ಡೆಹ್ರಾಡೂನ್: ಉತ್ತರಾಖಂಡದ ಅಲ್ಮೋರಾ ಜಿಲ್ಲೆಯ ಸಾಲ್ಟ್ ಪ್ರದೇಶದಲ್ಲಿರುವ ಎರಡು ಶಾಲೆಗಳ ಸಮೀಪದ ಪೊದೆಗಳಲ್ಲಿ 161 ಜಿಲೆಟಿನ್ ಕಡ್ಡಿಗಳು ಸೇರಿದಂತೆ 20 ಕೆಜಿಗೂ ಹೆಚ್ಚು ತೀವ್ರ ಸ್ಫೋಟಕ ವಸ್ತು ಪತ್ತೆಯಾದ್ದು, ಆತಂಕಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಬಾಗೇಶ್ವರದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.
ಇತ್ತೀಚೆಗೆ ದೆಹಲಿಯ ಕೆಂಪು ಕೋಟೆ ಸ್ಫೋಟದ ಹಿಂದಿನ ಭಯೋತ್ಪಾದಕ ಸಂಚಿನ ಭಾಗವಾಗಿರುವ ಸುಮಾರು 2,900 ಕೆಜಿ ಸ್ಫೋಟಕ ವಸ್ತುಗಳು ಹರಿಯಾಣದಲ್ಲಿ ವಶಪಡಿಸಿಕೊಂಡ ಕೆಲವೇ ದಿನಗಳಲ್ಲಿ ಈ ಘಟನೆ ನಡೆದಿದ್ದು, ಜಿಲ್ಲಾಧಿಕಾರಿಗಳು ತಕ್ಷಣವೇ ಶ್ವಾನ ದಳಗಳು ಮತ್ತು ವಿಧಿವಿಜ್ಞಾನ ತಂಡಗಳೊಂದಿಗೆ ವ್ಯಾಪಕ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದಾರೆ.
ಸ್ಫೋಟಕ ಪತ್ತೆಹಚ್ಚಿದ್ದು ಮಕ್ಕಳು
ಗುರುವಾರ ಶಾಲಾ ಮಕ್ಕಳು ಕ್ರಿಕೆಟ್ ಬಾಲ್ ಹುಡುಕಲು ಪೊದೆಗಳ ಬಳಿ ಹೋಗಿದ್ದಾಗ ಈ ಸ್ಫೋಟಕ ಕಡ್ಡಿಗಳನ್ನು ಮೊದಲು ಪತ್ತೆಹಚ್ಚಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಶಾಲಾ ಅಧಿಕಾರಿಗಳು ಪೊಲೀಸರಿಗೆ ಮಾಹಿತಿ ನೀಡಿದ ನಂತರ, ಭಿಕಿಯಾಶೈನ್ನ ತಂಡವು ಶುಕ್ರವಾರ ಸ್ಫೋಟಕಗಳನ್ನು ವಶಪಡಿಸಿಕೊಂಡಿದೆ. ಘಟನೆಗೆ ಸಂಬಂಧಿಸಿದಂತೆ ಅಪರಿಚಿತ ವ್ಯಕ್ತಿಗಳ ವಿರುದ್ಧ ಸ್ಫೋಟಕ ವಸ್ತುಗಳ ಕಾಯಿದೆ, 1908 ರ ಸೆಕ್ಷನ್ 4(A) ಮತ್ತು ಬಿಎನ್ಎಸ್ ಸೆಕ್ಷನ್ 288 (ಸ್ಫೋಟಕ ವಸ್ತುವಿನ ಬಗ್ಗೆ ನಿರ್ಲಕ್ಷ್ಯದ ನಡತೆ) ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
ಕಲ್ಲುಗಳನ್ನು ಒಡೆಯಲು ಬಳಸುವ ಸ್ಫೋಟಕಗಳು
“ಮಾದರಿಗಳನ್ನು ಸಂಗ್ರಹಿಸಲಾಗಿದೆ, ಮತ್ತು ಜಿಲೆಟಿನ್ ರಾಡ್ಗಳನ್ನು ಯಾರು ಮತ್ತು ಯಾವ ಉದ್ದೇಶಕ್ಕಾಗಿ ತಂದಿದ್ದಾರೆಂದು ಪತ್ತೆಹಚ್ಚಲು ವಿವರವಾದ ತನಿಖೆ ನಡೆಯುತ್ತಿದೆ” ಎಂದು ಅಲ್ಮೋರಾ ಎಸ್ಎಸ್ಪಿ ದೇವೇಂದ್ರ ಪಿಂಚಾ ಅವರು ತಿಳಿಸಿದ್ದಾರೆ. ಈ ವಸ್ತುವನ್ನು ಸಾಮಾನ್ಯವಾಗಿ ರಸ್ತೆ ನಿರ್ಮಾಣದಲ್ಲಿ ಕಲ್ಲುಗಳನ್ನು ಒಡೆಯಲು ಬಳಸಲಾಗುತ್ತದೆ. ಆದರೆ ಪೊಲೀಸರು “ಎಲ್ಲಾ ಆಯಾಮಗಳನ್ನು ತನಿಖೆ ಮಾಡುತ್ತಿದ್ದಾರೆ” ಎಂದು ಅವರು ಸೇರಿಸಿದ್ದಾರೆ.
