ಕೆ.ಆರ್.ಪೇಟೆ: ಜಾಗತಿಕ ಜಗತ್ತಿನ ಇಂದಿನ ಸ್ಪರ್ಧಾ ಪ್ರಪಂಚದಲ್ಲಿ ಮಾರುಕಟ್ಟೆಯ ದರಕ್ಕೆ ಪೈಪೋಟಿಯಾಗಿ ನಾವು ಕಡಿಮೆ ಬೆಲೆಯಲ್ಲಿ ಗುಣಮಟ್ಟದ ವಸ್ತುಗಳ ವ್ಯಾಪಾರ, ವ್ಯವಹಾರವನ್ನು ನಡೆಸಿದರೆ ಮಾತ್ರ ಮಾರುಕಟ್ಟೆಯಲ್ಲಿ ಮುನ್ನುಗ್ಗಿ ಯಶಸ್ಸನ್ನು ಗಳಿಸಲು ಸಾಧ್ಯವಿದೆ ಎಂದು ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನ ಮಠದ ಪೀಠಾಧಿಪತಿಗಳಾದ ಡಾ. ನಿಶ್ಚಲಾನಂದನಾಥ ಸ್ವಾಮೀಜಿ ಹೇಳಿದರು.
ಅವರು ಕೃಷ್ಣರಾಜಪೇಟೆ ಪಟ್ಟಣದ ಪುನೀತ್ ರಾಜಕುಮಾರ್ ರಸ್ತೆಯಲ್ಲಿ ವಿದ್ಯಾವಂತ ನಿರುದ್ಯೋಗಿ ಯುವಕ ನವೀನ್ ಅವರು ನೂತನವಾಗಿ ಆರಂಭಿಸಿರುವ ಪುನರ್ವಿಕ ಫರ್ನಿಚರ್, ಎಲೆಕ್ಟ್ರಾನಿಕ್, ಹಾಗೂ ಗೃಹೋಪಯೋಗಿ ವಸ್ತುಗಳ ಮಾರಾಟ ಮಳಿಗೆಯನ್ನು ಉದ್ಘಾಟಿಸಿ ಮಾತನಾಡಿದರು.
ಜಾಗತಿಕ ಜಗತ್ತಿನ ಹಿಂದಿನ ಸ್ಪರ್ಧಾ ಪ್ರಪಂಚದಲ್ಲಿ ವಿಶ್ವದಾದ್ಯಂತ ನಡೆಸುವ ವ್ಯಾಪಾರ ವ್ಯವಹಾರಗಳು ನಮ್ಮ ಅಂಗೈ ಅಗಲದಲ್ಲಿಯೇ ವ್ಯಾಟ್ಸಪ್, ಇನ್ಸ್ಟಾಗ್ರಾಮ್ ಹಾಗೂ ಗೂಗಲ್ ಮೂಲಕ ಆನ್ಲೈನ್ ನಲ್ಲಿಯೇ ನಡೆಯುತ್ತಿರುವುದರಿಂದ ಇಂದು ಗ್ರಾಹಕರು ಜಾಗರೂಕರಾಗಿದ್ದಾರಲ್ಲದೆ ಬುದ್ಧಿವಂತರಾಗಿದ್ದಾರೆ. ಆದ್ದರಿಂದ ನಾವು ಮಾರುಕಟ್ಟೆಯ ಸವಾಲುಗಳನ್ನು ಎದುರಿಸಿ ನಮ್ಮ ವ್ಯಾಪಾರ ವ್ಯವಹಾರದಲ್ಲಿ ಯಶಸ್ವಿಯಾಗಬೇಕಾದರೆ ನಾವು ಮಾರಾಟ ಮಾಡುವ ವಸ್ತುಗಳು ಹಾಗೂ ಉತ್ಪನ್ನಗಳು ಗುಣಮಟ್ಟದ್ದಾಗಿರಬೇಕಲ್ಲದೆ, ಸ್ಪರ್ಧಾತ್ಮಕ ದರದಲ್ಲಿ ಶ್ರೀಸಾಮಾನ್ಯರ ಕೈಗೆಟುಕುವಂತಿರಬೇಕು.

