ನಮ್ಮ ಕುತ್ತಿಗೆಯ ಮುಂಭಾಗದಲ್ಲಿರುವ ಚಿಟ್ಟೆಯ ಆಕಾರದ ಸಣ್ಣ ಗ್ರಂಥಿಯನ್ನು ಥೈರಾಯ್ಡ್ ಗ್ರಂಥಿ ಎಂದು ಕರೆಯಲಾಗುತ್ತದೆ. ಈ ಗ್ರಂಥಿಯು ದೇಹದ ಚಯಾಪಚಯ ಕ್ರಿಯೆಗಳನ್ನು ನಿಯಂತ್ರಿಸುವ ಹಾರ್ಮೋನುಗಳನ್ನು ಉತ್ಪಾದಿಸುತ್ತದೆ. ಮುಖ್ಯವಾಗಿ ಥೈರಾಕ್ಸಿನ್ (T4) ಮತ್ತು ಟ್ರೈಯೋಡೋಥೈರೋನಿನ್ (T3) ಎಂಬ ಎರಡು ಹಾರ್ಮೋನುಗಳು ದೇಹದ ಬೆಳವಣಿಗೆ, ಉಷ್ಣತೆ, ಹೃದಯ ಬಡಿತ ಮತ್ತು ಶಕ್ತಿನಿಯಂತ್ರಣಕ್ಕೆ ಪ್ರಮುಖವಾದ ಪಾತ್ರ ವಹಿಸುತ್ತವೆ.
ಥೈರಾಯ್ಡ್ ಹಾರ್ಮೋನಿನ ಕೊರತೆಯಿಂದ ಉಂಟಾಗುವ ಸಮಸ್ಯೆಗಳು
ದೇಹದಲ್ಲಿ ಥೈರಾಯ್ಡ್ ಹಾರ್ಮೋನಿನ ಪ್ರಮಾಣ ಕಡಿಮೆಯಾಗಿದ್ದರೆ ಅದನ್ನು ಹೈಪೊಥೈರಾಯ್ಡ್ ಎಂದು ಕರೆಯುತ್ತಾರೆ.
ಇದಕ್ಕೆ ಕಾರಣಗಳು:
- ಆಹಾರದಲ್ಲಿ ಅಯೋಡಿನ್ ಕೊರತೆ
- ಆನುವಂಶಿಕ ಕಾಯಿಲೆಗಳು
- ಸೋಂಕುಗಳು
- ಕೆಟ್ಟ ಆಹಾರ ಪದ್ಧತಿ ಮತ್ತು ಅಸ್ವಸ್ಥ ಜೀವನಶೈಲಿ
ಲಕ್ಷಣಗಳು:
- ದೇಹದ ತೂಕ ಹೆಚ್ಚಾಗುವುದು
- ಹೆಚ್ಚು ಚಳಿ ತಟ್ಟುವುದು
- ಧ್ವನಿಯಲ್ಲಿ ಬದಲಾವಣೆ
- ಮಲಬದ್ಧತೆ
- ಆಲಸ್ಯ ಮತ್ತು ಶಕ್ತಿಯ ಕೊರತೆ
- ಮಹಿಳೆಯರಲ್ಲಿ ಮುಟ್ಟಿನ ಸಮಸ್ಯೆಗಳು
ಹೈಪೊಥೈರಾಯ್ಡ್ ಸಮಸ್ಯೆ ಗರ್ಭಿಣಿ ಮಹಿಳೆಯರಲ್ಲಿ ಕಂಡುಬಂದರೆ ನವಜಾತ ಶಿಶುವಿನಲ್ಲಿ ಬುದ್ಧಿಮಾಂದ್ಯತೆ ಉಂಟಾಗುವ ಅಪಾಯ ಹೆಚ್ಚುತ್ತದೆ. ಆದ್ದರಿಂದ ಗರ್ಭಿಣಿ ಮಹಿಳೆಯರು ಮತ್ತು ಹೊಸ ಹುಟ್ಟಿದ ಶಿಶುಗಳಲ್ಲಿ ಥೈರಾಯ್ಡ್ ಪರೀಕ್ಷೆ ಕಡ್ಡಾಯವಾಗಿದೆ.
ಥೈರಾಯ್ಡ್ ಹಾರ್ಮೋನಿನ ಹೆಚ್ಚಳದಿಂದ ಉಂಟಾಗುವ ಸಮಸ್ಯೆಗಳು
ದೇಹದಲ್ಲಿ ಥೈರಾಯ್ಡ್ ಹಾರ್ಮೋನಿನ ಪ್ರಮಾಣ ಹೆಚ್ಚು ಉತ್ಪಾದನೆಯಾದರೆ ಅದನ್ನು ಹೈಪರ್ ಥೈರಾಯ್ಡಿಸಮ್ ಎಂದು ಕರೆಯುತ್ತಾರೆ.
