ಕೊರಟಗೆರೆ :- ಅನಾರೋಗ್ಯದ ನಡುವೆಯೂ ಅಭಿಮಾನಿಗಳು ಆಯೋಜಿಸಿದ್ದ ಬೃಹತ್ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿದ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರಿಗೆ ಸಾವಿರಾರು ಕಾರ್ಯಕರ್ತರು ಅದ್ಧೂರಿ ಸ್ವಾಗತ ಕೋರಿದರು. ಸಿಡಿಮದ್ದಿನ ಸಂಭ್ರಮ, ಘೋಷಣೆಗಳು ಹಾಗೂ ಮಹಿಳೆಯರ ಕುಣಿತದ ನಡುವೆ ನೆಚ್ಚಿನ ನಾಯಕರಿಗೆ ಭಾವಪೂರ್ಣ ಸ್ವಾಗತ ದೊರೆಯಿತು.
ಕೊರಟಗೆರೆಯ ಜೂನಿಯರ್ ಕಾಲೇಜು ಆವರಣದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಡಿಸಿಎಂ ಡಾ .ಜಿ ಪರಮೇಶ್ವರ್ ಎರಡನೇ ಬಾರಿ ಉಪಮುಖ್ಯಮಂತ್ರಿಯಾಗಿ ನಿಮ್ಮ ಮುಂದೆ ನಿಲ್ಲಲು ಕೊರಟಗೆರೆ ಕ್ಷೇತ್ರದ ಜನರ ಆಶೀರ್ವಾದವೇ ಕಾರಣ.
ಹೈಕಮಾಂಡ್ ಅವಕಾಶ ನೀಡಿರಬಹುದು, ಆದರೆ ನೀವು ಗೆಲ್ಲಿಸದಿದ್ದರೆ ಈ ಸ್ಥಾನ ನಮಗೆ ದೊರೆಯುತ್ತಿರಲಿಲ್ಲ ಎಂದು ಕೃತಜ್ಞತೆ ಸಲ್ಲಿಸಿದರು.

ಕೊರಟಗೆರೆ ಜನತೆಗೆ ಧನ್ಯವಾದ ಸಲ್ಲಿಸಿದ ಡಾ. ಜಿ ಪರಮೇಶ್ವರ್ ನನಗೆ
ಎಂಟು ವರ್ಷಗಳ ಕಾಲ ಕೆಪಿಸಿಸಿ ಅಧ್ಯಕ್ಷರಾಗಿ, ಎರಡು ಬಾರಿ ಉಪಮುಖ್ಯಮಂತ್ರಿಯಾಗಿ ಹಾಗೂ ದೆಹಲಿ ಮಟ್ಟದಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಮಹತ್ವದ ಜವಾಬ್ದಾರಿಗಳನ್ನು ನಿರ್ವಹಿಸುವ ಅವಕಾಶ ಸಿಕ್ಕಿರುವುದಕ್ಕೆ ಕೊರಟಗೆರೆ ಕ್ಷೇತ್ರದ ಜನರ ಬೆಂಬಲವೇ ಕಾರಣ ಎಂದು ಅಭಿಪ್ರಾಯಪಟ್ಟರು.

ಸಿದ್ದರಾಮಯ್ಯನವರ ಮಾರ್ಗದರ್ಶನ ಪಕ್ಷಕ್ಕೆ ಅತ್ಯಗತ್ಯವಾಗಿದ್ದು, 3 ವರ್ಷಗಳ ಕಾಲ ಮುಖ್ಯಮಂತ್ರಿ ಆಗಿ ಜನಪರ ಯೋಜನೆಗಳನ್ನು ಜಾರಿಗೆ ತಂದ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಸಿದ್ಧಾಂತಗಳನ್ನು ಎತ್ತಿಹಿಡಿದಿದ್ದು, ಮುಂದಿನ ದಿನಗಳಲ್ಲಿಯೂ ಅವರ ಮಾರ್ಗದರ್ಶನ ಪಕ್ಷಕ್ಕೆ ಅಗತ್ಯವಾಗಿದೆ ಎಂದು ಹೇಳಿದರು.

ಡಿಕೆ ಶಿವಕುಮಾರ್ ಸಮರ್ಥ ನಾಯಕ
ಕಾಂಗ್ರೆಸ್ ಪಕ್ಷಕ್ಕೆ 136 ಸ್ಥಾನಗಳನ್ನು ತಂದುಕೊಡುವಲ್ಲಿ ಡಿಕೆ ಶಿವಕುಮಾರ್ ಅವರ ಪಾತ್ರವೂ ಮಹತ್ವದ್ದಾಗಿದೆ. ಹೈಕಮಾಂಡ್ ಅವರ ನಾಯಕತ್ವವನ್ನು ಗುರುತಿಸಿ ಅವಕಾಶ ನೀಡಿದೆ. ಅವರ ಕೈ ಬಲಪಡಿಸುವ ನಿಟ್ಟಿನಲ್ಲಿ ಎಲ್ಲರೂ ಕೆಲಸ ಮಾಡಬೇಕು ಎಂದು ಕರೆ ನೀಡಿದರು.

