ಬ್ರಹ್ಮನನ್ನು ಬಲ್ಲವರು ಯಾರು? ನಮ್ಮ ಕಣ್ಣಿಗೆ ಶೇಕಡ ನಾಲ್ಕರಷ್ಟು ಮಾತ್ರ ಬ್ರಹ್ಮಾಂಡವು ಗೋಚರವಾಗುತ್ತದೆ. ಇನ್ನು ಉಳಿದ ಭಾಗ ಕಣ್ಣಿಗೆ ಗೋಚರಿಸುವುದಿಲ್ಲ. ನಮ್ಮ ಭೂಮಿ ಬ್ರಹ್ಮಾಂಡದ ಗಾತ್ರಕ್ಕೆ ಹೋಲಿಸಿದಾಗ ಉಪಪರಮಾಣುವಿನ (ಸಬ್ ಅಟಾಮಿಕ್) ಕಣದಷ್ಷು ಇರುತ್ತದೆ. ಭೂಮಿಯ ಮೇಲಿನ ನಾವುಗಳು ಲೆಕ್ಕಕಿಲ್ಲ. ಆದರೆ ಅಹಂಕಾರ ನೋಡಿದರೆ ಬ್ರಹ್ಮಾಂಡದಷ್ಟು.
ನನಗೆ ಬ್ರಹ್ಮನನ್ನು ತಿಳಿಯುವ ಕುತೂಹಲ ಇತ್ತೀಚಿನದು. ಬ್ರಹ್ಮಾಂಡವನ್ನು ಕುರಿತಂತೆ ಕೆಲವು ಪುಸ್ತಕಗಳನ್ನು ಕೊಂಡು ಓದಲು ಶುರು ಮಾಡಿದೆ. ಸೂರ್ಯ, ಚಂದ್ರ, ಗ್ರಹಗಳು, ನಕ್ಷತ್ರಗಳು, ಪುಂಜಗಳು, ಕರಿ ಗುಳಿಗಳು, ಹೀಗೆ ಓದುವಾಗ ಅವುಗಳೆಲ್ಲವೂ ಕೌತುಕ ಮತ್ತು ವಿಸ್ಮಯ. ಈ ಪುಸ್ತಕಗಳನ್ನು ಓದುತ್ತಿರುವ ಸಮಯದಲ್ಲಿ ನನ್ನ ಹತ್ತಿರ ಆಪ್ತ ಸಮಾಲೋಚನೆಗೆಂದು ಪಿ ಯು ಸಿ ಎರಡನೆಯ ವರ್ಷ ಓದುತ್ತಿದ್ದ ವಿದ್ಯಾರ್ಥಿ ತನ್ನ ತಾಯಿಯ ಜೊತೆ ನನ್ನ ಕೊಠಡಿಗೆ ಬಂದರು. ತಾಯಿ “ಸರ್, ಓದಲು ಗಮನವಿಲ್ಲ, ನಿದ್ರೆ ಕಡಿಮೆ, ಬೇಜಾರು, ಕೆಲವೊಮ್ಮೆ ಆತ್ಮ ಹತ್ಯೆಯ ವಿಚಾರ ಮಾತನಾಡುತ್ತಾನೆ” ಎಂದು ದೂರಿದರು.
ಇವನಿಗೆ ಡಾಕ್ಟರ್ ಆಗಬೇಕೆಂಬ ಬಯಕೆ ಇತ್ತು. ಅದರೆ ಅಂಕಗಳು ಕಮ್ಮಿ ತೆಗೆದುಕೊಂಡಿದ್ದ ಮತ್ತು ಜೊತೆ ಜೊತೆಗೆ ಖಿನ್ನತೆ ಆವರಿಸಿತ್ತು. ಆತನು ಇನ್ನೂ ಚಿಕ್ಕವನಾದ್ದರಿಂದ ಹಾಗು ಆತನ ಮನಸ್ಸನ್ನು ಹಗುರ ಮಾಡಲು ಮತ್ತು ಮಾತ್ರೆಗಳನ್ನು ನೀಡಬಾರದೆನ್ನುವ ವಿಚಾರಕ್ಕೆ ಬಂದು ಸುಮಾರು ಒಂದು ಗಂಟೆ ಆತ್ಮ ಸಮಾಲೋಚನೆ ಇವನ ಜೊತೆ ಮಾಡಿದೆ. ಈ ಸಂದರ್ಭದಲ್ಲಿ ನಾನು ಆಗತಾನೆ ಓದಿದ್ದ ಬ್ರಹ್ಮಾಂಡ, ಭೂಮಿ, ಜೀವನದ ಬಗೆಗಿನ ವಿಷಯಗಳನ್ನು ಹೇಳುತ್ತಾ ಹೋದೆ. ವಿದ್ಯಾರ್ಥಿಯು ಕಣ್ಣು ಮಿಟುಕಿಸದೆ ಸಾವಧಾನದಿಂದ ಕೇಳಿದ. ಹೋಗುವ ಮುನ್ನ ಥ್ಯಾಂಕ್ಸ್ ಹೇಳಲು ಮರೆಯಲಿಲ್ಲ.
