ನವದೆಹಲಿ, ನವೆಂಬರ್ 5:ಹಣದಲ್ಲಿ ಶ್ರೀಮಂತರಾದವರನ್ನು ನಾವು ಹಲವಾರು ಬಾರಿ ನೋಡಿದ್ದೇವೆ. ಆದರೆ ಮನಸ್ಸಿನಲ್ಲಿ ಶ್ರೀಮಂತಿಕೆ ಹೊಂದಿರುವವರು ಅಪರೂಪ. ಇಂತಹ ಅಪರೂಪದ ಮಾನವೀಯತೆಯ ಉದಾಹರಣೆಯಾಗಿ ಗುಜರಾತ್ನ ಅಮ್ರೇಲಿ ಜಿಲ್ಲೆಯ ಉದ್ಯಮಿ ಬಾಬುಭಾಯ್ ಜೀರಾವಾಲ ಹೆಸರು ಕೇಳಿಬಂದಿದೆ.
ಸ್ವರ್ಗಸ್ಥ ತಾಯಿಯ ಆಸೆ ತೀರಿಸಲು ಅವರು ತಮ್ಮ ಊರಿನ 299 ರೈತರ ಬ್ಯಾಂಕ್ ಸಾಲವನ್ನು ತೀರಿಸಿ, ಎಲ್ಲರಿಗೂ ಋಣಮುಕ್ತಿ ತಂದಿದ್ದಾರೆ. ಇದಕ್ಕಾಗಿ ಅವರು ₹89.89 ಲಕ್ಷ (ಸುಮಾರು 90 ಲಕ್ಷ ರೂ) ಹಣವನ್ನು ಜೀರಾ ಸೇವಾ ಸಹಕಾರಿ ಮಂಡಲ ಬ್ಯಾಂಕ್ಗೆ ಕಟ್ಟಿದ್ದಾರೆ.
ಮೂರು ದಶಕಗಳಿಂದ ರೈತರು ಬ್ಯಾಂಕ್ಗೆ ಅಡಮಾನ ಇಟ್ಟಿದ್ದ ಜಮೀನು ಪತ್ರಗಳನ್ನು ಇದೀಗ ವಾಪಸ್ ಪಡೆಯುತ್ತಿದ್ದಾರೆ. ಈ ಮೂಲಕ ಸುಮಾರು 290ಕ್ಕೂ ಹೆಚ್ಚು ಕುಟುಂಬಗಳು ಸಾಲಮುಕ್ತರಾಗಿ, ಹೊಸ ಜೀವನವನ್ನು ಆರಂಭಿಸಲು ಅವಕಾಶ ಪಡೆದಿವೆ.
ಇದನ್ನು ಓದಿ: ಜನತೆಗೆ ಮತ್ತೆ ದರ ಏರಿಕೆ ಶಾಕ್ ಕೊಟ್ಟ ಕೆಎಂಎಫ್ – ನಂದಿನಿ ತುಪ್ಪದ ಪರಿಷ್ಕೃತ ದರ ಇಂದಿನಿಂದಲೇ ಜಾರಿ
ತಾಯಿಯ ಕನಸು – ಮಗನಿಂದ ಸಾರ್ಥಕತೆ
ಬಾಬುಭಾಯ್ ಅವರ ತಾಯಿ ಬದುಕಿದ್ದಾಗಲೇ ಊರಿನ ರೈತರು ಸಾಲದ ಬಾಧೆಯಿಂದ ಬಳಲುವುದನ್ನು ಕಂಡು ತೀವ್ರ ಕಳವಳಗೊಂಡಿದ್ದರು. “ನಮ್ಮ ಊರಿನವರು ಸಾಲದಿಂದ ಮುಕ್ತಿ ಪಡೆಯಬೇಕು” ಎಂಬುದು ಅವರ ಹಾರೈಕೆ. ಆದರೆ ಆ ಆಸೆ ಅವರ ಬದುಕಿನಲ್ಲಿ ಈಡೇರಲಿಲ್ಲ.
ತಾಯಿಯ ಪುಣ್ಯತಿಥಿಯ ದಿನ ಬಾಬುಭಾಯ್ ಜೀರಾವಾಲ ಅವರು ಆ ಕನಸನ್ನು ನಿಜಗೊಳಿಸಿದ್ದಾರೆ. ತಮ್ಮ ಊರಿನವರ ಸಾಲವನ್ನು ತೀರಿಸುವ ಮೂಲಕ ತಾಯಿಯ ಆತ್ಮಕ್ಕೆ ಶಾಂತಿ ನೀಡಿರುವಂತೆಯೇ ಊರಿನ ಜನರ ಮನದಲ್ಲೂ ಅಪಾರ ಕೃತಜ್ಞತೆಯನ್ನು ಮೂಡಿಸಿದ್ದಾರೆ.
ಮೂರು ದಶಕದ ಹಳೆಯ ವ್ಯಾಜ್ಯಕ್ಕೆ ತೆರೆ
1990ರ ದಶಕದಲ್ಲಿ ಜೀರಾ ಸೇವಾ ಸಹಕಾರಿ ಮಂಡಲ ಬ್ಯಾಂಕ್ನ ಅಂದಿನ ಸಮಿತಿ ಅಧಿಕಾರಿಗಳು ರೈತರ ಹೆಸರಿನಲ್ಲಿ ಮೋಸದಿಂದ ಸಾಲ ಪಡೆದಿದ್ದರು. ರೈತರು ತಮ್ಮದಲ್ಲದ ಸಾಲದ ಹೊರೆ ಹೊತ್ತು ಮೂರು ದಶಕಗಳಿಂದ ಕಷ್ಟದಲ್ಲಿದ್ದರು. ಈ ಪ್ರಕರಣ 1995ರಿಂದಲೂ ನ್ಯಾಯಾಲಯದ ಹಾದಿಯಲ್ಲಿ ಇತ್ತು.
ಆಗಿನಿಂದ ರೈತರಿಗೆ ಹೊಸ ಸಾಲ ಸಿಗುತ್ತಿರಲಿಲ್ಲ, ಸರ್ಕಾರದ ಯೋಜನೆಗಳ ಪ್ರಯೋಜನವೂ ಸಿಗುತ್ತಿರಲಿಲ್ಲ. ಬಾಬುಭಾಯ್ ಅವರ ಉದಾರತೆ ಈಗ ಆ ಎಲ್ಲಾ ಕಷ್ಟಗಳಿಗೆ ತೆರೆ ಎಳೆದಂತಾಗಿದೆ.
ಈ ಮಹಾನ್ ಕೃತ್ಯದಿಂದ ಬಾಬುಭಾಯ್ ಜೀರಾವಾಲ ಅವರನ್ನು “ಮನಸ್ಸಿನ ಶ್ರೀಮಂತ”ನೆಂದು ಗುಜರಾತ್ ಮಾತ್ರವಲ್ಲ, ದೇಶವೇ ಪ್ರಶಂಸಿಸಿದೆ.

[…] ಇದನ್ನು ಓದಿ: ಸ್ವರ್ಗಸ್ಥ ತಾಯಿಯ ಆಸೆ ತೀರಿಸಿದ ಮಗ – ಊರಿನ… […]