ತುಮಕೂರು:ಅಧಿಕಾರಿ,ನೌಕರ,ಪೌರಕಾರ್ಮಿಕ ಈ ರೀತಿಯ ಬೇಧಭಾವ ಹೋಗಿ,ಪೌರಕಾರ್ಮಿಕರನ್ನು ಗೌರವದಿಂದ ಕಾಣುವ,ಅವರ ವೃತ್ತಿ ಘನತೆಯನ್ನು ಎತ್ತಿಹಿಡಿಯುವ ಕೆಲಸ ಆಗಬೇಕು ಎಂದು ತುಮಕೂರು ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್ ಅಭಿಪ್ರಾಯ ಪಟ್ಟಿದ್ದಾರೆ.
ನಗರದ ಪಾಲಿಕೆ ಆವರಣದಲ್ಲಿ ತುಮಕೂರು ನಗರಪಾಲಿಕೆ ವತಿಯಿಂದ ಆಯೋಜಿಸಿದ್ದ ಪೌರಕಾರ್ಮಿಕರ ದಿನಾಚರಣೆ, ಪೌರಕಾರ್ಮಿಕರಿಗೆ ಸನ್ಮಾನ ಹಾಗು ಪ್ರತಿಭಾ ಪುರಸ್ಕಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು,ನಗರದ ಮಲೀನ ತೊಳೆಯುವ ಪೌರಕಾರ್ಮಿಕರನ್ನು ನಮ್ಮಂತೆಯೇ ಮನುಷ್ಯರು ಎಂಬ ಸತ್ಯವನ್ನು ಇದು ನನ್ನನ್ನು ಸೇರಿದಂತೆ ಎಲ್ಲರೂ ಅರಿತು ನಡೆದಾಗ ಮಾತ್ರ ಇಂತಹ ದಿನಾಚರಣೆಗಳಿಗೆ ಅರ್ಥ ಬರಲು ಸಾಧ್ಯ ಎಂದರು.
ನರೇಂದ್ರ ಮೋದಿ ಅವರು ಅಕ್ಟೋಬರ್ 02ನ್ನು ಸ್ವಚ್ಛತಾ ದಿನವನ್ನಾಗಿ ಘೋಷಿಸಿ, ಪೌರಕಾರ್ಮಿಕರ ಘನತೆಯನ್ನು ಎತ್ತಿ ಹಿಡಿದಿದ್ದಾರೆ.ಸ್ವಚ್ಛತಾ ಕಾರ್ಯದಲ್ಲಿ ತೊಡಗಿರುವ ಪೌರಕಾರ್ಮಿಕರು ಆನಾರೋಗ್ಯದಿಂದ ಸಾವನ್ನಪ್ಪುವ ಸಾಧ್ಯತೆ ಹೆಚ್ಚಿದ್ದು, ಪೌರಕಾರ್ಮಿಕರು ತಮ್ಮ ಕೆಲಸದಲ್ಲಿ ತೊಡಗುವಾಗ ಸುರಕ್ಷತಾ ಮುಂಜಾಗ್ರತಾ ಸಲಕರಣೆಗಳಾದ ಬೂಟು,ಗ್ಲೌಸ್,ಮಾಸ್ಕ್ ಬಳಸುವುದನ್ನು ಮರೆಯ ಬಾರದು.ಚರಂಡಿ,ಮ್ಯಾನ್ ಹೋಲ್ಗಳಲ್ಲಿ ಕೆಲಸ ಮಾಡುವ ಪೌರಕಾರ್ಮಿಕರು ಅತಿ ಎಚ್ಚರಿಕೆಯನ್ನು ವಹಿಸಬೇಕೆಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪಾಲಿಕೆ ಆಯುಕ್ತರಾದ ಅಶ್ವಿಜ ಮಾತನಾಡಿ ತುಮಕೂರು ನಗರ ಗಿನ್ನಿಸ್ ವರ್ಲ್ಡ್ ರೇಕಾರ್ಡ್ನಲ್ಲಿ ದಾಖಲಾಯಿತು.