ಹಾಸನ: ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಹೊರವಲಯದಲ್ಲಿ ಗಾಂಜಾ ಅಮಲಿನಿಂದ ಪ್ರೇರಿತವಾಗಿ ನಡೆದಿದೆ ಎನ್ನಲಾದ ಯುವಕನ ಬರ್ಬರ ಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ. ಹೂವಿನಹಳ್ಳಿ ಗ್ರಾಮದ ಕೀರ್ತಿ (24) ಎಂಬ ಯುವಕನನ್ನು ಅವನ ಸ್ನೇಹಿತನಾಗಿದ್ದ ಉಲ್ಲಾಸ್ ಕ್ರೂರವಾಗಿ ಕೊಲೆ ಮಾಡಿದ ಘಟನೆ ಸ್ಥಳೀಯರಲ್ಲಿ ಭೀತಿಯ ವಾತಾವರಣ ಸೃಷ್ಟಿಸಿದೆ.
ಮೃತ ಕೀರ್ತಿ ಹೂವಿನಹಳ್ಳಿ ಮೂಲದವನಾಗಿದ್ದು, ಆರೋಪಿ ಉಲ್ಲಾಸ್ ದೊಡ್ಡಕಣಗಾಲ್ ಗ್ರಾಮದ ನಿವಾಸಿ. ಗಾಂಜಾ ಮತ್ತಿನಲ್ಲಿ ಇಬ್ಬರ ನಡುವೆ ನಡೆದ ಗಲಾಟೆ ಕೊನೆಗೆ ಹತ್ಯೆಗೆ ತಿರುಗಿದೆ ಎಂದು ಪ್ರಾಥಮಿಕ ಮಾಹಿತಿಯಿಂದ ತಿಳಿದುಬಂದಿದೆ. ಗಲಾಟೆಯ ನಂತರ ಉಲ್ಲಾಸ್ ಕೀರ್ತಿಯನ್ನು ಬಿಟ್ಟಗೌಡನಹಳ್ಳಿ ಪ್ರದೇಶದಲ್ಲಿ ಕೊಲೆಮಾಡಿರುವುದು ಪೊಲೀಸರು ದೃಢಪಡಿಸಿದ್ದಾರೆ.
ಇದನ್ನು ಓದಿ: ಗ್ಲೋಬಲ್ ಚೆಸ್ ಲೀಗ್: ಅನೀಶ್ ಗಿರಿ ನೇತೃತ್ವದಲ್ಲಿ ಅಲ್ಪೈನ್ SG ಪೈಪರ್ಸ್ ತಂಡ ಸಜ್ಜು!
ಇನ್ನು, ಹತ್ಯೆಯ ನಂತರ ಆರೋಪಿ ಘಟನೆಯ ವೀಡಿಯೋ ಮಾಡಿ ವಿಕೃತಿ ಮೆರೆದಿರುವುದು ಪ್ರಕರಣಕ್ಕೆ ಮತ್ತಷ್ಟು ಗಂಭೀರತೆ ತಂದಿದೆ. ಘಟನಾ ಸ್ಥಳಕ್ಕೆ ಎಎಸ್ಪಿ ಶ್ರೀನಿಧಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣದ ತನಿಖೆಗಾಗಿ ವಿಶೇಷ ತಂಡ ರಚಿಸಲಾಗಿದೆ.
ಆರೋಪಿಯ ಬಂಧನಕ್ಕಾಗಿ ಪೊಲೀಸರು ಪತ್ತೆ ಬಲೆ ಬಿಸಾಡಿದ್ದು, ಶೀಘ್ರದಲ್ಲೇ ಆತನನ್ನು ಕಾನೂನಿನ ಮುಂದೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಹಾಸನದಲ್ಲಿ ಗಾಂಜಾ ವ್ಯಸನ ಮತ್ತು ಅದರಿಂದ ಉಂಟಾಗುತ್ತಿರುವ ಅಪರಾಧ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜನರಲ್ಲಿ ಆತಂಕ ವ್ಯಕ್ತವಾಗಿದೆ.
