ಟಿ.ನರಸೀಪುರ : ಮತದಾನದ ಹಕ್ಕು ಸಂವಿಧಾನದ ಮೂಲಕ ಪ್ರಜಾಪ್ರಭುತ್ವದ ಮೂಲಾಧಾರವಾಗಿದ್ದು, ಅದನ್ನು ಯಾವುದೇ ರಾಜಕೀಯ ಪಕ್ಷ ಕದಿಯಲು ಯತ್ನಿಸುವುದು ಸಂವಿಧಾನ ವಿರೋಧಿ ಕೃತ್ಯ ಎಂದು ಸಮಾಜ ಕಲ್ಯಾಣ ಇಲಾಖೆ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಹೆಚ್.ಸಿ.ಮಹದೇವಪ್ಪ ಖಂಡಿಸಿದರು.
ಪಟ್ಟಣದ ಕೊಳ್ಳೇಗಾಲ ಮುಖ್ಯ ರಸ್ತೆಯ ಬಣ್ಣಾರಿ ಅಮ್ಮನವರ ದೇವಸ್ಥಾನದ ಬಳಿ ಇರುವ ಕಾಂಗ್ರೆಸ್ ಕಚೇರಿಯಲ್ಲಿ ವೋಟ್ ಚೋರಿ ವಿರೋಧಿ ಸಹಿ ಸಂಗ್ರಹ ಅಭಿಯಾನದಲ್ಲಿ ಭಾಗವಹಿಸಿ ಮಾತನಾಡಿ ಭಾರತೀಯ ಜನತಾ ಪಾರ್ಟಿ ಮತ್ತು ಕೋಮುವಾದಿ ಪಕ್ಷಗಳು ಮತವನ್ನು ಕದಿಯುವ ಪ್ರಯತ್ನ ಮಾಡದೆ, ಮತದಾರರ ಪಟ್ಟಿಯಿಂದ ಯಾರನ್ನೂ ಕೈಬಿಡದೆ, ಚುನಾವಣೆಯನ್ನು ಸಂಪೂರ್ಣ ನಿಷ್ಪಕ್ಷಪಾತವಾಗಿ ನಡೆಸುವಂತೆ ಚುನಾವಣಾ ಆಯೋಗವನ್ನು ಆಗ್ರಹಿಸುತ್ತೇನೆಂದರು.

ಮತದಾನ ಪ್ರಜಾಪ್ರಭುತ್ವದ ಪವಿತ್ರ ಹಕ್ಕು
ಬಾಬಾ ಸಾಹೇಬ್ ಅಂಬೇಡ್ಕರ್ ರವರು ಸಂವಿಧಾನದಲ್ಲಿ ಪ್ರತಿಯೊಬ್ಬ ನಾಗರಿಕನಿಗೂ ಬಡವ, ಬಲ್ಲಿಗ, ಸಾಮಾನ್ಯ ಅಥವಾ ಶ್ರೀಮಂತ ಎನ್ನದೆ — ಒಂದೇ ಮತದಾನ ಹಕ್ಕು ನೀಡಿದರು. ಇದು ನಮ್ಮ ದೇಶದ ಪ್ರಜಾಪ್ರಭುತ್ವದ ಪವಿತ್ರ ಹಕ್ಕು. ಆದರೆ ಇಂದಿನ ಕೋಮುವಾದಿ ಪಕ್ಷಗಳು ಆ ಹಕ್ಕುನ್ನು ಕಸಿಯುವ ಕೆಲಸಕ್ಕೆ ಕೈಹಾಕಿವೆ. ಮತದಾರರ ಪಟ್ಟಿಯಲ್ಲಿ ಅನೇಕ ಸತ್ಯಸಂಧ ಮತದಾರರನ್ನು ಕೈಬಿಡುವ ದುರ್ಘಟನೆಯು ನಡೆಯುತ್ತಿದೆ ಎಂದು ಅವರು ಆರೋಪಿಸಿದರು.
ಮತದಾನದಲ್ಲಿ ಅಕ್ರಮ ನಡೆಯುವುದು ಪ್ರಜಾಪ್ರಭುತ್ವದ ಆತ್ಮಹತ್ಯೆ
ಜನತೆಯ ವಿಶ್ವಾಸ ಮತ್ತು ಜನಶಕ್ತಿಯ ಬಲದಿಂದಲೇ ಸರ್ಕಾರ ನಿರ್ಮಾಣವಾಗಬೇಕು. ಜನರ ಇಚ್ಛಾಶಕ್ತಿಗೆ ಅಡ್ಡಿಯಾಗಿ ಮತದಾನದಲ್ಲಿ ಅಕ್ರಮ ನಡೆಯುವುದು ಪ್ರಜಾಪ್ರಭುತ್ವದ ಆತ್ಮಹತ್ಯೆಯಂತಾಗಿದೆ. ಚುನಾವಣಾ ಆಯೋಗವು ಕಠಿಣ ಕ್ರಮ ಕೈಗೊಂಡು ನಿಷ್ಪಕ್ಷಪಾತ ಚುನಾವಣೆಯನ್ನು ಖಚಿತಪಡಿಸಬೇಕು,ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ವೋಟ್ ಚೋರಿ ಸಹಿ ಸಂಗ್ರಹ ಅಭಿಯಾನಕ್ಕೆ ಸಚಿವರು ಸಹಿ ಮಾಡುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮೈಸೂರು ಜಿಲ್ಲಾ ಗ್ರಾಮಾಂತರ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಬಿ.ಜೆ. ವಿಜಯ್ ಕುಮಾರ್ ರವರು ಅಧ್ಯಕ್ಷತೆ ವಹಿಸಿದ್ದರು ಈ ವೇಳೆ ಟಿ.ನರಸೀಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ.ಡಿ.ಬಸವರಾಜು ಬನ್ನೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಚನ್ನಕೇಶವ, ತಾ.ಪಂ.ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷರುಗಳಾದ ಕುಕ್ಕೂರು ಗಣೇಶ್,ರಾಮಲಿಂಗಯ್ಯ,ಕಾಂಗ್ರೆಸ್ ನ ಅಸಂಘಟಿತ ಕಾರ್ಮಿಕರ ವಿಭಾಗದ ಜಿಲ್ಲಾಧ್ಯಕ್ಷ ಮೇದನಿ ಕುಮಾರ್, ಹೆಮ್ಮಿಗೆ ಶೇಷಾದ್ರಿ, ಕಲಿಯೂರು ಶಿವಣ್ಣ,ಕೇತಹಳ್ಳಿ ಸಿದ್ದಶೆಟ್ಟಿ,ಕನಕರಾಜು,ಸಚಿವರ ಆಪ್ತ ಸಹಾಯಕ ಬಿ.ಬಸವರಾಜು, ದೊಡ್ಡೇ ಬಾಗಿಲು ಮಲ್ಲಿಕಾರ್ಜುನ ಸ್ವಾಮಿ, ಮಹದೇವಯ್ಯ( ಖರ್ಗೆ)ಸೇರಿದಂತೆ ಕಾಂಗ್ರೆಸ್ ಪಕ್ಷದ ನೂರಾರು ಮುಖಂಡರು ಕಾರ್ಯಕರ್ತರು ಹಾಜರಿದ್ದರು.
- ನಾಗೇಂದ್ರ ಕುಮಾರ್ ಎಂ.

[…] ಇದನ್ನು ಓದು: ಟಿ.ನರಸೀಪುರ : ಮತದಾನದ ಹಕ್ಕು ಸಂವಿಧಾನದ ಮೂಲ… […]