ಲಂಡನ್: ಕಾಲಿನ್ಸ್ ಡಿಕ್ಷನರಿ ಪ್ರಕಟಿಸಿರುವ 2025ರ ವರ್ಷದ ಪದ (Word of the Year) ಪಟ್ಟಿಯಲ್ಲಿ ಈ ಬಾರಿ ತಂತ್ರಜ್ಞಾನ ಜಗತ್ತಿನಲ್ಲಿ ಹೆಚ್ಚು ಚರ್ಚೆಗೆ ಗ್ರಾಸವಾದ “ವೈಬ್ ಕೋಡಿಂಗ್” (Vibe Coding) ಎಂಬ ಪದಗುಚ್ಛ ಅಗ್ರ ಸ್ಥಾನ ಪಡೆದಿದೆ. ಕೃತಕ ಬುದ್ಧಿಮತ್ತೆ (AI) ಆಧಾರಿತ ಹೊಸ ಕೋಡಿಂಗ್ ಸಂಸ್ಕೃತಿಯ ಬೆಳವಣಿಗೆಯನ್ನು ಪ್ರತಿಬಿಂಬಿಸುವ ಈ ಪದ ಜಾಗತಿಕ ಮಟ್ಟದಲ್ಲಿ ಅಪಾರ ಜನಪ್ರಿಯತೆ ಗಳಿಸಿದೆ.
ಕಾಲಿನ್ಸ್ ಡಿಕ್ಷನರಿಯ ಪ್ರಕಾರ, “ವೈಬ್ ಕೋಡಿಂಗ್” ಎಂದರೆ ನೈಸರ್ಗಿಕ ಭಾಷೆಯಲ್ಲಿ ಸೂಚನೆಗಳನ್ನು ನೀಡಿ AI ಉಪಕರಣಗಳ ಮೂಲಕ ಸಾಫ್ಟ್ವೇರ್ ಅಥವಾ ಕಂಪ್ಯೂಟರ್ ಕೋಡ್ ರಚಿಸುವ ಹೊಸ ತಲೆಮಾರಿನ ಅಭಿವೃದ್ಧಿ ವಿಧಾನ. ಇದರಿಂದ ಸಾಂಪ್ರದಾಯಿಕ ಕೋಡಿಂಗ್ ಜ್ಞಾನವಿಲ್ಲದವರಿಗೂ ತಮ್ಮ ಆಲೋಚನೆಗಳನ್ನು ನೇರವಾಗಿ AI ಗೆ ಹೇಳಿ ತಕ್ಷಣ ಕಾರ್ಯರೂಪಕ್ಕೆ ತರಬಹುದಾಗಿದೆ.
ಇದನ್ನು ಓದಿ: ಬಾಗ್ಲಾದ ಮಾಜಿ ಪ್ರಧಾನಿ ಶೇಖ್ ಹಸೀನಾಗೆ ಗಲ್ಲು ಶಿಕ್ಷೆ
ಕೃತಕ ಬುದ್ಧಿಮತ್ತೆ ಆಧಾರಿತ ಅಭಿವೃದ್ಧಿಯ ವೇಗದಿಂದಾಗಿ ಈ ಪದ ತಂತ್ರಜ್ಞಾನ ಸಮುದಾಯದಲ್ಲಿ ದೊಡ್ಡ ಚರ್ಚೆಯನ್ನು ಹುಟ್ಟುಹಾಕಿತ್ತು. ವಿಶೇಷವಾಗಿ ಓಪನ್ಎಐ (OpenAI) ನ ಸಹ-ಸ್ಥಾಪಕರಾದ ಆಂಡ್ರೆಜ್ ಕರ್ಪತಿ (Andrej Karpathy) ಈ ಪರಿಕಲ್ಪನೆಯನ್ನು ಜಾಗತಿಕ ಮಟ್ಟಕ್ಕೆ ಪರಿಚಯಿಸಿ ಜನಪ್ರಿಯಗೊಳಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ಇತ್ತೀಚಿನ ವರ್ಷಗಳಲ್ಲಿ AI ಸಾಮರ್ಥ್ಯಗಳು ವಿಸ್ತರಿಸುತ್ತಿರುವ ಹಿನ್ನಲೆಯಲ್ಲಿ ವೈಬ್ ಕೋಡಿಂಗ್ ಸಾಮಾನ್ಯ ಬಳಕೆದಾರರಿಂದ ಸ್ಟಾರ್ಟ್ಅಪ್ ನಿರ್ಮಾಣದ ಮಟ್ಟದವರೆಗೆ ವ್ಯಾಪಕವಾಗಿ ಬಳಕೆಗೆ ಬರುತ್ತಿರುವುದು ಗಮನಾರ್ಹ. ತಂತ್ರಜ್ಞಾನ ಲೋಕದಲ್ಲಿ ಸಂಭವಿಸುತ್ತಿರುವ ಪರಿವರ್ತನೆಯ ಸಂಕೇತವಾಗಿ ಈ ಪದವನ್ನು ವರ್ಷದ ಪದವಾಗಿ ಆಯ್ಕೆ ಮಾಡಲಾಗಿರುವುದು ವಿಶಿಷ್ಟವಾಗಿದೆ.