ಡಬ್ರಾ ಗ್ರಾಮದ ಮುಖ್ಯಸ್ಥ ಅರ್ಜುನ್ ಸಿಂಗ್, ಈ ವಸ್ತುವು ಕಳೆದ ವರ್ಷ ಗ್ರಾಮದಲ್ಲಿ ಪೂರ್ಣಗೊಂಡಿರುವ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ ರಸ್ತೆ ಕಾಮಗಾರಿಯಲ್ಲಿ ತೊಡಗಿದ್ದ ಕಾರ್ಮಿಕರಿಂದ ಬಿಟ್ಟುಹೋಗಿರುವ ಸಾಧ್ಯತೆ ಇದೆ. “ಕಾರ್ಮಿಕರ ಶಿಬಿರವು ಸ್ಫೋಟಕಗಳು ಪತ್ತೆಯಾದ ಸ್ಥಳದಿಂದ ಕೇವಲ 30 ಮೀಟರ್ ದೂರದಲ್ಲಿತ್ತು. ಗಟ್ಟಿಯಾದ ಬಂಡೆಗಳನ್ನು ಒಡೆಯಲು ಈ ವಸ್ತುವನ್ನು ತಂದಿರಬಹುದು ಮತ್ತು ನಂತರ ಬಳಸಲು ಸಾಧ್ಯವಾಗದ ಕಾರಣ ಅಲ್ಲಿಯೇ ಬಿಟ್ಟಿರುವ ಸಾಧ್ಯತೆ ಇದೆ” ಎಂದು ಅವರು ಮಾಧ್ಯಮಕ್ಕೆ ತಿಳಿಸಿದ್ದಾರೆ.
ವಿಧಿವಿಜ್ಞಾನ ತಂಡದಿಂದಲೂ ತನಿಖೆ
ಪ್ರಾಂತೀಯ ಸಶಸ್ತ್ರ ಕಾನ್ಸ್ಟಾಬ್ಯುಲರಿ ಸಿಬ್ಬಂದಿ ಮತ್ತು ಹೆಚ್ಚುವರಿ ಪೊಲೀಸ್ ಘಟಕಗಳು ಸಹ ಕಾರ್ಯಾಚರಣೆಯಲ್ಲಿ ತೊಡಗಿವೆ. ಬಾಂಬ್ ನಿಷ್ಕ್ರಿಯ ದಳ , ಸ್ಥಳೀಯ ಗುಪ್ತಚರ ಘಟಕ ಮತ್ತು ಇಂಡಿಯನ್ ರಿಸರ್ವ್ ಬೆಟಾಲಿಯನ್ ತಂಡಗಳು ಯಾವುದೇ ಹೆಚ್ಚುವರಿ ವಸ್ತು ಉಳಿದಿಲ್ಲ ಎಂದು ಖಚಿತಪಡಿಸಿಕೊಳ್ಳಲು ಅರಣ್ಯ ಪ್ರದೇಶ, ಪೊದೆಗಳು, ಶಾಲಾ ಆವರಣ ಮತ್ತು ಹತ್ತಿರದ ಕಾಲುದಾರಿಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿವೆ. ಜಿಲೆಟಿನ್ ಕಡ್ಡಿಗಳ ಮೂಲ ಮತ್ತು ಸ್ವರೂಪವನ್ನು ಪತ್ತೆಹಚ್ಚಲು ವಿಧಿವಿಜ್ಞಾನ ತಜ್ಞರು ಶನಿವಾರ ಎರಡನೇ ಸುತ್ತಿನ ಪರೀಕ್ಷೆಯನ್ನು ನಡೆಸುತ್ತಿದ್ದಾರೆ. ತನಿಖಾಧಿಕಾರಿಗಳು ಸ್ಥಳವನ್ನು ನಕ್ಷೆ ಮಾಡಿ ಬಹು ಸ್ಥಳಗಳಿಂದ ಮಣ್ಣಿನ ಮಾದರಿಗಳು ಮತ್ತು ಇತರ ಪುರಾವೆಗಳನ್ನು ಸಂಗ್ರಹಿಸಿದ್ದಾರೆ. ನ್ಯಾಯಾಲಯದ ಅನುಮೋದನೆಯ ನಂತರ ಸ್ಫೋಟಕಗಳನ್ನು ಸುರಕ್ಷಿತವಾಗಿ ವಿಲೇವಾರಿ ಮಾಡಲಾಗುವುದು ಎಂದು ಎಸ್ಎಸ್ಪಿ ಪಿಂಚಾ ತಿಳಿಸಿದ್ದಾರೆ.