2028ರಲ್ಲೂ ಕಾಂಗ್ರೆಸ್ ಅಧಿಕಾರಕ್ಕೆ ಬರುವಂಥದ್ದು ನಿಶ್ಚಯವಾಗಿದ್ದು,
ಕಾಂಗ್ರೆಸ್ ಸರ್ಕಾರ ಜನತೆಗೆ ನೀಡಿರುವ ಭರವಸೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಕೆಲಸ ಮಾಡಿದೆ, ಸಿದ್ದರಾಮಯ್ಯ ಅವರ ಮಾರ್ಗದರ್ಶನ ಹಾಗೂ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ನೇತೃತ್ವದಲ್ಲಿ 2028ರ ಚುನಾವಣೆಯಲ್ಲೂ ಕಾಂಗ್ರೆಸ್ ಬಹುಮತದೊಂದಿಗೆ ಮತ್ತೆ ಅಧಿಕಾರಕ್ಕೆ ಬರಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಇತ್ತೀಚಿಗೆ ಉನ್ನತ ಅಧಿಕಾರಿಗಳ ಸಭೆ ನಡೆಸಿದ್ದು, ಅನಾರೋಗ್ಯದ ಕಾರಣದಿಂದ ತಾವು ಭಾಗವಹಿಸಲು ಸಾಧ್ಯವಾಗಲಿಲ್ಲ ಎಂದು ತಿಳಿಸಿದ ಅವರು, ಜನಪರ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ಅಧಿಕಾರಿಗಳು ಹೆಚ್ಚಿನ ಹೊಣೆಗಾರಿಕೆಯಿಂದ ಕಾರ್ಯನಿರ್ವಹಿಸಬೇಕು,
ತಾಲೂಕು ಮಟ್ಟದಿಂದ ರಾಜ್ಯ ಮಟ್ಟದವರೆಗೆ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿಯೇ ಇದ್ದು ಸಾರ್ವಜನಿಕ ಸೇವೆಗೆ ಆದ್ಯತೆ ನೀಡಬೇಕು. ಕರ್ತವ್ಯ ನಿರ್ಲಕ್ಷ್ಯ ಮಾಡುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಎತ್ತಿನಹೊಳೆ ಯೋಜನೆ ಪೂರ್ಣಗೊಳಿಸುವ ಸಂಕಲ್ಪ ತೊಡಲಾಗಿದ್ದು,
ಆಗಸ್ಟ್ ವೇಳೆಗೆ ನೀರು ಹರಿಯಲಿದೆ,
ಎತ್ತಿನಹೊಳೆ ಯೋಜನೆ ಕುರಿತು ಮಹತ್ವದ ಘೋಷಣೆ ಮಾಡಿದ ಡಾ. ಪರಮೇಶ್ವರ್ ಜುಲೈನಲ್ಲಿ ನೀರು ಹರಿಯಬೇಕಾಗಿತ್ತು. ಆದರೆ ಕೇಂದ್ರ ಸರ್ಕಾರದ ಅರಣ್ಯ ಕಾಯ್ದೆ ಸಂಬಂಧಿತ ಅನುಮತಿಗಳ ಕಾರಣ ವಿಳಂಬವಾಯಿತು. ಈಗ ಅನುಮತಿ ದೊರೆತಿದ್ದು, ತ್ವರಿತಗತಿಯಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ. ಆಗಸ್ಟ್ ವೇಳೆಗೆ ನೀರು ಹರಿಯಲಿದೆ ಎಂದು ಭರವಸೆ ನೀಡಿದರು.
ಎತ್ತಿನಹೊಳೆ ಯೋಜನೆ ಅಡಿ
ಭೂಸ್ವಾಧೀನಕ್ಕೆ ಸಹಕರಿಸುವಂತೆ ಮನವಿ ಮಾಡಿಕೊಂಡ ಡಿಸಿಎಂ
ಕೊರಟಗೆರೆ ಭಾಗಕ್ಕೆ ಎತ್ತಿನಹೊಳೆ ಯೋಜನೆಯಲ್ಲಿ ಅನ್ಯಾಯವಾಗಿರುವುದನ್ನು ಉಲ್ಲೇಖಿಸಿದ ಅವರು, ಬೈರಗೊಂಡ್ಲಾ ಸುತ್ತಮುತ್ತ 5 ಸಾವಿರ ಎಕರೆ ಪ್ರದೇಶದಲ್ಲಿ ಬಫರ್ ಡ್ಯಾಂ ನಿರ್ಮಾಣ ಯೋಜನೆ ಜನರ ವಿರೋಧದಿಂದ ಕೈತಪ್ಪಿತು ನಮ್ಮ ತಾಲೂಕಿನಿಂದ ಕೇವಲ ಎರಡುವರೆ ಸಾವಿರ ಎಕ್ರೆ ಮಾತ್ರ ಭೂ ಸ್ವಾದೀನ ಪ್ರಕ್ರಿಯೆ ನಡೆಯುತ್ತಿತ್ತು ಆದರೆ ರೈತರ ವಿರೋಧದಿಂದ ಅದು ಕೈತಪ್ಪಿದಂತಾಯಿತು ಎಂದು ವಿಷಾದ ವ್ಯಕ್ತಪಡಿಸಿದರು ಮುಂದುವರೆದು
ಈಗ ಒಡೆಯರಹಳ್ಳಿ ಸಮೀಪ ಸುಮಾರು 500 ಎಕರೆ ವ್ಯಾಪ್ತಿಯಲ್ಲಿ ಸಣ್ಣ ಡ್ಯಾಂ ನಿರ್ಮಿಸಲು ಮುಂದಾಗಿದ್ದು, ಇದಕ್ಕೂ ವಿರೋಧ ವ್ಯಕ್ತವಾಗುತ್ತಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದರು.
ಕೊರಟಗೆರೆ ಜನರು ಭೂಮಿ ನೀಡದೆ ಎತ್ತಿನಹೊಳೆ ನೀರು ನಿರೀಕ್ಷಿಸುತ್ತಿದ್ದಾರೆ ಎಂಬ ಆರೋಪ ದೂರವಾಗಬೇಕು. ರೈತರು ಯೋಜನೆಗೆ ಸಹಕರಿಸಬೇಕು. ಭೂಸ್ವಾಧೀನಕ್ಕೆ ನ್ಯಾಯಯುತ ಪರಿಹಾರ ನೀಡಲಾಗುವುದು ಎಂದು ಮನವಿ ಮಾಡಿದ ಡಿಸಿಎಂ ಪರಮೇಶ್ವರ್ ನಮ್ಮ ಕೊರಟಗೆರೆ ತಾಲೂಕಿನ
67 ಕೆರೆಗಳಿಗೆ ಎತ್ತಿನಹೊಳೆ ನೀರು
ಎತ್ತಿನಹೊಳೆ ಯೋಜನೆಯಡಿ ನೀರು ಹರಿಸಲಾಗುವುದು ಎಂದು ಡಿಸಿಎಂ ಸ್ಪಷ್ಟಪಡಿಸಿದರು.