ಇದನ್ನು ಓದು: ಯಮ ಮಹಾರಾಜ (ವೈಯಕ್ತಿಕ ಸಿದ್ಧಾಂತ)
ಮೂರು ಅಥವ ನಾಲ್ಕು ದಿವಸಗಳು ಕಳೆದಿರಬಹುದು, ನನ್ನ ಹತ್ತಿರ ಆತನ ತಾಯಿ ಬಂದು “ಸಾರ್, ನಿಮ್ಮ ಆತ್ಮ ಸಮಾಲೋಚನೆ ನನ್ನ ಮಗನಿಗೆ ಅಡ್ಡ ಪರಿಣಾಮ ಬೀರಿದೆ. ಮಗ ಸಬ್ಜೆಕ್ಟ್ ಓದುವುದನ್ನು ನಿಲ್ಲಿಸಿಬಿಟ್ಟಿದ್ದಾನೆ. ಸಬ್ಜೆಕ್ಟ ಪುಸ್ತಕಗಳನ್ನು ಬದಿಗಿಟ್ಟು ಕಾರ್ಲ ಸಾಗಾನ್ ಪುಸ್ತಕಗಳನ್ನು ಕೊಂಡು ಓದುತ್ತಿದ್ದಾನೆ. ನಿಮಗೆ ನೀಡಿದ ಕನ್ಸಲ್ಟೇಷನ್ ಫೀಸ್ ವಾಪಸ್ ಮಾಡಿ” ಎಂದು ಕೋರಿದರು. ಕ್ಷಣ ಕಾಲ ಅಳಬೇಕೋ ಅಥವ ನಗಬೇಕೋ ತಿಳಿಯದೆ ತಬ್ಬಿಬ್ಬಾದೆ. ನೋಡಿ ವೃತ್ತಿಪರರಲ್ಲಿ ಎಂತಾಂತಾ ಸಮಸ್ಯೆಗಳು ಎದುರಾಗಬಹುದು.
ಇಂಗ್ಲಿಷಿನ “ಕಾಸ್ಮಾಸ್” ಒಂದು ಗ್ರೀಕ್ ಪದ. ವಿಶ್ವ ಅಥವ ಬ್ರಹ್ಮಾಂಡ ಎಂದು ನಾವು ಕರೆಯುತ್ತೇವೆ. ಈ ಪದದ ಅರ್ಥ “ಆರ್ಡರ್ಲಿ (orderly)” ಅಥವಾ “ಕ್ರಮ ಬಧ್ದ” ಎಂದು. ಒಮ್ಮೆ ಯೋಚಿಸೋಣ ಈ ವಿಶ್ವವು ಹೇಗೆ ತನ್ನ ಕ್ರಮ ಬದ್ಧತೆಯನ್ನು ಹೇಗೆ ಉಳಿಸಿಕೊಂಡಿದೆ ಅಂತ. ಉದಾಹರಣೆಗೆ ನಮ್ಮ ಭೂಮಿ ಈ ಜಗದಲಿ ತನ್ನ ನಿಲುವನ್ನು ಕಾಯ್ದುಕೊಂಡಿದೆ ಅಲ್ಲವೆ. ಯಾವ ಆಧಾರದ ಮೇಲೆ ನಿಂತಿದೆ? ಈ ಪ್ರಶ್ನೆಗೆ ಉತ್ತರ ಕೊಡುವ ಗೋಜಿಗೆ ಹೋಗುವುದಿಲ್ಲ. ನನ್ನನ್ನು ಕೆಣಕಿದ್ದು “ಸಸ್ಪೆಂಡೆಡ್ ಪಾರ್ಟಿಕಲ್”. ನನಗೆ ಕೆಲವೇ ಕೆಲವು ಸ್ನೇಹಿತರು. ಮಧ್ಯಾಹ್ನದ ಹೊತ್ತಿಗೆ ಜೊತೆಯಲ್ಲಿ ಟೀ ಕುಡಿಯುವ ಅಭ್ಯಾಸ.
