ತುಮಕೂರು: ಭೂಮಿ ಮೇಲಿನ ಸಕಲ ಜೀವಿಗಳಿಗಳ ಬದುಕಿಗೆ ಮಣ್ಣು ಅತ್ಯಗತ್ಯ. ಅನ್ನ ಪಡೆಯಲು ಮಣ್ಣು ಬೇಕು. ಅಷ್ಟೇ ಅಲ್ಲ, ಎಲ್ಲರೂ ಮೋಹಿಸುವ ಚಿನ್ನವೂ ಮಣ್ಣಿನಿಂದಲೇ ದೊರೆಯುತ್ತದೆ. ಅನ್ನ, ಚಿನ್ನದಂತಹ ಮಣ್ಣು ಹಾಗೂ ಪರಿಸರವನ್ನು ಆರೋಗ್ಯವಾಗಿ ಕಾಪಾಡಿದರೆ ನಾವೂ, ಎಲ್ಲಾ ಜೀವಿಗಳೂ ಆರೋಗ್ಯದಿಂದ ಬದುಕಬಹುದು ಎಂದು ಮಣ್ಣಿನ ಮಹತ್ವದ ಬಗ್ಗೆ ನ್ಯಾಯಮೂರ್ತಿ ಹೆಚ್.ಪಿ.ಸಂದೇಶ್ ಹೇಳಿದರು.
ವಿಶ್ವ ಮಣ್ಣು ದಿನಾಚರಣೆ ಅಂಗವಾಗಿ ಶುಕ್ರವಾರ ಸಂಜೆ ಸಿದ್ಧಗಂಗಾ ಮಠದಲ್ಲಿ ನಡೆದ ಪರಿಸರ ಮತ್ತು ಮಣ್ಣಿನ ಸಂರಕ್ಷಣೆಗಾಗಿ ಕ್ರಿಯಾಶಿಲವಾಗಿ ಶ್ರಮಿಸುತ್ತಿರುವ ರೈತರಿಗೆ ವಾರ್ಷಿಕವಾಗಿ ನೀಡಲು ಹೈ ಕೋರ್ಟ್ ನ್ಯಾಯವಾದಿಯೂ ಆದ, ತುಮಕೂರು ತಾಲ್ಲೂಕು ಊರ್ಡಿಗೆರೆ ಹೋಬಳಿ ಕದರನಹಳ್ಳಿಯ ರಮೇಶ್ ನಾಯಕ್.ಎಲ್. ಅವರು ಸ್ಥಾಪಿಸಿರುವ ಇನಿಷಿಯೇಟೀವ್ ಫಾರ್ ಸಸ್ಟೆಂಬಲ್ ಅಗ್ರಿಕಲ್ಚರ್ ಅಂಡ್ ಎನ್ವಿರಾನ್ಮೆಂಟ್ ಚಾಂಪಿಯನ್ ಆಫ್ ಸಾಯಿಲ್- 2025 ಪ್ರಶಸ್ತಿಯ ಪ್ರಧಾನ ಸಮಾರಂಭದಲ್ಲಿ ನ್ಯಾಯಧೀಶರು ಮಾತನಾಡಿದರು.
ಜೀವರಾಶಿಗಳ ತಾಯಿಯಾಗಿರುವ ಈ ಭೂಮಿಯ ಮಣ್ಣು, ಅದರ ಫಲವತ್ತತೆ ರಕ್ಷಣೆ ಮಾಡುವುದು ಎಲ್ಲರ ಹೊಣೆ. ಭೂಮಿಗೆ ವಿಷಕಾರಿ ಗೊಬ್ಬರ ಹಾಕದಂತೆ ಮೂಲ ಸತ್ವವನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಯೋಗ್ಯವಾದ ಮಣ್ಣ ಉಳಿಸಬೇಕು. ಮಣ್ಣಿನ ಮಹತ್ವದ ಬಗ್ಗೆ ಮಕ್ಕಳಿಗೆ ಮನವರಿಕೆ ಮಾಡಬೇಕು ಎಂದರು.
