ಬೆಂಗಳೂರು: ಸರ್ಕಾರಿ ಶಾಲೆ ಮತ್ತು ಕಾಲೇಜುಗಳಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿನಿಯರ ಉನ್ನತ ಶಿಕ್ಷಣಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ದೀಪಿಕಾ ವಿದ್ಯಾರ್ಥಿ ವೇತನ ಯೋಜನೆನ್ನು ರಾಜ್ಯ ಸರ್ಕಾರ ಹಾಗೂ ಅಜೀಂ ಪ್ರೇಮ್ಜಿ ಫೌಂಡೇಶನ್ ಸಹಯೋಗದಲ್ಲಿ ಪ್ರಾರಂಭಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಶುಕ್ರವಾರ ನಡೆದ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ಯೋಜನೆಯಡಿ ವಿದ್ಯಾರ್ಥಿನಿಯರಿಗೆ ಪ್ರತಿವರ್ಷ ರೂ.30,000ರಷ್ಟು ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತಿದ್ದು, ಪದವಿ ಕೋರ್ಸ್ ಪೂರ್ಣಗೊಳ್ಳುವವರೆಗೆ ನೆರವು ದೊರೆಯಲಿದೆ ಎಂದರು. ಈ ವರ್ಷ ರಾಜ್ಯದ 37,000 ವಿದ್ಯಾರ್ಥಿನಿಯರು ಈ ಯೋಜನೆಯ ಲಾಭ ಪಡೆಯಲಿದ್ದಾರೆ.
ಮುಖ್ಯಮಂತ್ರಿ ಹೇಳಿದರು, “ವಿದ್ಯಾರ್ಥಿನಿಯರು ದೀಪಿಕಾ ವೇತನ ಪಡೆಯಲು ಹತ್ತನೇ ತರಗತಿ ಮತ್ತು ಪಿಯುಸಿ ಸರ್ಕಾರಿ ಶಾಲೆ ಹಾಗೂ ಕಾಲೇಜುಗಳಲ್ಲಿ ಪೂರೈಸಿರಬೇಕು. ಪ್ರತಿವರ್ಷ ಉತೀರ್ಣರಾಗುವುದು ಕಡ್ಡಾಯ,” ಎಂದರು.
ಸಮಾಜದಲ್ಲಿ ಮಹಿಳೆಯರು ಅಕ್ಷರಸಂಸ್ಕಾರದಿಂದ ವಂಚಿತರಾಗಿರುವುದನ್ನು ಉಲ್ಲೇಖಿಸಿದ ಅವರು, “ಹೆಣ್ಣುಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಶಿಕ್ಷಣ ಪಡೆದು ಸ್ವಾವಲಂಬಿಗಳಾಗಬೇಕು. ಶಿಕ್ಷಣದ ಮೂಲಕ ಬಾಲ್ಯವಿವಾಹ, ಬಾಲಕಾರ್ಮಿಕತೆ, ಪೋಕ್ಸೋ ಸೇರಿದಂತೆ ಹಲವು ಸಮಸ್ಯೆಗಳನ್ನು ತಡೆಗಟ್ಟಬಹುದು,” ಎಂದು ಹೇಳಿದರು.
ಅಜೀಂ ಪ್ರೇಮ್ಜಿ ಫೌಂಡೇಶನ್ ಕೈಗೊಂಡಿರುವ ಜನಪರ ಕಾರ್ಯಗಳನ್ನು ಪ್ರಶಂಸಿಸಿದ ಅವರು, “ಹಿಂದಿನ ವರ್ಷ ಮಕ್ಕಳಿಗೆ ಮೊಟ್ಟೆ ಪೂರೈಕೆ ಯೋಜನೆಗೆ 1,500 ಕೋಟಿ ರೂ.ಗಳ ಒಡಂಬಡಿಕೆ ಮಾಡಿಕೊಂಡಿದ್ದೇವೆ. ಈ ವರ್ಷ ಉನ್ನತ ಶಿಕ್ಷಣ ಪಡೆಯುವ ಹೆಣ್ಣುಮಕ್ಕಳಿಗೆ ನೆರವು ನೀಡಲು ಫೌಂಡೇಶನ್ ಮುಂದೆ ಬಂದಿದೆ,” ಎಂದು ಸಂತೋಷ ವ್ಯಕ್ತಪಡಿಸಿದರು.
ಸಮಾಜದ ಅಸಮಾನತೆ ನಿವಾರಣೆಗೆ ವೈಜ್ಞಾನಿಕ ಶಿಕ್ಷಣ ಅಗತ್ಯವಿದೆ ಎಂದು ತಿಳಿಸಿದ ಸಿದ್ದರಾಮಯ್ಯ, “ಬಸವಣ್ಣ, ಅಂಬೇಡ್ಕರ್, ಮಹಾತ್ಮಾ ಗಾಂಧೀಜಿ ಕನಸಾದ ಸಮಸಮಾಜ ನಿರ್ಮಾಣಕ್ಕೆ ಶಿಕ್ಷಣವೇ ಮೂಲ ಆಧಾರ,” ಎಂದು ಹೇಳಿದರು.
