ಬೆಂಗಳೂರು: ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಮಹಿಳೆಯ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯ ವಿಧಿಸಿರುವ ಜೀವಾವಧಿ ಶಿಕ್ಷೆಯನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಹೋಳೆನರಸೀಪುರದಲ್ಲಿರುವ ತಮ್ಮ ತೋಟದ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿತ್ತು.
ಪ್ರಜ್ವಲ್ ವಿರುದ್ಧ ದೂರು ದಾಖಲಾದ ನಂತರ, ಜೆಡಿಎಸ್ ಪಕ್ಷವು ಅವರನ್ನು ಉಚ್ಚಾಟನೆ ಮಾಡಿತ್ತು. ಕಳೆದ ಲೋಕಸಭಾ ಚುನಾವಣೆ ವೇಳೆ ಹಾಸನದಲ್ಲಿ ಪ್ರಜ್ವಲ್ ರಾಸಲೀಲೆ ವಿಡಿಯೋಗಳು ಪೆನ್ಡ್ರೈವ್ಗಳ ಮೂಲಕ ಹೊರಬಂದು ಸಂಚಲನ ಸೃಷ್ಟಿಸಿತ್ತು. ಈ ವಿಡಿಯೋಗಳಲ್ಲಿ ಹಲವು ಮಹಿಳೆಯರ ಮೇಲೆ ಅತ್ಯಾಚಾರ ಎಸಗಿರುವ ದೃಶ್ಯಗಳು ದಾಖಲಾಗಿದ್ದವು ಎಂದು ಎಸ್ಐಟಿ ತನಿಖೆಯಲ್ಲಿ ಬಹಿರಂಗಗೊಂಡಿತ್ತು. ನಂತರ ಪ್ರಜ್ವಲ್ ಅವರನ್ನು ಬಂಧಿಸಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇರಿಸಲಾಗಿತ್ತು.
ಪ್ರಜ್ವಲ್ ಹೈಕೋರ್ಟ್ಗೆ ಮನವಿ
ವಿಚಾರಣಾ ನ್ಯಾಯಾಲಯದ ತೀರ್ಪನ್ನು ರದ್ದುಪಡಿಸುವಂತೆ ಹೈಕೋರ್ಟ್ಗೆ ಮನವಿ ಸಲ್ಲಿಸಿರುವ ಪ್ರಜ್ವಲ್ ರೇವಣ್ಣ, ರಾಜಕೀಯ ದುರುದ್ದೇಶದಿಂದ ಕೇಸ್ ಹಾಕಲಾಗಿದೆ ಎಂದು ಆರೋಪಿಸಿದ್ದಾರೆ.
“ಮಹಿಳೆಯನ್ನು ಅಸ್ತ್ರವಾಗಿ ಬಳಸಿಕೊಂಡು ರಾಜಕೀಯ ಷಡ್ಯಂತ್ರದ ಭಾಗವಾಗಿ ನನ್ನ ವಿರುದ್ಧ ಎಫ್ಐಆರ್ ದಾಖಲಾಗಿದೆ,” ಎಂದು ಅರ್ಜಿಯಲ್ಲಿ ತಿಳಿಸಿದ್ದಾರೆ.
2022ರಲ್ಲಿ ಆ ಮಹಿಳೆ ತನ್ನ ಕೆಲಸ ಬಿಟ್ಟಿದ್ದಾಗಿ ಹೇಳಿಕೆ ನೀಡಿದ್ದರೂ, 2023ರ ತೋಟದ ಮನೆಯಲ್ಲಿ ನಡೆದ ಗೃಹಪ್ರವೇಶ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿಚಾರವನ್ನು ಪ್ರಜ್ವಲ್ ಗಮನಕ್ಕೆ ತಂದಿದ್ದಾರೆ.