ಇದನ್ನು ಓದಿ: ತುಮಕೂರು: ವೃತ್ತಿ ನೈಪುಣ್ಯತೆಯಿಂದ ವೈದ್ಯಕೀಯ ಲೋಕದ ಯಶಸ್ಸು ಸಾಧ್ಯ : ಡಾ.ಹೆಚ್.ಬಸವನಗೌಡಪ್ಪ
ನ್ಯಾಯಮೂರ್ತಿ ಆರ್.ನಟರಾಜ್ ರಂಗಸ್ವಾಮಿರವರು ಮಾತನಾಡಿ, ಮಣ್ಣು ನಂಬಿ ಕಾಯಕ ಮಾಡುತ್ತಿರುವ ರೈತ ಸಮುದಾಯ ದೇಶಕ್ಕೆ ಅನ್ನ ನೀಡುವ ಅನ್ನದಾತ. ಗಾಳಿ, ನೀರಿನಂತೆ ಮಣ್ಣನ್ನೂ ಕಾಪಾಡಬೇಕು. ಮಣ್ಣಿನ ತಾಯಿಗುಣ ಗುರುತಿಸಿ ಗೌರವಿಸಬೇಕು. ಈ ಬಗ್ಗೆ ಸಮಾಜದಲ್ಲಿ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.
ಶ್ರೀಮಠದ ವಿದ್ಯಾರ್ಥಿಗಳನ್ನುದ್ದೇಶಿಸಿ, ನಿಮ್ಮಲ್ಲಿ ಎಷ್ಟು ಜನ ರೈತರಾಗಲು ಬಯಸುವಿರಿ ಎಂದು ನ್ಯಾಯಾಧೀಶರು ಕೇಳಿದಾಗ ಸಾವಿರಕ್ಕೂ ಹೆಚ್ಚು ಮಕ್ಕಳು ಕೈ ಎತ್ತಿ ರೈತರಾಗಲು ಒಲುವು ತೋರಿದಾಗ ನ್ಯಾಯಾಧೀಶರು ಖುಷಿಪಟ್ಟರು.
ಸಮಾರಂಭದ ದಿವ್ಯಸಾನಿಧ್ಯವಹಿಸಿದ್ದ ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿಯವರು ಮಾತನಾಡಿ, ಪಂಚಭೂತಗಳಾದ ಭೂಮಿ, ನೀರು, ಅಗ್ನಿ, ವಾಯು, ಆಕಾಶಗಳು ಜೀವಿಗಳ ಬದುಕಿಗೆ ಶಕ್ತಿಯಾಗಿವೆ. ಅವು ಇಲ್ಲದೇ ಜೀವಸಂಕುಲವಿಲ್ಲ. ಪಂಚಭೂತಗಳ ಆರೋಗ್ಯ ಕಾಪಾಡಿದರೆ ನಾವೂ ಆರೋಗ್ಯವಾಗಿರಲು ಸಾಧ್ಯ. ಯಾವುದನ್ನೂ ಕಲುಶಿತಗೊಳಿಸಿ, ಸತ್ವಹೀನಗೊಳ್ಳದಂತೆ ಎಚ್ಚರವಹಿಸಬೇಕು ಎಂದು ತಿಳಿಸಿದರು.
ಬೆಂಗಳೂರು ವಕೀಲರ ಸಂಘದ ಮಾಜಿ ಅಧ್ಯಕ್ಷ ಎ.ಪಿ.ರಂಗನಾಥ್ ಅವರು, ನ್ಯಾಯವಾದಿ ರಮೇಶ್ ನಾಯಕ್ ರವರ ಪರಿಸರ ಕಾಳಜಿ ಕಾರ್ಯಗಳನ್ನು ಶ್ಲಾಘಿಸಿದರು.
– ಕೆ.ಬಿ.ಚಂದ್ರಚೂಡ