ಪೌರಕಾರ್ಮಿಕರಿಲ್ಲದ ನಗರವನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ.ಪೌರಕಾರ್ಮಿಕರಿಗಾಗಿ ಪಾಲಿಕೆ ವತಿಯಿಂದ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದೇವೆ.52 ಮನೆಗಳ ನಿರ್ಮಾಣ ಮಾಡಲಾಗಿದೆ.ಪೌರಕಾರ್ಮಿಕರ ಗೃಹ ಭಾಗ್ಯ ಯೋಜನೆಯಡಿ ಮನೆಗಳ ನಿರ್ಮಿಸಲು ಅವಕಾಶ ನೀಡಿದ್ದು, ಅನುದಾನ ಸಹ ಸರಕಾರದಿಂದ ಬಂದಿದೆ.ಶೀಘ್ರದಲ್ಲಿಯೇ ಪೌರಕಾರ್ಮಿಕರಿಗೆ ಆರೋಗ್ಯ,ಜೀವ ಹಾಗೂ ಅಪಘಾತ ವಿಮೆ ಎಲ್ಲವನ್ನು ಒಟ್ಟಿಗೆ ಮಾಡಿಸಲು ಬೃಹತ್ ಯೋಜನೆ ರೂಪಿಸಲಾಗಿದೆ.ಕಲೆ,ಸಾಹಿತ್ಯ, ಕ್ರೀಡೆ ಎಲ್ಲದರಲ್ಲಿಯೂ ನಮ್ಮ ಪೌರಕಾರ್ಮಿಕರು ಮುಂದಿದ್ದಾರೆ. ಸ್ವಾತಂತ್ರ ದಿನಾಚರಣೆ ಪೇರೆಡ್ನಲ್ಲಿಯೂ ಇಡೀ ಕರ್ನಾಟಕದಲ್ಲಿಯೇ ಮೊದಲ ಬಾರಿಗೆ ತುಮಕೂರು ಪೌರಕಾರ್ಮಿಕರು ಭಾಗಿಯಾಗಿ ದಾಖಲೆ ಮಾಡಿದ್ದಾರೆ.ನಗರದ ಸ್ವಚ್ಚತೆಯ ಜೊತೆಗೆ, ನಿಮ್ಮ ಆರೋಗ್ಯದ ಕಡೆಗೂ ಗಮನ ನೀಡಿ, ಸುರಕ್ಷತಾ ಸಾಧನಗಳ ಬಗ್ಗೆ ನಿರ್ಲಕ್ಷ ಬೇಡ ಎಂದು ಆಯುಕ್ತರಾದ ಅಶ್ವಿಜ ಸಲಹೆ ನೀಡಿದರು.
ವೇದಿಕೆಯಲ್ಲಿ ಪಾಲಿಕೆಯ ಇಇಗಳಾದ ಬಿ.ಜಿ.ವಿನಯ್ಕುಮಾರ್, ಕೆ.ಎಸ್.ಸಂದೀಪ್.ಸುರೇಶಕುಮಾರ್,ಪ್ರವೀಣಕುಮಾರ್, ಆರೋಗ್ಯಾಧಿಕಾರಿ ಡಾ.ಯೋಗೀಶ್, ನಗರ ಯೋಜನಾಧಿಕಾರಿ ಸಂಗಪ್ಪ, ಪೌರಕಾರ್ಮಿಕರ ಸಂಘದ ಅಧ್ಯಕ್ಷ ಪ್ರಸನ್ನಕುಮಾರ್, ಸೇರಿದಂತೆ ಪೌರಕಾರ್ಮಿಕರು ಪಾಲ್ಗೊಂಡಿದ್ದರು.
ವರದಿ : ಕೆ ಬಿ ಚಂದ್ರಚೂಡ್
