ತುಮಕೂರು: ದೇಶದ ಪ್ರತಿಯೊಬ್ಬ ನಾಗರಿಕರು ತಮ್ಮ ಮೂಲಭೂತ ಹಕ್ಕುಗಳ ಅರಿವಿನ ಜೊತೆಗೆ ಸಂವಿಧಾನಬದ್ಧ ಕರ್ತವ್ಯಗಳನ್ನೂ ತಿಳಿದು ಅವುಗಳನ್ನು ಪಾಲಿಸುವುದು ಅತ್ಯಗತ್ಯ ಎಂದು ಕರ್ನಾಟಕ ಉಪ ಲೋಕಾಯುಕ್ತರಾದ ಜಸ್ಟೀಸ್ ಬಿ.ವೀರಪ್ಪ ಅವರು ಹೇಳಿದರು.
ತಿಪಟೂರಿನ ಕಲ್ಪತರು ತಾಂತ್ರಿಕ ಮಹಾವಿದ್ಯಾಲಯದ ಸಭಾಂಗಣದಲ್ಲಿ ಶನಿವಾರ ಕರ್ನಾಟಕ ಉಪಲೋಕಾಯುಕ್ತರಾದ ಗೌರವಾನ್ವಿತ ನ್ಯಾಯಮೂರ್ತಿ ಬಿ.ವೀರಪ್ಪ ಅವರು ತಿಪಟೂರು, ಚಿಕ್ಕನಾಯಕನಹಳ್ಳಿ, ತುರುವೇಕೆರೆ ತಾಲೂಕುಗಳಿಗೆ ಸಂಬಂದಿಸಿದಂತೆ ಕರ್ನಾಟಕ ಲೋಕಾಯುಕ್ತದಲ್ಲಿ ದಾಖಲಾಗಿ ಬಾಕಿಯಿರುವ ಪ್ರಕರಣಗಳ ವಿಚಾರಣೆ ಹಾಗೂ ವಿಲೇವಾರಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ಪ್ರಸ್ತುತ ದಿನಗಳಲ್ಲಿ ಜನರು ಕರ್ತವ್ಯಗಳನ್ನು ಮರೆತು ಕೇವಲ ಹಕ್ಕುಗಳನ್ನೇ ಬೇಡುವ ಪ್ರವೃತ್ತಿ ಹೆಚ್ಚುತ್ತಿದೆ, ಹಕ್ಕುಗಳ ಜೊತೆಗೆ ಕರ್ತವ್ಯಗಳ ಅರಿವು ಕೂಡ ಬಹಳ ಮುಖ್ಯ ಎಂದು ಹೇಳಿದರು.
ನಮ್ಮ ಭಾರತ ಸಂವಿಧಾನದ ಅನುಚ್ಛೇದ 51(ಎ) ಅಡಿಯಲ್ಲಿ ಮೂಲಭೂತ ಕರ್ತವ್ಯಗಳನ್ನು ನಿಗದಿಪಡಿಸಲಾಗಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ನಾಗರಿಕರು ತಮ್ಮ ಕರ್ತವ್ಯಗಳ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಿರುವುದು ಆತಂಕಕಾರಿ ವಿಷಯವಾಗಿದೆ ಎಂದು ಹೇಳಿದರು.
ಸಾರ್ವಜನಿಕರು ಉತ್ತರದಾಯಕರಾಗಿರುವವರನ್ನು ಪ್ರಶ್ನಿಸುವ ಹೊಣೆಗಾರಿಕೆಯನ್ನು ಮರೆತಿದ್ದಾರೆ, ಜನಸಾಮಾನ್ಯರಲ್ಲಿ ಪ್ರಶ್ನಿಸುವ ಧೈರ್ಯ ಕಡಿಮೆಯಾಗಿದೆ ಏಕೆಂದರೆ ನಾವು ನಮ್ಮ ಹಕ್ಕುಗಳನ್ನು ಸಾರ್ಥಕವಾಗಿ ಮಾರಿಕೊಳ್ಳುತ್ತಿದೇವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇದನ್ನು ಓದಿ: ತುಮಕೂರು: ಮನಸ್ಸು ಇದ್ದರೆ ಮಾರ್ಗ,ಛಲ ಇದ್ದರೆ ಏನು ಬೇಕಾದರೂ ಸಾಧಿಸಬಹುದು-ಜಯವಿಭವಸ್ವಾಮಿ
ರಾಷ್ಟ್ರಕವಿ ಕುವೆಂಪು ಅವರ ಸಮಪಾಲು ಸಮಬಾಳು ತತ್ವವನ್ನು ಉಲ್ಲೇಖಿಸಿದ ಅವರು ಸಂವಿಧಾನದ ಅನುಚ್ಛೇದ 14ರ ಸಮಾನ ಹಕ್ಕು ಹಾಗೂ ಅನುಚ್ಛೇದ 21ರ ಗೌರವಯುತ ಜೀವನದ ಹಕ್ಕನ್ನು ಪ್ರತಿಯೊಬ್ಬರೂ ಗೌರವಿಸಬೇಕು ಎಂದು ತಿಳಿಸಿದರಲ್ಲದೆ, ಸಾರ್ವಜನಿಕರು ಅನ್ಯಾಯ ಕಂಡು ಬಂದಲ್ಲಿ ಧೈರ್ಯವಾಗಿ ಧ್ವನಿ ಎತ್ತಬೇಕು, ಏಕೆಂದರೆ ಅನ್ಯಾಯ ತಾಂಡವಾಡುವ ಸ್ಥಳದಲ್ಲಿ ಮೌನ ತಪ್ಪು ಎಂದು ಹೇಳಿದರು.