ಲಕ್ಷಣಗಳು:
- ದೇಹದ ತೂಕ ಕಡಿಮೆಯಾಗುವುದು
- ಹೃದಯ ಬಡಿತ ವೇಗವಾಗಿ ಹೆಚ್ಚುವುದು
- ನಡುಕ ಮತ್ತು ಆತಂಕ
- ಹೆಚ್ಚಾದ ಬೆವರು
- ನಿದ್ರೆಯ ಕೊರತೆ
ಥೈರಾಯ್ಡ್ ಗ್ರಂಥಿಯು ಊದಿಕೊಂಡಿದ್ದರೆ ಅದನ್ನು ಗಾಯ್ಟರ್ ಎಂದು ಕರೆಯುತ್ತಾರೆ. ಇದು ಹಾರ್ಮೋನಿನ ಉತ್ಪಾದನೆಯ ಪ್ರಮಾಣವನ್ನು ಅವಲಂಬಿಸಿರುತ್ತದೆ.
ಪರಿಶೀಲನೆ ಮತ್ತು ಚಿಕಿತ್ಸೆಯ ಅವಶ್ಯಕತೆ
ಥೈರಾಯ್ಡ್ ಸಮಸ್ಯೆ ಸಮಯಕ್ಕೆ ಪತ್ತೆಯಾಗದಿದ್ದರೆ ದೇಹದ ಹಲವಾರು ಅಂಗಾಂಗಗಳಿಗೆ ಹಾನಿಯಾಗುತ್ತದೆ. ವಿಶೇಷವಾಗಿ ಕೂದಲು, ಉಗುರು, ಹೃದಯ, ಮಿದುಳು, ಗರ್ಭಧಾರಣೆಯ ಮೇಲೆ ಪರಿಣಾಮ ಬೀರುತ್ತದೆ.
ಇದಕ್ಕಾಗಿ ನಿಯಮಿತವಾಗಿ ಥೈರಾಯ್ಡ್ ಫಂಕ್ಷನ್ ಟೆಸ್ಟ್ (TFT) ಮಾಡಿಸಿಕೊಳ್ಳುವುದು ಅತ್ಯಗತ್ಯ.
ಚಿಕಿತ್ಸೆ:
- ಹೈಪೊಥೈರಾಯ್ಡ್ನಲ್ಲಿ: ಜೀವನಪರ್ಯಂತ ಥೈರಾಯ್ಡ್ ಹಾರ್ಮೋನು ಇರುವ ಗುಳಿಗೆಯನ್ನು ಸೇವಿಸಬೇಕು.
- ಹೈಪರ್ ಥೈರಾಯ್ಡಿಸಮ್ನಲ್ಲಿ: ಔಷಧೋಪಚಾರ, ಹಾರ್ಮೋನ್ ನಿಯಂತ್ರಕ ಔಷಧಿ ಅಥವಾ ಶಸ್ತ್ರಚಿಕಿತ್ಸೆ.
- ನವಜಾತ ಶಿಶುಗಳಿಗೆ: ಜನನದ ತಕ್ಷಣ ಪರೀಕ್ಷೆ ಮಾಡಿ ಚಿಕಿತ್ಸೆ ಆರಂಭಿಸಬೇಕು.
ಅಯೋಡಿನ್ ಮಹತ್ವ
ಗುಡ್ಡಗಾಡು ಪ್ರದೇಶದ ಜನರಲ್ಲಿ ಅಯೋಡಿನ್ ಕೊರತೆಯಿಂದಾಗಿ ಥೈರಾಯ್ಡ್ ಸಮಸ್ಯೆಗಳು ಹೆಚ್ಚು ಕಂಡುಬರುತ್ತವೆ. ಅಡುಗೆಯ ಉಪ್ಪಿನಲ್ಲಿ ಅಯೋಡಿನ್ ಸೇರಿಸುವ ಕ್ರಮದಿಂದ ಹೈಪೊಥೈರಾಯ್ಡ್ ಪ್ರಕರಣಗಳು ಕಡಿಮೆಯಾಗಿವೆ.
ಭಾರತದಲ್ಲಿ ಸುಮಾರು ನಾಲ್ಕು ಕೋಟಿ ಜನರು ಥೈರಾಯ್ಡ್ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದು ನಿರ್ಲಕ್ಷ್ಯ ಮಾಡಿದರೆ ಜೀವಕ್ಕೆ ಅಪಾಯ ಉಂಟುಮಾಡುವಂತಹ ಕಾಯಿಲೆ.
ಆದ್ದರಿಂದ ಸಮಯಕ್ಕೆ ಸರಿಯಾಗಿ ಪರೀಕ್ಷೆ ಮಾಡಿಸಿಕೊಂಡು, ವೈದ್ಯರ ಸಲಹೆಯೊಂದಿಗೆ ಸರಿಯಾದ ಚಿಕಿತ್ಸೆ ಪಡೆಯುವುದು ಅತ್ಯಗತ್ಯ.
ಆರೋಗ್ಯವೇ ಸಂಪತ್ತು – ಥೈರಾಯ್ಡ್ ಸಮಸ್ಯೆ ಬಂದಾಗ ನಿರ್ಲಕ್ಷ್ಯ ಬೇಡ!
