ಕೆ.ಆರ್.ಪೇಟೆ,ತಾಲ್ಲೂಕು ತೋಟಗಾರಿಕೆ ಅಧಿಕಾರಿ ಡಾ.ಆರ್.ಜಯರಾಂ(51) ಅವರ ಶವವು ಅನುಮಾನಸ್ಪದವಾಗಿ ಕೆರೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಸ್ಥಿತಿಯಲ್ಲಿ ಪತ್ತೆಯಾಗಿದೆ .
ಡಾ.ಆರ್.ಜಯರಾಂ ಅವರು ಕಳೆದ 20ವರ್ಷಗಳಿಂದ ಕೆ.ಆರ್.ಪೇಟೆ ತಾಲ್ಲೂಕು ತೋಟಗಾರಿಕಾ ಇಲಾಖೆಯಲ್ಲಿ ಸಹಾಯಕ ತೋಟಗಾರಿಕೆ ಅಧಿಕಾರಿಯಾಗಿ ಉತ್ತಮ ಸೇವೆ ಸಲ್ಲಿಸುವ ಮೂಲಕ ರೈತರು ಮತ್ತು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದರು. ಸದಾ ಸ್ನೇಹಿತರು ಮತ್ತು ಸಹಪಾಠಿಗಳೊಂದಿಗೆ ಉತ್ತಮ ಬಾಂದವ್ಯ ಹೊಂದಿದ್ದರು. ಪ್ರತಿಯೊಬ್ಬರನ್ನೂ ಸಾರ್ ಎಂದೇ ಸಂಭೋದಿಸಿ ಕರೆಯುವ ಮೂಲಕ ಎಲ್ಲರಿಂದಲೂ ಉತ್ತಮ ಅಧಿಕಾರಿ ಎಂದೇ ಗೌರವ ಪಡೆದಿದ್ದರು. ಆದರೆ ಸೋಮವಾರ ರಾತ್ರಿ ಸುಮಾರು 9ಗಂಟೆಗೆ ಮನೆಯಿಂದ ಹೊರ ಹೋಗಿದ್ದ ಜಯರಾಂ ಅವರು ಕೆ.ಆರ್.ಪೇಟೆ ಪಟ್ಟಣದ ದೇವೀರಮ್ಮಣ್ಣಿ ಕೆರೆಯ ಬಸವಣ್ಣನ ದೇವಾಲಯದ ಬಳಿ, ಕೆರೆಯ ದಡದಲ್ಲಿ ತಮ್ಮ ಬೈಕ್ ನಿಲ್ಲಿಸಿ, ಕೆರೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದರು. ಮಂಗಳವಾರ ದಿನವಿಡೀ ಪಟ್ಟಣದ ಅಗ್ನಿಶಾಮಕ ಇಲಾಖೆಯ ಅಧಿಕಾರಿಗಳು ಈಜು ಮತ್ತು ಮುಳುಗು ತಜ್ಞರೊಂದಿಗೆ ಜಲ ಕ್ಯಾಮರಾ ಬಳಿಸಿ ಶವಕ್ಕಾಗಿ ಹುಡುಕಾಟ ನಡೆಸಿದ್ದರೂ ಸಹ ಪತ್ತೆಯಾಗಿರಲಿಲ್ಲ. ಆದರೆ ಬುಧವಾರ ಬೆಳಿಗ್ಗೆ ಬೈಕ್ ನಿಲ್ಲಿಸಿದ್ದ ಅನತಿ ದೂರದಲ್ಲಿ ಕೆರೆಯಲ್ಲಿ ಜಯರಾಂ ಅವರ ಶವವು ತೇಲುವ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಕೆ.ಆರ್.ಪೇಟೆ ಪಟ್ಟಣ ಪೊಲೀಸರು ಅಗ್ನಿಶಾಮಕ ದಳದ ಅಧಿಕಾರಿಗಳ ಸಹಕಾರದಿಂದ
ಶವವನ್ನು ನೀರಿನಿಂದ ಮೇಲೆತ್ತಿ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ಮಾಡಿಸಿ ವಾರಸುದಾರರಿಗೆ ಹಸ್ತಾಂತರ ಮಾಡಿದರು.
ನಂತರ ಕೆ.ಆರ್.ಪೇಟೆ ಪಟ್ಟಣದ ಮೈಸೂರು ರಸ್ತೆಯಲ್ಲಿರುವ ಡಾ.ಆರ್.ಜಯರಾಂ ಅವರ ನಿವಾಸದಲ್ಲಿ ಮಧ್ಯಾಹ್ನದ ವರೆಗೆ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಗಿತ್ತು. ತಾಲ್ಲೂಕಿನ ವಿವಿಧ ಭಾಗಗಳಿಂದ ಆಗಮಿಸಿದ್ದ ಅಪಾರ ಸಂಖ್ಯೆಯ ರೈತರು ಮತ್ತು ಸಾರ್ವಜನಿಕರು ಅಂತಿಮ ದರ್ಶನ ಪಡೆದು ಸಂತಾಪ ಸೂಚಿಸಿದರು. ನಂತರ ಜಯರಾಂ ಅವರ ಜಮೀನಿನಲ್ಲಿ ಅಂತ್ಯ ಸಂಸ್ಕಾರ ನೇರವೇರಿಸಲಾಯಿತು.
ಮೃತರ ನಿಧನಕ್ಕೆ ಶಾಸಕ ಹೆಚ್.ಟಿ.ಮಂಜು, ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್, ತಹಸೀಲ್ದಾರ್ ಡಾ.ಎಸ್.ಯು.ಅಶೋಕ್, ಸಮಾಜ ಸೇವಕ ಆರ್.ಟಿ.ಓ.ಮಲ್ಲಿಕಾರ್ಜುನ್, ಮನ್ಮುಲ್ ನಿರ್ದೇಶಕ ಡಾಲು ರವಿ, ಪುರಸಭಾ ಅಧ್ಯಕ್ಷೆ ಪಂಕಜಾಪ್ರಕಾಶ್, ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಸ್.ಆರ್.ಆನಂದಕುಮಾರ್, ಉಪಾಧ್ಯಕ್ಷ ಪದ್ಮೇಶ್, ಕಾರ್ಯದರ್ಶಿ ಎಲ್.ಎಸ್.ಧರ್ಮಪ್ಪ, ನೌಕರರ ಸಂಘದ ನಿರ್ದೇಶಕ ವಿ.ಎಂ.ರವಿಕುಮಾರ್ ಸೇರಿದಂತೆ ವಿವಿಧ ಗಣ್ಯರು ಅಂತಿಮ ದರ್ಶನ ಪಡೆದು ಸಂತಾಪ ಸೂಚಿಸಿದರು.
ವರದಿ- ಶ್ರೀನಿವಾಸ್ ಆರ್.
