ಮುಂಬೈ: ಕಾಂಗ್ರೆಸ್ನ (Congress) ಹಿರಿಯ ನಾಯಕ ಹಾಗೂ ಮಾಜಿ ಕೇಂದ್ರ ಗೃಹ ಸಚಿವ ಶಿವರಾಜ್ ಪಾಟೀಲ್ ಚಾಕುರ್ಕರ್ (Shivaraj Patil) ಶುಕ್ರವಾರ ತಮ್ಮ 90 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ.
ದೀರ್ಘಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಕಳೆದ ಹಲವಾರು ವರ್ಷಗಳಿಂದ ಸಕ್ರಿಯ ರಾಜಕೀಯದಿಂದ ದೂರವಿದ್ದರು.
ಹಿರಿಯ ಕಾಂಗ್ರೆಸ್ ನಾಯಕ ಶಿವರಾಜ್ ಪಾಟೀಲ್ ತಮ್ಮ ಕಠಿಣ ಪರಿಶ್ರಮ, ಸರಳ ಮತ್ತು ಸ್ವಚ್ಛ ಮನಸ್ಸಿನ ನಾಯಕ ಎಂದು ವ್ಯಾಪಕವಾಗಿ ಗೌರವಿಸಲ್ಪಟ್ಟಿದ್ದರು.
ಲೋಕಸಭೆಯ ಮಾಜಿ ಸ್ಪೀಕರ್ ಆಗಿಯೂ ಕರ್ತವ್ಯ ನಿರ್ವಹಿಸಿದ್ದ ಹಾಗೂ ಕೇಂದ್ರ ಸಚಿವ ಸಂಪುಟದಲ್ಲಿ ಪ್ರಮುಖ ಖಾತೆಗಳನ್ನು ಅವರು ನಿಭಾಯಿಸಿದ್ದರು. ಲಾತೂರ್ ಲೋಕಸಭಾ ಕ್ಷೇತ್ರದಲ್ಲಿ ಅವರು ಏಳು ಬಾರಿ ಜಯ ಸಾಧಿಸಿದ್ದರು.
ಶಿವರಾಜ್ ಪಾಟೀಲ್ ಅವರು 1935ರ ಅಕ್ಟೋಬರ್ 12 ರಂದು ಲಾತೂರ್ ಜಿಲ್ಲೆಯ ಚಾಕೂರ್ನಲ್ಲಿ ಜನಿಸಿದರು. ಉಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ವಿಜ್ಞಾನವನ್ನು ಅಧ್ಯಯನ ಮಾಡಿ ಮುಂಬೈ ವಿಶ್ವವಿದ್ಯಾಲಯದಿಂದ ಕಾನೂನು ಪದವಿ ಪಡೆದ ನಂತರ, ಅವರು 1967-69ರ ಅವಧಿಯಲ್ಲಿ ಲಾತೂರ್ ಪುರಸಭೆಯಲ್ಲಿ ತಮ್ಮ ರಾಜಕೀಯ ಜೀವನವನ್ನು ಪ್ರಾರಂಭಿಸಿದರು.
ಅವರು 1980 ರಲ್ಲಿ ಲಾತೂರ್ ಲೋಕಸಭಾ ಕ್ಷೇತ್ರದಿಂದ ಮೊದಲ ಬಾರಿಗೆ ಆಯ್ಕೆಯಾದರು. ನಂತರ ಅವರು 1999 ರವರೆಗೆ ಲೋಕಸಭೆಯಲ್ಲಿ ಸತತ ಏಳು ಬಾರಿ ಸೇವೆ ಸಲ್ಲಿಸಿದರು. ಕಾಂಗ್ರೆಸ್ನ ಅತ್ಯಂತ ಪ್ರಭಾವಶಾಲಿ ಸಂಸದೀಯ ನಾಯಕರಲ್ಲಿ ಒಬ್ಬರಾದರು. ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿಯವರ ಸಚಿವ ಸಂಪುಟಗಳಲ್ಲಿ ಅವರು ರಕ್ಷಣಾ, ವಾಣಿಜ್ಯ, ವಿಜ್ಞಾನ ಮತ್ತು ತಂತ್ರಜ್ಞಾನ, ಪರಮಾಣು ಶಕ್ತಿ, ಎಲೆಕ್ಟ್ರಾನಿಕ್ಸ್ ಮತ್ತು ಬಾಹ್ಯಾಕಾಶ ಸೇರಿದಂತೆ ಹಲವಾರು ಪ್ರಮುಖ ಇಲಾಖೆಗಳಿಗೆ ರಾಜ್ಯ ಸಚಿವ ಸ್ಥಾನಗಳನ್ನು ಹೊಂದಿದ್ದರು.
