ದುಬೈ: “ಹೊಟ್ಟೆಗೆ ಹಿಟ್ಟಿಲ್ಲ ಎಂದರೂ ಜುಟ್ಟಿಗೆ ಮಲ್ಲಿಗೆ ಹೂವು” ಎಂಬಂತೆ, ಕಂಡ ಕಂಡ ದೇಶಗಳಿಂದ ಸಾಲ ಎತ್ತುವ ಪಾಕಿಸ್ತಾನ, ವಿಶ್ವ ವೇದಿಕೆಗಳಲ್ಲಿ ತೋರುವ ಹಮ್ಮು-ಬಿಮ್ಮು ಅಷ್ಟಿಷ್ಟಲ್ಲ. ಅದರಲ್ಲೂ ಅಮೆರಿಕ, ಚೀನಾ ದೇಶಗಳಿಗೆ ಅದರ ನಾಯಕರು ಪ್ರವಾಸ ಕೈಗೊಂಡಾಗ, ಅವರ ಗತ್ತು ನೋಡಲು ಎರಡು ಕಣ್ಣುಗಳು ಸಾಲುವುದಿಲ್ಲ.
ಆದರೆ ಪಾಕಿಸ್ತಾನಿಯರ ಈ ತೋರ್ಪಡಿಕೆ ಜೀವನವನ್ನು, ಸಂಯುಕ್ತ ಅರಬ್ ಸಂಸ್ಥಾನ (ಯುಎಇ) ಬಟಾಬಯಲು ಮಾಡಿದೆ.
ಪಾಕಿಸ್ತಾನಿ ನಾಗರಿಕರು ಯುನೈಟೆಡ್ ಅರಬ್ ಎಮಿರೇಟ್ಸ್ ತಲುಪಿದ ನಂತರ ಭಿಕ್ಷಾಟನೆ ಮತ್ತು ಅಪರಾಧ ಚಟುವಟಿಕೆಗಳಲ್ಲಿ ತೊಡಗುತ್ತಾರೆ ಎಂಬ ಕಾರಣಕ್ಕೆ, ಯುಎಇ ಆಡಳಿತವು ಪಾಕಿಸ್ತಾನಿ ನಾಗರಿಕರಿಗೆ ವೀಸಾ ನೀಡುವುದಕ್ಕೆ ತಡೆ ನೀಡಿದೆ. ಯುಎಇಯ ವಿವಿಧ ನಗರಗಳಲ್ಲಿ ಪಾಕಿಸ್ತಾನಿಯರು ಭಿಕ್ಷಾಟನೆಯಲ್ಲಿ ನಿರತರಾಗುತ್ತಿರುವುದನ್ನು, ಅಲ್ಲಿನ ಅಧಿಕಾರಿಗಳು ನಿಯಂತ್ರಿಸಲು ಪರದಾಡುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. 2020ರಲ್ಲೇ ಪಾಕಿಸ್ತಾನ ಸೇರಿದಂತೆ 12 ರಾಷ್ಟ್ರಗಳ ಪ್ರವಾಸಿಗರಿಗೆ ಯುಎಇ ವೀಸಾ ನಿರ್ಬಂಧ ಹೇರಿತ್ತು.
ಇನ್ನೂ ಆಶ್ಚರ್ಯಕರ ಸಂಗತಿ ಎಂದರೆ, ಈ ಕುರಿತು ಯುಎಇ ಯಾವುದೇ ಬಹಿರಂಗ ಹೇಳಿಕೆ ನೀಡಿಲ್ಲ. ಆದರೆ ಈ ಬಗ್ಗೆ ಖುದ್ದು ಪಾಕಿಸ್ತಾನದ ಹೆಚ್ಚುವರಿ ಆಂತರಿಕ ಕಾರ್ಯದರ್ಶಿ ಸಲ್ಮಾನ್ ಚೌಧರಿ ಅವರೇ, ಮಾನವ ಹಕ್ಕುಗಳ ಸೆನೆಟ್ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಮಾತನಾಡಿದ್ದಾರೆ. “ಯುಎಇ ಪಾಕಿಸ್ತಾನಿಯರಿಗೆ ವೀಸಾ ನಿರ್ಬಂಧಗಳನ್ನು ಹೇರಿದ್ದು, ನಿಯಮಗಳ ಪ್ರಕಾ ಒಮ್ಮೆ ನಿಷೇಧವನ್ನು ವಿಧಿಸಿದ ನಂತರ, ಅದನ್ನು ತೆಗೆದುಹಾಕುವುದು ಕಷ್ಟಕರವಾಗಿರುತ್ತದೆ” ಎಂದು ಸಲ್ಮಾನ್ ಚೌಧರಿ ಆತಂಕ ಹೊರಹಾಕಿದ್ದಾರೆ.
