ಬೆಂಗಳೂರು, ಅಕ್ಟೋಬರ್ 23:ನಗರದ ಹೆಚ್ಎಸ್ಆರ್ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮತ್ತೊಂದು “ಲವ್ ಜಿಹಾದ್” ಆರೋಪದ ಪ್ರಕರಣ ಬೆಳಕಿಗೆ ಬಂದಿದೆ. ಮೊಹಮದ್ ಇಶಾಕ್ ಎಂಬ ಯುವಕ, ಮದುವೆಯ ಭರವಸೆ ನೀಡಿ ಹಿಂದೂ ಯುವತಿಗೆ ಮೋಸ ಮಾಡಿದ ಘಟನೆ ದಾಖಲಾಗಿದೆ.
ಪೊಲೀಸ್ ವರದಿಯ ಪ್ರಕಾರ, ಇಶಾಕ್ ಮತ್ತು ಯುವತಿ 2024ರ ಅಕ್ಟೋಬರ್ 17ರಂದು ಇನ್ಸ್ಟಾಗ್ರಾಂ ಮೂಲಕ ಪರಿಚಿತರಾದರು. ಕೆಲವೇ ದಿನಗಳಲ್ಲಿ ಇಶಾಕ್ ಯುವತಿಗೆ ಪ್ರೀತಿ ವ್ಯಕ್ತಪಡಿಸಿ ಮದುವೆಯಾಗುವುದಾಗಿ ಭರವಸೆ ನೀಡಿದ. 2024ರ ಅಕ್ಟೋಬರ್ 30ರಂದು ಇಬ್ಬರೂ ಥಣಿಸಂದ್ರದ ಮಾಲ್ನಲ್ಲಿ ಭೇಟಿಯಾಗಿ ಬಳಿಕ ದಾಸರಹಳ್ಳಿಯ ಖಾಸಗಿ ಹೋಟೆಲ್ನಲ್ಲಿ ಕೊಠಡಿ ಬುಕ್ ಮಾಡಿಕೊಂಡು, ಮದುವೆ ಆಗುವುದಾಗಿ ನಂಬಿಸಿ ಯುವತಿಯೊಂದಿಗೆ ಶಾರೀರಿಕ ಸಂಪರ್ಕ ಬೆಳೆಸಿದ್ದಾನೆ ಎಂಬ ಆರೋಪವಿದೆ.
ನಂತರ ಯುವತಿಗೆ ಇಶಾಕ್ನ ವಾಸ್ತವಿಕ ಸ್ವಭಾವ ತಿಳಿದುಬಂದಿದ್ದು, ಅವನಿಗೆ ಹಲವು ಯುವತಿಯರ ಜೊತೆ ಸಂಪರ್ಕವಿರುವುದು ಗೊತ್ತಾಗಿದೆ. ಬಳಿಕ, 2025ರ ಸೆಪ್ಟೆಂಬರ್ 14ರಂದು ಇಶಾಕ್ ಮತ್ತೊಬ್ಬ ಮುಸ್ಲಿಂ ಯುವತಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾನೆ. ಈ ವಿಚಾರ ತಿಳಿದು ಯುವತಿ ಇಶಾಕ್ಗೆ ಪ್ರಶ್ನೆ ಮಾಡಿದಾಗ, “ನಿನ್ನ ದಾರಿ ನೀನು ನೋಡಿಕೋ” ಎಂದು ಹೇಳಿ, ಕರೆ ಮಾಡಿದರೆ ಕೊಲೆ ಮಾಡುವ ಬೆದರಿಕೆ ಹಾಕಿದ್ದಾನೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಯುವತಿಯ ದೂರು ಆಧರಿಸಿ ಹೆಚ್ಎಸ್ಆರ್ ಲೇಔಟ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