ದೇಶದ ಪ್ರಜಾಪ್ರಭುತ್ವವನ್ನು ಬಲಪಡಿಸುವ ನಾಲ್ಕು ಪ್ರಮುಖ ಶಾಸನಾಂಗ, ಕಾರ್ಯಾಂಗ, ನ್ಯಾಯಾಂ, ಪತ್ರಿಕಾ ರಂಗ ಸ್ತಂಭಗಳಲ್ಲಿ ಕೆಲವು ಕ್ಷೇತ್ರಗಳು ಸಮರ್ಥವಾಗಿ ಕಾರ್ಯನಿರ್ವಹಿಸುತ್ತಿದ್ದರೂ, ಕೆಲವೆಡೆ ಜನರ ಹಿತಕ್ಕಾಗಿ ಜವಾಬ್ದಾರಿಗಳು ಪೂರ್ಣ ಪ್ರಮಾಣದಲ್ಲಿ ಪಾಲನೆಯಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನ್ಯಾಯಾಂಗ ಮತ್ತು ಪತ್ರಿಕಾ ರಂಗಕ್ಕೆ ಪ್ರಶಂಸೆ ಪ್ರಜಾಪ್ರಭುತ್ವದ ರಕ್ಷಣೆಯಲ್ಲಿ ನ್ಯಾಯಾಂಗ ಮತ್ತು ಪತ್ರಿಕಾ ರಂಗ ಮುಂಚೂಣಿಯಲ್ಲಿವೆ. ದೇಶದಲ್ಲಿ ನಡೆಯುವ ಅನ್ಯಾಯ ಹಾಗೂ ಅಕ್ರಮಗಳ ವಿರುದ್ಧ ಈ ಎರಡು ಕ್ಷೇತ್ರಗಳು ಧ್ವನಿ ಎತ್ತುತ್ತಿರುವುದರಿಂದಲೇ ಪ್ರಜಾಪ್ರಭುತ್ವ ಜೀವಂತವಾಗಿದೆ ಎಂದು ಶ್ಲಾಘಿಸಿದ್ದರು.
ಆದರೆ, ಕೆಲವು ವ್ಯಕ್ತಿಗಳು, ಜನಪ್ರತಿನಿಧಿಗಳು ಮತ್ತು ಕಾರ್ಯಾಂಗದ ಭಾಗದವರು ತಮ್ಮ ಹೊಣೆಗಾರಿಕೆಯಿಂದ ಕೆಲಸ ಮಾಡುತ್ತಿಲ್ಲ, ಪತ್ರಿಕಾ ರಂಗಕ್ಕೆ ಕಾನೂನು ಅವಕಾಶವಿದ್ದರೂ, ಸಾಮಾನ್ಯ ನಾಗರಿಕರಿಗೆ ಅದನ್ನು ಸರಿಯಾಗಿ ಚಲಾಯಿಸಲಾಗುತ್ತಿಲ್ಲ ಎಂಬ ಅಭಿಪ್ರಾಯವನ್ನೂ ವ್ಯಕ್ತ ಪಡಿಸಿದರು.
ಕರ್ನಾಟಕ ಲೋಕಾಯುಕ್ತವು ರಾಜ್ಯದಲ್ಲಿ ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತುವ ಬಲಿಷ್ಠ ಸಂಸ್ಥೆಯಾಗಿದೆ, ತಪ್ಪು ಮಾಡಿದವರು ಯಾರೇ ಆಗಿರಲಿ ಶಿಕ್ಷೆ ಖಚಿತ ಹಾಗಾಗಿ ಸಾರ್ವಜನಿಕರು ಸುಳ್ಳು ಪ್ರಕರಣ ದಾಖಲು ಮಾಡದೇ ನೈಜತೆ ಇರುವ ಪ್ರಕರಣಗಳು ಮಾತ್ರ ಲೋಕಾಯುಕ್ತ ಹಂತದಲ್ಲಿ ದಾಖಲಿಸಬೇಕು ಎಂದು ಹೇಳಿದರು.
ಸಭೆಯಲ್ಲಿ ಕರ್ನಾಟಕ ಲೋಕಾಯುಕ್ತ ಉಪನಿಬಂಧಕ ಅರವಿಂದ.ಎನ್.ವಿ. ತುಮಕೂರು ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಲಕ್ಷ್ಮೀ ನಾರಾಯಣ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು, ಅಪರ ಜಿಲ್ಲಾಧಿಕಾರಿ ಡಾ.ಎನ್.ತಿಪ್ಪೇಸ್ವಾಮಿ, ತಿಪಟೂರು ಉಪವಿಭಾಗಾಧಿಕಾರಿ ಸಪ್ತಶ್ರೀ, ತಹಶೀಲ್ದಾರ್ ಜಿ.ವಿ.ಮೋಹನ್ಕುಮಾರ್ ಸೇರಿದಂತೆ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.
– ಕೆ.ಬಿ.ಚಂದ್ರಚೂಡ
