಂಟಿ ವಿರೋಧ ಪಕ್ಷದ ಅಭ್ಯರ್ಥಿ ಬಿ. ಸುದರ್ಶನ್ ರೆಡ್ಡಿ ಅವರನ್ನು ಸೋಲಿಸಿ ಗೆಲುವು ಸಾಧಿಸಿದ್ದರು. ಜುಲೈ 21ರಂದು ಮಾಜಿ ಉಪಾಧ್ಯಕ್ಷ ಜಗದೀಪ್ ಧಂಖರ್ ಅವರ ಅಕಸ್ಮಿಕ ರಾಜೀನಾಮೆಯ ಹಿನ್ನೆಲೆಯಲ್ಲಿ ಚುನಾವಣೆಯನ್ನು ನಡೆಸಲಾಗಿತ್ತು.
ಚುನಾವಣೆಯಲ್ಲಿ ಎನ್ಡಿಎ ಅಭ್ಯರ್ಥಿ ರಾಧಾಕೃಷ್ಣನ್ 452 ಮತಗಳನ್ನು ಪಡೆದರೆ, ವಿರೋಧ ಪಕ್ಷದ ಅಭ್ಯರ್ಥಿ ಸುದರ್ಶನ್ ರೆಡ್ಡಿ 300 ಮತಗಳನ್ನು ಪಡೆದರು.
ಫಲಿತಾಂಶ ಘೋಷಣೆಯ ನಂತರ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ರಾಧಾಕೃಷ್ಣನ್ ಅವರಿಗೆ ಅಭಿನಂದನೆ ಸಲ್ಲಿಸಿ, “ಹೊಸದಾಗಿ ಆಯ್ಕೆಯಾದ ಉಪರಾಷ್ಟ್ರಪತಿ ಭಾರತದ ಸಾಂವಿಧಾನಿಕ ಮೌಲ್ಯಗಳನ್ನು ಮತ್ತಷ್ಟು ಬಲಪಡಿಸಿ, ಸಂಸದೀಯ ಸಂವಾದಕ್ಕೆ ಸಕಾರಾತ್ಮಕ ಕೊಡುಗೆ ನೀಡುತ್ತಾರೆ” ಎಂಬ ವಿಶ್ವಾಸ ವ್ಯಕ್ತಪಡಿಸಿದರು.