ಕಾರ್ಯಕ್ರಮದಲ್ಲಿ ಮಹಿಳಾ ಆಯೋಗ ಅಧ್ಯಕ್ಷ ಡಾ.ನಾಗಲಕ್ಷ್ಮೀ ಚೌಧರಿ, ಮಾಜಿ ಶಾಸಕ ಗಂಗಹನುಮಯ್ಯ, ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ್, ಕೆಎಸ್ಆರ್ಟಿಸಿ ನಿಗಮ ಮಂಡಳಿ ಉಪಾಧ್ಯಕ್ಷ ನಿಖಿತ್ ರಾಜ್ ಮೌರ್ಯ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಅಶ್ವತ್ಥನಾರಾಯಣ್, ಅರಕೆರೆ ಶಂಕರ್ ,ಕೆಪಿಸಿಸಿ ಕಾರ್ಯದರ್ಶಿ ದಿನೇಶ್, ಕಾಂಗ್ರೇಸ್ ಮಹಿಳಾಧ್ಯಕ್ಷೆ ಜಯಮ್ಮ,
ಮುಖಂಡರಾದ ಪ್ರೇಮಾಮಹಾಲಿಂಗಪ್ಪ, ಬಲರಾಮಯ್ಯ, ಕೆ.ಆರ್.ಓಬಳರಾಜು, ಎಲ್.ರಾಜಣ್ಣ, ವಿನಯ್, ಅರವಿಂದ್,
ಬುಕ್ಕಪಟ್ಣ ಮಾಜಿ ಅಧ್ಯಕ್ಷ ಲಕ್ಷ್ಮಿ, ಲಕ್ಷ್ಮಮ್ಮ,ಯುವಧ್ಯಕ್ಷ ಬೈರೇಶ್, , ರಘುವೀರ್, ಕೆಎಲ್ಎಂ ಮಂಜು, ಅಮರ, ಮಹೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
-ಶ್ರೀನುವಾಸ್ ಕೊರಟಗೆರೆ.