ಆದ್ದರಿಂದ ವಿದ್ಯಾವಂತ ನಿರುದ್ಯೋಗ ಯುವಕರಾಗಿರುವ ನವೀನ್ ಅವರು ಪುನರ್ವಿಕ ಮಾರಾಟ ಮಳಿಗೆಯನ್ನು ಸ್ಥಾಪಿಸಿ ನೂರಾರು ನಿರುದ್ಯೋಗಿ ಯುವ ಜನರಿಗೆ ಉದ್ಯೋಗವನ್ನು ನೀಡುತ್ತಿರುವುದಲ್ಲದೇ, ಇಂದಿನ ಜಾಗತಿಕ ಜಗತ್ತಿನ ಸವಾಲುಗಳನ್ನು ಎದುರಿಸುವ ದಿಕ್ಕಿನಲ್ಲಿ ಪೂರಕವಾಗಿ ತಯಾರಿಯನ್ನು ಮಾಡಿಕೊಂಡು ಮಾರುಕಟ್ಟೆ ದರಕ್ಕಿಂತ ಅತ್ಯಂತ ಕಡಿಮೆ ದರದಲ್ಲಿ ತಮ್ಮ ಮಾರಾಟ ಮಳಿಗೆಯಲ್ಲಿ ವಿವಿಧ ಬ್ರಾಂಡ್ ಗಳ ಗುಣಮಟ್ಟದ ಉತ್ಪನ್ನಗಳನ್ನು ಮಾರಾಟ ಮಾಡುತ್ತಿರುವುದರಿಂದ ನವೀನ್ ಅವರ ಉದ್ಯಮಕ್ಕೆ ಅಪಾರವಾದ ಯಶಸ್ಸು ದೊರೆಯಲಿದೆ. ಆದ್ದರಿಂದ ಇಂದಿನ ಸ್ಪರ್ಧಾತ್ಮಕ ಜಗತ್ತಿನ ಮಾರುಕಟ್ಟೆಯಲ್ಲಿ ಎದುರಾಗುವ ಸವಾಲುಗಳನ್ನು ಆತ್ಮವಿಶ್ವಾಸ ಹಾಗೂ ತಂತ್ರಜ್ಞಾನದ ಉತ್ಪನ್ನಗಳ ಮೂಲಕ ಎದುರಿಸಿ ಗುರಿ ಮುಟ್ಟುವ ದಿಕ್ಕಿನಲ್ಲಿ ಮಾರುಕಟ್ಟೆಯ ಒಳ ಹೊರವು ಗಳನ್ನು ತಿಳಿದುಕೊಂಡು ತಾವು ಪ್ರವೇಶಿಸಿರುವ ಎಲೆಕ್ಟ್ರಾನಿಕ್ಸ್, ಫರ್ನಿಚರ್ ಹಾಗೂ ಮೊಬೈಲ್ ಮಾರಾಟ ಕ್ಷೇತ್ರದಲ್ಲಿ ಯಶಸ್ಸನ್ನು ಸಾಧಿಸಿ ಮುನ್ನಡೆಯಲ್ಲಿ ಎಂದು ನಿಶ್ಚಲಾನಂದನಾಥ ಸ್ವಾಮೀಜಿ ಶುಭ ಕೋರಿದರು.
ಕ್ಷೇತ್ರದ ಶಾಸಕ ಎಚ್.ಟಿ. ಮಂಜು ಅವರು ಟೇಪ್ ಕತ್ತರಿಸುವ ಮೂಲಕ ಪುನರ್ವಿಕ ಎಲೆಕ್ಟ್ರಾನಿಕ್ಸ್ ಫರ್ನಿಚರ್ ಹಾಗೂ ಮೊಬೈಲ್ ಮಾರಾಟ ಮಳಿಗೆಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿ ಮಾರುಕಟ್ಟೆಯಲ್ಲಿ ಇಂದು ಬಹಳ ಬೇಡಿಕೆಯನ್ನು ಹೊಂದಿರುವ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳ ಮಾರಾಟಕ್ಕೆ ನವೀನ್ ಕೈ ಹಾಕಿರುವುದು ಅವರ ಯಶಸ್ಸಿಗೆ ಮುನ್ನುಡಿ ಬರೆದಂತಿದೆ. ಪುನರ್ವಿಕ ಸಂಸ್ಥೆಯು ಬೆಳೆದು ಹೆಮ್ಮರ ವಾಗುವ ಜೊತೆಗೆ ನೂರಾರು ನಿರುದ್ಯೋಗಿ ಯುವ ಜನರಿಗೆ ಉದ್ಯೋಗವನ್ನು ನೀಡುವ ಮೂಲಕ ಅವರ ಬಾಳಿಗೆ ಬೆಳಕಾಗಲಿದೆ ಎಂದು ಶುಭ ಕೋರಿದರು.

ಮಾಜಿ ಶಾಸಕ ಕೆ.ಬಿ. ಚಂದ್ರಶೇಖರ್, ಮಂಡ್ಯ ಹಾಲು ಉತ್ಪನ್ನ ಒಕ್ಕೂಟದ ಮಾಜಿ ಅಧ್ಯಕ್ಷ ಮಡುವಿನಕೋಡಿ ಹರೀಶ್, ನಿರ್ದೇಶಕರಾದ ಡಾಲು ರವಿ, ಮಾಜಿ ಶಾಸಕರಾದ ಬಿ. ಪ್ರಕಾಶ್, ಮಂಡ್ಯ ಜಿಲ್ಲಾ ಹಾಪ್ ಕಾಮ್ಸ್ ಮಾಜಿ ಅಧ್ಯಕ್ಷ ಕೆ.ಜಿ. ತಮ್ಮಣ್ಣ, ಪುರಸಭೆ ಅಧ್ಯಕ್ಷೆ ಪಂಕಜಾ ಪ್ರಕಾಶ್, ಮುಖ್ಯಾಧಿಕಾರಿ ಅಶೋಕ್, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪೂರ್ಣಚಂದ್ರ ತೇಜಸ್ವಿ ಮಾಜಿ ಅಧ್ಯಕ್ಷರಾದ ಎಂ. ಕೆ.ಹರಿಚರಣತಿಲಕ್, ಕೆ.ಆರ್. ನೀಲಕಂಠ, ಬಳ್ಳೇಕೆರೆ ಮಂಜುನಾಥ್ ರಾಜ್ಯ ಆರ್ಟಿಓ ಅಧಿಕಾರಿಗಳ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ, ಕೃಷ್ಣರಾಜಪೇಟೆ ತಾಲೂಕು ವಿತರಕರ ಸಂಘದ ಅಧ್ಯಕ್ಷ ಕೆ.ಎಸ್.ರಾಜೇಶ್, ಪುರಸಭೆ ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ಎಚ್.ಆರ್.ಲೋಕೇಶ್, ಉದ್ಯಮಿ ಹೆಚ್.ಆರ್. ಸೋಮಣ್ಣ, ಡಿಂಕಾ ಮಹೇಶ್ ಸೇರಿದಂತೆ ನೂರಾರು ಜನರು ಪುನರ್ವಿಕ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳ ಮಾರಾಟ ಮಳಿಗೆಯ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
– ಶ್ರೀನಿವಾಸ್ ಆರ್.
