ನಡು ರಾತ್ರಿಗಳಲ್ಲಿ ನಕ್ಷತ್ರಗಳ ಎಣಿಸುತ್ತಾ ತಾರಸಿಯ ಮೇಲೆ ಮಲಗಿದ್ದಾಗ ಇದ್ದಕ್ಕಿದ್ದಂತೆ ಧುತ್ತನೆ ಮುಕುರಿದ ಆ ನೆನಪುಗಳ ಜೊತೆ ಸಾಗಿ ಹೋದಂತೆ ನನ್ನಂತೇ ನಾ ಮೈ ಮರೆತೆ. ನನ್ನೂರು , ಓಡಾಡಿದ ಜಾಗಗಳು , ಸಣ್ಣ ಪುಟ್ಟ ಜಗಳಗಳು , ಗಲ್ಲಿ ಗಲ್ಲಿಗಳಲ್ಲಿ ತಿರುಗಿದ್ದು , ಶಾಲೆಗೆ ಚಕ್ಕರ್ ಹೊಡೆದಿದ್ದು , ಮಾಸ್ತರರಿಂದ ಪೆಟ್ಟು ತಿಂದಿದ್ದು . ಓಹ್!! ಅದೆಷ್ಟು ಸುಂದರ ಆ ದಿನಗಳು. ಕಾಲ ಕ್ರಮಿಸಿದಂತೆ ನೆನಪುಗಳೂ ಅವುಗಳೊಂದಿಗೆ ಮರೆಯಾಗಿ ಹೋಗಿತ್ತು. ಎಲ್ಲೋ ಒಮ್ಮೆ ಯಾರದೋ ಮನೆಯ ಮಾವಿನ ಮರದಲ್ಲಿ ಬಿಟ್ಟ ಹೀಚು ಮಾವನ್ನು ಕದ್ದು ತಿಂದಿದ್ದು ಈಗ ಮಾವಿನ ಕಾಯಿ ಮನೆಗೆ ತಂದಾಗೆಲ್ಲಾ ಮುಖದಲ್ಲಿ ಮಂದಹಾಸ ತನಗೆ ತಾನೇ ಮೂಡುವುದು.
ಅಂಟಿಕೊಂಡ ವಯೋ ಸಹಜ ಕಾಯಿಲೆ ಗಳು ಮುದುರಿಕೊಂಡ ಚರ್ಮ*
ಯಾವ ಯಾವುದೋ ಅರ್ಥವಿಲ್ಲದ ಆಲೋಚನೆಗಳು
ಸಹಜತೆಯೊಂದಿಗಿನ ಅಸಹಜತೆ
ಏನೋ ನಿರಾಸೆ ! ಏನೋ ಕಳವಳ !
ಇಂತಿಷ್ಟು ಕಾಣದ ನೆಮ್ಮದಿ
ನಾಣ್ಣುಡಿಯಂತೆ ಬಡವಾ ನೀ ಮಡಗ್ದಂಗಿರು ಎಂದು ಇರಲಾರದೆ ಇದ್ದು ಹೋಗಲಾರದೆ ಚಡಪಡಿಸುವುದು. ಯಾಕೋ ಏನೋ ಸಮಯ ಕಳೆದರೂ ಕಾಲನ ಕರೆ ಬರಲೊಲ್ಲದು. ಅವನಿಗೂ ಇಂತಿಷ್ಟು ಎಂಬ ಕೆಲಸವಿರುತ್ತದಲ್ಲ. ಕಾಯಲೇ ಬೇಕು. ಅರಿವಿರಲೇ ಬೇಕು ಇದೆಲ್ಲಾ. ಹೋಗಲು ಪ್ರಯತ್ನಿಸುವುದು ವ್ಯರ್ಥ ಪ್ರಯತ್ನ.
ದಾರಿ ಹೋಕನೊಬ್ಬನ ಕರೆದು ಮಾತಿಗಿಳಿದರೂ ಅವನ ಕೆಲಸದ ತರಾತುರಿಯಲ್ಲಿ ಸಿಡಿಮಿಡಿ . ಅವನದು ತಪ್ಪಲ್ಲ. ಇದೇನಿದ್ದರೂ ಇರುವಷ್ಟು ದಿನ ಇದ್ದು , ಸೇರಿದಷ್ಟು ತಿಂದು ಎಂಬಂತಿರಬೇಕು. ಹಾಳು ಮರೆವು ಸರಿಯಾಗಿ ಕೆಲಸವೂ ಸಾಗುವುದಿಲ್ಲ.
ಅಂದು ಯಾರೋ ಒಬ್ಬ ಕಿಚಾಯಿಸಿದ್ದು ಅವನ ತಲೆಗೆ ಎಡೆಬಿಡದೆ ಚಚ್ಚಿ ಓಡಿಸಿದ್ದು ನಂತರ ಗೆಳತಿಯರೊಂದಿಗೆ ಕಿಲಕಿಲ ನಕ್ಕಿದ್ದು ಇಂದು ಅವೆಲ್ಲಾ ಸವಿ ನೆನಪುಗಳು.
ಮನೆ ಮುಂದೆ ತರಕಾರಿಯವ ಬಂದಾಗ ಅವನಿಗೆ ಕಾಣದಂತೆ ಕ್ಯಾರೆಟ್ ಎಗರಿಸಿದ್ದು ಆದರೂ ಅವ ಕಂಡು ಹಿಡಿದು ಬೈದಾಗ ಅಮ್ಮನ ಕೈಯಲ್ಲಿ ಒದೆ ತಿಂದು ಅಷ್ಟುದ್ದ ಬೈಸಿಕೊಂಡದ್ದು ಒಂದು ರೀತಿ ಕಾಡುವುದು.
