ಚಿಕ್ಕಬಳ್ಳಾಪುರ, ಡಿಸೆಂಬರ್ 12: ಜಿಲ್ಲೆಯಲ್ಲಿ ರಸ್ತೆ ಸುರಕ್ಷತೆ ಹೆಚ್ಚಿಸುವ ಉದ್ದೇಶದಿಂದ ಸಂಚಾರ ಪೊಲೀಸ್ ಇಲಾಖೆಯು ಮಹತ್ವದ ಹೆಜ್ಜೆ ಇಟ್ಟಿದೆ.
ಡಿಸೆಂಬರ್ 12ರಿಂದ ಜಿಲ್ಲೆಯಾದ್ಯಂತ ಎಲ್ಲಾ ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಕಡ್ಡಾಯವಾಗಿ ಧರಿಸಬೇಕು ಎಂದು ಚಿಕ್ಕಬಳ್ಳಾಪುರ ಸಂಚಾರ ಪೊಲೀಸ್ ಠಾಣೆ ಪ್ರಕಟಿಸಿದೆ.
ಸಂಚಾರಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ರಸ್ತೆ ಅಪಘಾತಗಳ ಪ್ರಮಾಣವನ್ನು ಕಡಿಮೆ ಮಾಡಲು ಈ ಜಾಗೃತಿ ಅಭಿಯಾನ ರೂಪಿಸಲಾಗಿದೆ. “ಹೆಲ್ಮೆಟ್ ಬಳಸಿ ನಿಮ್ಮ ಜೀವ ಹಾಗೂ ಇತರರ ಜೀವವನ್ನು ಉಳಿಸಿ” ಎಂಬ ಸಂದೇಶದೊಂದಿಗೆ ಪೊಲೀಸ್ ಇಲಾಖೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತದೆ.
ಈ ಹಿನ್ನೆಲೆಯಲ್ಲಿ ಸಂಚಾರ ಪೊಲೀಸರು ವಿವಿಧ ಪ್ರಮುಖ ರಸ್ತೆಗಳಲ್ಲಿ ಮತ್ತು ಜಂಕ್ಷನ್ಗಳಲ್ಲಿ ಪರಿಶೀಲನೆಗಳನ್ನು ಬಲಪಡಿಸಲಿದ್ದು, ಹೆಲ್ಮೆಟ್ ಬಳಸದೇ ಸಂಚರಿಸುವವರ ವಿರುದ್ಧ ಕಾನೂನಿನ ಪ್ರಕಾರ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದ್ದಾರೆ.
ಇಂದು ಹೆಲ್ಮೆಟ್ ಜಾಗೃತಿ ಜಾಥ ಕೈಗೊಂಡು ಪ್ರಮುಖ ರಸ್ತೆ ಗಳಲ್ಲಿ ಸಂಚರಿಸಿದ ನಂತರ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಕುಶಾಲ್ ಚೌಸ್ಕೆ ಸ್ವತಃ ರಸ್ತೆಗಿಳಿದು, ನಾಗರಿಕರಿಗೆ ಮನವಿ ಮಾಡಿದ್ದು—
“ನಮ್ಮೊಂದಿಗೆ ಕೈಜೋಡಿಸಿ… ಸಂಚಾರಿ ನಿಯಮ ಪಾಲಿಸಿ… ಕಾನೂನನ್ನು ಗೌರವಿಸಿ.”ಎಂದರು.
ಜಿಲ್ಲೆಯಲ್ಲಿ ರಸ್ತೆ ಸುರಕ್ಷತೆ ಸಂಸ್ಕೃತಿಯನ್ನು ಬಲಪಡಿಸುವ ದಿಸೆಯಲ್ಲಿ ಈ ಅಭಿಯಾನ ಮಹತ್ವದ ಪಾತ್ರ ವಹಿಸಲಿದೆ ಎಂದು ಸಂಚಾರ ಇಲಾಖೆ ವಿಶ್ವಾಸ ವ್ಯಕ್ತಪಡಿಸಿದೆ.
