ಬೇಲೂರು ತಾಲ್ಲೂಕಿನ ಕಣಗುಪ್ಪೆ ಗ್ರಾಮದಲ್ಲಿ ಕಾಡಾನೆಗಳ ದಾಳಿಯಿಂದ ರೈತರಿಗೆ ಭಾರೀ ನಷ್ಟ ಉಂಟಾಗಿದೆ. ಗ್ರಾಮದ ದಯಾನಂದ್ ಎಂಬ ರೈತನ ತೋಟಕ್ಕೆ ತಡರಾತ್ರಿ ಕಾಡಾನೆ ನುಗ್ಗಿ ಕಾಫಿ, ಮೆಣಸು ಹಾಗೂ ಅಡಿಕೆ ಬೆಳೆಗಳನ್ನು ಸಂಪೂರ್ಣವಾಗಿ ನಾಶಪಡಿಸಿದೆ.
ಅನೇಕ ವರ್ಷಗಳ ಪರಿಶ್ರಮದಿಂದ ಬೆಳೆಸಿದ್ದ ತೋಟ ಕ್ಷಣಾರ್ಧದಲ್ಲಿ ಧ್ವಂಸವಾಗಿದ್ದು, ಲಕ್ಷಾಂತರ ರೂಪಾಯಿ ನಷ್ಟವಾಗಿದೆ ಎಂದು ರೈತ ದಯಾನಂದ್ ಕಣ್ಣೀರಿಟ್ಟಿದ್ದಾರೆ. ಕಾಡಾನೆಗಳು ತೋಟದೊಳಗೆ ಸಂಚರಿಸಿ ಗಿಡಗಳನ್ನು ಮುರಿದು ಹಾಕಿ, ಅಡಿಕೆ ಮರಗಳನ್ನು ನೆಲಕ್ಕುರುಳಿಸಿದ್ದು, ಮೆಣಸು ಬಳ್ಳಿಗಳನ್ನು ಸಂಪೂರ್ಣವಾಗಿ ನಾಶಮಾಡಿವೆ.
ಕಣಗುಪ್ಪೆ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ಇತ್ತೀಚೆಗೆ ಕಾಡಾನೆಗಳ ಸಂಚಾರ ಹೆಚ್ಚಾಗಿದ್ದು, ರೈತರು ಭಯಭೀತರಾಗಿದ್ದಾರೆ. ರಾತ್ರಿಯ ಸಮಯದಲ್ಲಿ ತೋಟಗಳಿಗೆ ಹೋಗಲು ಕೂಡ ಜನರು ಆತಂಕ ಪಡುವ ಸ್ಥಿತಿ ನಿರ್ಮಾಣವಾಗಿದೆ.
ಇದನ್ನು ಓದಿ: ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ನಡೆದ ಭೀಕರ ಅಪಘಾತ- ksrtc ಟಿಕೆಟ್ ತಪಾಸಣಾ ಇನ್ಸ್ಪೆಕ್ಟರ್ ಸ್ಥಳದಲ್ಲೇ ಮೃ*ತ
ಈ ಕುರಿತು ಸ್ಥಳೀಯರು ಅರಣ್ಯ ಇಲಾಖೆಯ ನಿರ್ಲಕ್ಷ್ಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಕೂಡಲೇ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಹಾಗೂ ಕಾಡಾನೆಯನ್ನು ಸುರಕ್ಷಿತವಾಗಿ ಸ್ಥಳಾಂತರಿಸಬೇಕು ಎಂದು ಒತ್ತಾಯಿಸಿದ್ದಾರೆ. ಜೊತೆಗೆ ನಷ್ಟಕ್ಕೊಳಗಾದ ರೈತರಿಗೆ ತಕ್ಷಣವೇ ಪರಿಹಾರ ನೀಡಬೇಕು ಎಂಬ ಬೇಡಿಕೆ ಸಹ ಕೇಳಿಬಂದಿದೆ.
ಕಾಡಾನೆ ದಾಳಿಯಿಂದ ಜೀವ ಹಾನಿ ಸಂಭವಿಸುವ ಮೊದಲು ಅರಣ್ಯ ಇಲಾಖೆ ಎಚ್ಚೆತ್ತುಕೊಂಡು ಶಾಶ್ವತ ಪರಿಹಾರ ಕ್ರಮ ಕೈಗೊಳ್ಳಬೇಕಿದೆ ಎಂಬುದು ಗ್ರಾಮಸ್ಥರ ಒತ್ತಾಯವಾಗಿದೆ.
