ಬೆಂಗಳೂರು, ನ.13: “ಇಂದಿನ ದಿನಮಾನಗಳಲ್ಲಿ ದಾರ್ಶನಿಕರ ಮೌಲ್ಯಗಳು ಕೇವಲ ಪುಸ್ತಕಗಳಲ್ಲಿ ಸೀಮಿತವಾಗಿವೆ. ಬುದ್ಧ, ಬಸವ, ಗಾಂಧಿ ಮತ್ತು ಅಂಬೇಡ್ಕರ್ರ ಚಿಂತನೆಗಳನ್ನು ನಾವು ಓದುತ್ತಿದ್ದೇವೆ, ಆದರೆ ಅದರಂತೆ ಬದುಕುತ್ತಿಲ್ಲ. ಈ ಮೌಲ್ಯಗಳು ಮಣ್ಣುಪಾಲಾಗದಂತೆ ಸಮಾಜದ ಪ್ರತಿಯೊಬ್ಬರೂ ತಾವು ನಡೆದುಕೊಳ್ಳಬೇಕು,” ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಡಾ. ಕೆ. ಷರೀಫಾ ಅವರು ಅಭಿಪ್ರಾಯಪಟ್ಟರು.
ನಗರದ ಶೇಷಾದ್ರಿಪುರಂ ಕಾಲೇಜಿನ ಸಭಾಂಗಣದಲ್ಲಿ ಬುದ್ಧ ಬಸವ ಗಾಂಧಿ ಸಾಂಸ್ಕೃತಿಕ ಟ್ರಸ್ಟ್, ಅನಿಕೇತನ ಕನ್ನಡ ಬಳಗ ಹಾಗೂ ಪ್ರೊ. ಬಿ. ಕೃಷ್ಣಪ್ಪ ಟ್ರಸ್ಟ್ ಸಹಯೋಗದಲ್ಲಿ ಆಯೋಜಿಸಲಾಗಿದ್ದ ರಾಜ್ಯ ಮಟ್ಟದ ಆರನೇ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅವರು ಮುಂದುವರೆದು, “ಇಂದಿನ ಆಧುನಿಕ ಯುಗದಲ್ಲಿ ಮಹಿಳೆಯರು ಸಾಹಿತ್ಯ ಮತ್ತು ಸಂಸ್ಕೃತಿಯ ಕ್ರಾಂತಿಗೆ ಮುನ್ನಡೆಯಬೇಕು. ಮನೆಯ ಸಂಸಾರವನ್ನು ಹೊರುತ್ತಲೇ ಸಾಮಾಜಿಕ ಸಮಸ್ಯೆಗಳಿಗೆ ತಾತ್ವಿಕವಾಗಿ ಸ್ಪಂದಿಸುವ ಸಾಮರ್ಥ್ಯವನ್ನು ಬೆಳೆಸಬೇಕು. ಮನುಷ್ಯ ಸಂಬಂಧಗಳು ದಿನದಿಂದ ದಿನಕ್ಕೆ ದೂರವಾಗುತ್ತಿವೆ, ಮನೋವ್ಯಾಪಾರ ಸಂಸ್ಕೃತಿಯೇ ಎಲ್ಲೆಲ್ಲೂ ಮೈದಾಳುತ್ತಿದೆ,” ಎಂದು ವಿಷಾದಿಸಿದರು.

ಮಹಿಳೆಯರಲ್ಲಿ ಸಾಮಾಜಿಕ ಜಾಗೃತಿ ಮೂಡಿಸುವುದು ಹಾಗೂ ಯುವ ಪೀಳಿಗೆಯಲ್ಲಿ ಪ್ರಜ್ಞೆ ಮತ್ತು ಸಂಸ್ಕಾರಪರ ಜೀವನಕ್ಕೆ ಪ್ರೇರಣೆಯೊದಗಿಸುವ ಕೆಲಸವನ್ನು ಬುದ್ಧ ಬಸವ ಗಾಂಧಿ ಸಾಂಸ್ಕೃತಿಕ ಟ್ರಸ್ಟ್ ಮಾಡುತ್ತಿದೆ. “ಡಾ. ಸಿಸಿರಾ ಅವರ ನೇತೃತ್ವದಲ್ಲಿ ಟ್ರಸ್ಟ್ ಕೈಗೊಂಡಿರುವ ಕೆಲಸ ಶ್ಲಾಘನೀಯ. ಇಂತಹ ಸಂಸ್ಥೆಗಳು ಸಾಂಸ್ಕೃತಿಕ ಪುನರುಜ್ಜೀವನಕ್ಕೆ ಹಾದಿ ಹಾಸುತ್ತಿವೆ,” ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಸಮಾವೇಶದ ಅಧ್ಯಕ್ಷೆ ಕವಯಿತ್ರಿ ಪುಷ್ಪಾ ಬಸವರಾಜ ಅವರು ಮಾತನಾಡಿ, “ಮಹಿಳೆಯರ ಸಮಸ್ಯೆಗಳಿಗೆ ಪರಿಹಾರ ಸಿಗಲು ಸಂಘಟಿತ ಶಕ್ತಿ, ಸಾಮರಸ್ಯ ಮತ್ತು ಗೌರವಯುತ ಜೀವನ ಅಗತ್ಯ. ಯಾವುದೇ ಸಂಕಷ್ಟದ ಸಮಯದಲ್ಲೂ ಮಹಿಳೆಯರು ಧೈರ್ಯದಿಂದ ಎದುರಿಸಬೇಕು,” ಎಂದು ಸಲಹೆ ನೀಡಿದರು.

ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡರು ಸಮಾವೇಶದ ಸಂದರ್ಭದಲ್ಲಿ ಸಾಮಾಜಿಕ, ಶೈಕ್ಷಣಿಕ ಮತ್ತು ಸಾಹಿತ್ಯ ಸೇವೆಗಳಲ್ಲಿ ಕೊಡುಗೆ ನೀಡಿದ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಪ್ರೇಮಾ ಭಜಂತ್ರಿ (ಎನ್ಸಿಸಿ ಸೇವೆ), ಲಲಿತಾ ಚೊಂದಮ್ಮ ಬಿಟ್ಟೀರಾ (ಮಹಿಳಾ ಸಾಹಿತ್ಯ), ಸುಜಾತಾ ರಾಜಣ್ಣ (ಸಾಮಾಜಿಕ ಸೇವೆ), ಕೆ.ಜಿ. ಕುಮಾರ್ (ಸಾಮಾಜಿಕ ಹೋರಾಟ), ಜೇಮ್ಸ್ ಕಾಮತ್ (ಪತ್ರಿಕಾ ಮಾಧ್ಯಮ), ಡಾ. ಶಾಂತರಾಜು (ಶೈಕ್ಷಣಿಕ ಸೇವೆ), ಎಂ.ಸಿ. ರಾಜು (ಪ್ರಗತಿಪರ ರೈತ) ಮತ್ತು ಗುಂಡೀಗೆರೆ ವಿಶ್ವನಾಥ್ (ಸಾಹಿತ್ಯ ಸೇವೆ) ಅವರಿಗೆ ಸನ್ಮಾನ ಮಾಡಲಾಯಿತು.

ಈ ಸಂದರ್ಭದಲ್ಲಿ ಬುದ್ಧ ಬಸವ ಗಾಂಧಿ ಸಾಂಸ್ಕೃತಿಕ ಟ್ರಸ್ಟ್ನ ಅಧ್ಯಕ್ಷ ಡಾ. ಎಸ್. ರಾಮಲಿಂಗೇಶ್ವರ ಪ್ರಾಸ್ತಾವಿಕ ನುಡಿಗಳಾಡಿದರು. ಸಮಾಜಸೇವಕಿ ಲಯನ್ ಮಂಗಳಗೌರಿ, ಕವಯಿತ್ರಿ ಅಂಬುಜಾ ಪ್ರಕಾಶ್, ಗಾಯಕಿ ಗೌರಮ್ಮ, ಲೇಖಕ ಡಾ. ಆರ್. ವಾದಿರಾಜ್ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಕೊನೆಯಲ್ಲಿ ಶಾಸಕರಾದ ಎಸ್.ಎಲ್. ಭೋಜೇಗೌಡರು ಸಮಾವೇಶದ ಅಧ್ಯಕ್ಷೆ ಪುಷ್ಪಾ ಬಸವರಾಜ ಬಣಕಾರ್ ಅವರಿಗೆ ಸಿದ್ದಗಂಗಾಶ್ರೀ ಪ್ರಶಸ್ತಿ ನೀಡಿ ಅಭಿನಂದಿಸಿದರು.

ಈ ರಾಜ್ಯಮಟ್ಟದ ಮಹಿಳಾ ಸಾಹಿತ್ಯ ಮತ್ತು ಸಂಸ್ಕೃತಿ ಸಮಾವೇಶವು ಕನ್ನಡ ಸಾಹಿತ್ಯ ಲೋಕದಲ್ಲಿ ಮಹಿಳೆಯರ ಪಾತ್ರ, ಸಾಮಾಜಿಕ ಜವಾಬ್ದಾರಿ ಮತ್ತು ಮಾನವೀಯ ಮೌಲ್ಯಗಳ ಪುನರುಜ್ಜೀವನದ ಕುರಿತ ಚರ್ಚೆಗಳಿಗೆ ವೇದಿಕೆಯಾಯಿತು.