“ಅತ್ಯಾಚಾರ ನಡೆದಿದ್ದರೆ ಅವರು ಹೇಗೆ ಗೃಹಪ್ರವೇಶಕ್ಕೆ ಬರುತ್ತಿದ್ದರು?” ಎಂದು ಪ್ರಶ್ನಿಸಿದ್ದಾರೆ.
ಸಾಕ್ಷ್ಯಗಳ ಮೇಲೆ ಅನುಮಾನ
- ಘಟನೆ ನಡೆದ ಮೂರು ವರ್ಷಗಳ ನಂತರ ದೂರು ದಾಖಲಿಸಿರುವುದು ಅನುಮಾನಾಸ್ಪದ ಎಂದು ಪ್ರಜ್ವಲ್ ಹೇಳಿದ್ದಾರೆ.
- ಸ್ಟೋರ್ ರೂಂನಲ್ಲಿ ಸಿಕ್ಕ ಬಟ್ಟೆ ಮತ್ತು ಕೂದಲಿದ್ದ ಬ್ಯಾಗ್ನ್ನು ಸಂತ್ರಸ್ತೆ ಗುರುತಿಸದಿರುವುದು ಗಮನಾರ್ಹ ಎಂದು ಹೇಳಿದ್ದಾರೆ.
- “ಬ್ಯಾಟರಿ ಮತ್ತು ಪೇಂಟ್ ಇರುವ ಲಾಕ್ ಮಾಡಲಾದ ರೂಂನಲ್ಲಿ ಮಹಿಳೆಯ ಉಡುಪು ಹೇಗೆ ಸಿಕ್ಕಿತು?” ಎಂಬ ಪ್ರಶ್ನೆಗಳನ್ನು ಅವರು ಅರ್ಜಿಯಲ್ಲಿ ಮುಂದಿಟ್ಟಿದ್ದಾರೆ.
ಬಸವನಗುಡಿ ಮನೆಯಲ್ಲಿ ಅತ್ಯಾಚಾರ ಎಸಗಲಾಗಿದೆ ಎಂಬ ಆರೋಪದ ಬಗ್ಗೆ ಪ್ರಜ್ವಲ್ ಪ್ರಶ್ನೆ ಎತ್ತಿದ್ದಾರೆ.
ಘಟನೆಯ ಸಮಯದಲ್ಲಿ ಸಂತ್ರಸ್ತೆಯ ಸಹೋದರಿ, ಮತ್ತೊಬ್ಬ ಮನೆಕೆಲಸದ ಮಹಿಳೆ ಹಾಗೂ ತಮ್ಮ ತಾಯಿ ಸ್ಥಳದಲ್ಲಿದ್ದರೂ ಯಾರಿಗೂ ವಿಷಯ ತಿಳಿಸದಿರುವುದನ್ನು ಅನುಮಾನಾಸ್ಪದವೆಂದು ಹೇಳಿದ್ದಾರೆ.
ರಾಜಕೀಯ ಕಣ್ಣುಹಾಯಿಸಿದ ಪ್ರಕರಣ?
ಪ್ರಜ್ವಲ್ ಪರ ವಕೀಲರು, “ಇದು ಪೂರ್ವಾಗ್ರಹಪೀಡಿತ ಪ್ರಕರಣ. ನಿಜವಾಗಿಯೂ ಅತ್ಯಾಚಾರ ನಡೆದಿದ್ದರೆ ತಕ್ಷಣ ದೂರು ನೀಡಲಾಗುತ್ತಿತ್ತು. ಸಾಕ್ಷ್ಯಗಳು ಸರಿಯಾದ ಪದ್ದತಿಯಲ್ಲಿ ಸಂಗ್ರಹಿಸಲ್ಪಟ್ಟಿಲ್ಲ. ಹೀಗಾಗಿ ಜೀವಾವಧಿ ಶಿಕ್ಷೆ ವಿಧಿಸಿರುವ ತೀರ್ಪು ನ್ಯಾಯಯುತವಲ್ಲ,” ಎಂದು ವಾದಿಸಿದ್ದಾರೆ.
