ಬೆಂಗಳೂರು, ಅ.27: ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಬಡಾವಣೆ ಅಭಿವೃದ್ಧಿಗೆ ನೂತನ ನಿಯಮಾವಳಿ ರೂಪಿಸಿದ್ದು, ಈಗಿನಿಂದ ಸ್ಥಳೀಯ ಯೋಜನಾ ಪ್ರದೇಶದ ಹೊರಗಿನ ಗ್ರಾಮ ಪಂಚಾಯತ್ ವ್ಯಾಪ್ತಿಯ ಭೂಮಿಗಳಲ್ಲಿ ಬಡಾವಣೆ ನಿರ್ಮಾಣಕ್ಕೆ ಗ್ರಾಮ ಪಂಚಾಯಿತಿಯೇ ಅನುಮೋದನೆ ನೀಡುವ ಅಧಿಕಾರ ಹೊಂದಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸುತ್ತೋಲೆ ಹೊರಡಿಸಿದೆ.
ಭೂ ಪರಿವರ್ತನೆಗೊಂಡ ಗ್ರಾಮ ಪಂಚಾಯತ್ ವ್ಯಾಪ್ತಿಯ ಭೂಮಿಗಳಿಗೆ ಮಾತ್ರ ಈ ನಿಯಮ ಅನ್ವಯವಾಗಲಿದ್ದು, ಅಭಿವೃದ್ಧಿಪಡಿಸಲಾದ ಬಡಾವಣೆಯ ವಿನ್ಯಾಸಕ್ಕೆ ಸಂಬಂಧಿಸಿದ ಎಲ್ಲಾ ಇಲಾಖೆಗಳ ನಿರಾಕ್ಷೇಪಣಾ ಪತ್ರಗಳೊಂದಿಗೆ ಗ್ರಾಮ ಪಂಚಾಯಿತಿಗೆ ಅರ್ಜಿ ಸಲ್ಲಿಸಿ ಅನುಮತಿ ಪಡೆಯಬೇಕೆಂದು ತಿಳಿಸಲಾಗಿದೆ.
ಬಡಾವಣೆಯ ರಸ್ತೆ, ಉದ್ಯಾನ, ಚರಂಡಿ, ನೀರು ಮತ್ತು ವಿದ್ಯುತ್ ಸಂಪರ್ಕದ ವಿನ್ಯಾಸಗಳಿಗೆ ಸಂಬಂಧಿತ ಇಲಾಖೆಗಳ ಅನುಮೋದನೆ ಕಡ್ಡಾಯವಾಗಿದ್ದು, ಅಭಿವೃದ್ಧಿಪಡಿಸಿದ ನಂತರ ಸಾರ್ವಜನಿಕ ಪ್ರದೇಶಗಳನ್ನು ಹಕ್ಕು ಪರಿತ್ಯಾಜನಾ ಪತ್ರದ ಮೂಲಕ ಗ್ರಾಮ ಪಂಚಾಯಿತಿಗೆ ಬಿಟ್ಟುಕೊಡಬೇಕು ಎಂದು ಸೂಚಿಸಲಾಗಿದೆ.
ಇದನ್ನು ಓದಿ: ದೇಶವ್ಯಾಪಿ ಮತಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್)ಗೆ ಚುನಾವಣಾ ಆಯೋಗ ಸಜ್ಜು — ಇಂದು ಘೋಷಣೆ ಸಾಧ್ಯತೆ
ಅಭಿವೃದ್ಧಿದಾರರು ಮೂಲಭೂತ ಸೌಕರ್ಯಗಳ ಗುಣಮಟ್ಟದ ಖಾತರಿಗಾಗಿ ಒಟ್ಟು ವೆಚ್ಚದ ಶೇಕಡಾ 10ರಷ್ಟು ಮೊತ್ತವನ್ನು ಬ್ಯಾಂಕ್ ಭದ್ರತೆ ರೂಪದಲ್ಲಿ ಒಂದು ವರ್ಷ ಕಾಲ ಗ್ರಾಮ ಪಂಚಾಯಿತಿಯಲ್ಲಿ ಇರಿಸಬೇಕಾಗಿದೆ. ಅಲ್ಲದೆ ಮೇಲ್ವಿಚಾರಣಾ ಶುಲ್ಕವಾಗಿ ಶೇಕಡಾ 5ರಿಂದ 10ರ ವರೆಗೆ ಸಂಬಂಧಿತ ಇಲಾಖೆಗೆ ಪಾವತಿಸಬೇಕೆಂದು ಸುತ್ತೋಲೆಯಲ್ಲಿ ಹೇಳಲಾಗಿದೆ.
ಈ ಕ್ರಮದ ಮೂಲಕ ಗ್ರಾಮೀಣ ಪ್ರದೇಶಗಳ ಬಡಾವಣೆ ಅಭಿವೃದ್ಧಿಯಲ್ಲಿ ಪಾರದರ್ಶಕತೆ, ಹೊಣೆಗಾರಿಕೆ ಮತ್ತು ಮೂಲಭೂತ ಸೌಕರ್ಯಗಳ ಗುಣಮಟ್ಟವನ್ನು ಖಚಿತಪಡಿಸುವ ಉದ್ದೇಶ ಸರ್ಕಾರದಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಇಲಾಖೆ ತಿಳಿಸಿದೆ.

[…] ಇದನ್ನು ಓದಿ: ಬೆಂಗಳೂರು- ಗ್ರಾಮ ಪಂಚಾಯತ್ಗಳಿಗೆ ಬಡಾವಣೆ… […]