ಮೂಲೆ ಮನೆ ತಾಯವ್ವಳ ಮುಖ ಅದೇಕೋ.. ಏನೋ.. ಕಂಡೂ ಕಾಣದಂತೆ ನೆನಪುಗಳು. ಅವಳೊಂದಿಗಿನ ಮಾತುಕತೆ ಅಷ್ಟಕ್ಕಷ್ಟೇ. ಆದರೂ ಯಾಕೋ ಕನಸಿನಂತೆ ಕಾಡುವಳು. ಅವಳಿಗೆ ನನ್ನಿಂದ ಯಾವ ರೀತಿಯ ಸ್ನೇಹ ಬಂದವೂ ಇರಲಿಲ್ಲ. ಕಂಡಾಗ ತುಟಿ ಬಿರಿದಿದ್ದಷ್ಟೇ. ಅವಳ್ಯಾಕೆ ಆವಾಗಾವಾಗ ನೆನಪಿಗೆ ಬರುವಳು..??
ಯಾರದೋ ಮದುವೆಯಲ್ಲಿ ರೇಷಿಮೆ ಲಂಗ ತೊಟ್ಟು ಓಡಾಡುವಾಗ ತನಗರಿವಿಲ್ಲದೇ ತನ್ನ ಹಿಂದೆ ಸುತ್ತುತ್ತಿದ್ದ ಯುವಕನ ಕಂಡು ಅಮ್ಮ ತನ್ನನ್ನು ಮೂಲೆಗೆ ಸೇರಿಸಿ ಬಡಿದಾಗ ಏನೂ ತೋಚದೆ ಗೊಂದಲಕ್ಕೀಡಾದುದು. ಇಂದಿಗೂ ನೆನಪಿದೆ . ತಾನಾಗ ಸುಂದರಿಯರ ಸಾಲಿಗೆ ಸೇರಿದ್ದೆನೆಂಬುದು. ಈಗಲೂ ಕನ್ನಡಿ ಮುಂದೆ ನಿಂತಾಗ ಅದೇ ಮುಖದೊಂದಿಗೆ ಹೋಲಿಕೆ ಮಾಡಿಕೊಳ್ಳುವುದು. ನೆರಿಗೆಗಟ್ಟಿದ ಮುಖದಲ್ಲಿನ ಕೊಂಚ ಆಯಾಸ ಬಿಟ್ಟರೆ ಅಂದಿನ ಚೆಲುವೇ ಕಾಣುವುದು. ಸುಳ್ಳೆನಿಸಿದರೂ ಅದರೊಂದಿಗಿನ ಬದುಕೇ ಚೆಂದ.
ಆದರೂ…, ಅದರೊಂದಿಗಿನ ಆಚೆ ಏನೋ…. ಇದೆ ಎಂಬ ತುಡಿತವಿದೆ. ಏನು..?? ನೀರಸ!! ಊಹೂಂ! ಅಲ್ಲ. ಮುಂದಿನ ತಳ್ಳಾಟದ ಬದುಕಿಗೆ ನೀರಸ ಜೀವನ , ನೆನಪಿನ ಜೊತೆಗಿನ ಜೀವನ ಸಲ್ಲದು. ಏನೋ ಬೇಕು.. ಅಂದರೆ..?? ಈ ಜಡತ್ವ ಸರಿಸಿ ಬೇರೆ ಯಾವುದಾದರೂ ಹವ್ಯಾಸ ರೂಢಿಸಿಕೊಂಡರೆ ಚೆನ್ನಿತ್ತು. ಏನು ಏನದು ಹವ್ಯಾಸ. ನಾನು ಚಿಕ್ಕಂದಿನಲ್ಲಿ ಕಲಿತ ಕಸೂತಿ. ಆಗದು. ತನಗೀಗ ಸರಿಯಾಗಿ ಕಣ್ಣು ಕಾಣದು. ಅವಲಂಬಿತ ಬದುಕು ತನ್ನದೀಗ. ಮತ್ತೆ..? ಸಂಗೀತ.. ಹೌದು. ತನಗಾಗಿ
ಕೆರೆಯ ಬದಿಯಲ್ಲಿ ತೋಟದ ನಡುವಿನ ಓಡಾಟದಲ್ಲಿ ತನಗಾಗಿ ಹಾಡಿಕೊಳ್ಳುತ್ತಿದ್ದುದು. ಆಗ ತನ್ನ ಗೆಳತಿಯರು ತನ್ನ ಕಂಠದ ಬಗ್ಗೆ ಒಮ್ಮತದ ಅಭಿಪ್ರಾಯದಂತೆ ಹೊಗಳಿದ್ದು. ಹೌದು. ತಾನು ಯಾರ ಅವಲಂಭನೆಗೂ ಒಳಪಡದೆ ತನ್ನಂತೆ ಹಾಡಿಕೊಳ್ಳಲು , ಕಲಿಯಲು , ಸಹಕರಿಸಲು ಈಗ ಜೊತೆಗೆ ಮೊಬೈಲ್ ಇರುವುದರಿಂದ ಅದರಿಂದ ಬರುವ ಹಾಡುಗಳ ಜೊತೆ ತಾನೂ ಹಾಡಬೇಕು. ಹಾಡುವಂತಾಗಬೇಕು. ಬೇರೆಯವರಿಗಾಗಿಯಲ್ಲದಿದ್ದರೂ , ತನಗಾಗಿ ತನ್ನ ಸಮಯ ಕಳೆಯಲು, ಅದ್ಭುತ ಹಾಡುಗಾರ್ತಿಯೆನಿಸಿಕೊಳ್ಳಲು ಅಲ್ಲ. ತನಗಾಗಿ ಕೇವಲ ತನಗಾಗಿ.
– ವಾಣಿ ಮಹೇಶ್, ಹಾಸನ