ಇದನ್ನು ಓದು: ಮೆದುಳೆಂಬ ಬ್ರಹ್ಮಾಂಡ ಮನೆ (ವೈಜ್ಞಾನಿಕ ವಿವರಣೆ)
ನನಗೆ ಟೀ ಕುಡಿಯುವುದೆಂದರೆ ಮದ್ಯಪಾನ ಮಾಡಿದಷ್ಟು ಖುಷಿ. ನನ್ನ ಶ್ರೀಮತಿಯ ಹೆಸರು ಛಾಯ. ಸ್ನೇಹಿತರು ಪ್ರೀತಿಯಿಂದ ನನ್ನನ್ನು “ಛಾಯಪತಿ” ಎಂದು ಕರೆಯುತ್ತಿದ್ದರು. ನನ್ನ ಸ್ನೇಹಿತ ನೇತ್ರ ತಜ್ಞ. ತನ್ನ ಕ್ಲಿನಿಕ್ನಲ್ಲಿ ಟೀ ಸವಿಯುತ್ತಿದ್ದಾಗ ಈ ಸ್ನೇಹಿತ ಅಲ್ಲಿ ಬಂದಂತಾ ಕಣ್ಣಿನ ಸಮಸ್ಯೆಗೆ “ನಿಮ್ಮ ಕಣ್ಣಿನಲ್ಲಿ ಸಸ್ಪೆಂಡೆಡ್ ಪಾರ್ಟಿಕಲ್ ಇದೆ” ಅಂದ. ಇಲ್ಲೆ ನನಗೆ ಕಾಡಿದ್ದು ಈ ಸಸ್ಪೆಂಡೆಡ್ ಪಾರ್ಟಿಕಲ್ (ಅಲೆಮಾರಿ ಕಣ) ಏನು ಅಂತ.
ನಮ್ಮ ದೇಶದಲ್ಲಿ ಇಂದು ಲಂಚಾವತಾರ ತಾಂಡವಾಡುತಿದೆ. ಇದು ವಾಸಿ ಆಗದ ರೋಗವಾಗಿದೆ. ಸರ್ಕಾರಿ ನೌಕರ ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತರಿಗೆ ಸಿಕ್ಕಿ ಹಾಕಿಕೊಳ್ಳುತ್ತಾನೆ ಎಂದು ಕೊಳ್ಳೋಣ, ಸಾಭೀತ್ ಆದರೆ ಅತನನ್ನು ಸಸ್ಪೆಂಡ್ ಮಾಡುತ್ತಾರೆ. ಒಂದು ಕಮಿಷನ್ ಆಫ ಎನಕ್ವೈರಿ ಮಾಡುತ್ತಾರೆ. ಈ ಸಸ್ಪೆಂಡ್ ಪದವನ್ನು ವಿಭಜಿಸಿದಾಗ ನನಗೆ ಕಂಡಿದ್ದು “ಸಸ್ಪೆಕ್ಟ + ಅಪ್ರಹೆಂಡೆಡ್”. ಅಂದರೆ “ಅನುಮಾನ + ಆತಂಕ ಪಡು” ಎಂದು. ಸರ್ಕಾರಕ್ಕೆ ಈತನ ಮೇಲೆ ಅನುಮಾನ, ಈತನಿಗೆ ಆತಂಕ. ಈಗ ಇವನು ಡ್ರಿಫ್ಟರ್ ಅಥವ ಅಲೆಮಾರಿ ಆಗುತ್ತಾನೆ. ಇವನು ನ್ಯಾಯಾಂಗ ಮತ್ತು ಕಾರ್ಯಂಗಗಳ ನಡುವೆ ಅಲೆಮಾರಿ.
ಈತನಿಗೆ ಶಿಕ್ಷೆ ಅಥವ ಮರು ಆದೇಶ ಬರೋವರಿಗೂ ಇವನು ಆತಂಕದಲ್ಲೇ ಬದುಕಬೇಕು. ಕಣ್ಣಿನ ಒಳಗಿರುವ ಸ್ನಿಗ್ಧದತೆಯ (ವಿಸ್ಕಸ್) ದ್ರವದಲ್ಲಿ ಸಸ್ಪೆಂಡೆಡ್ ಕಣ ಅಲೆಮಾರಿ. ಹಾಗೆಯೇ ‘ಆತಂಕ’ ಎನ್ನುವುದು ನಮ್ಮ ಪ್ರಜ್ಞಾ ಪ್ರಪಂಚದಲ್ಲಿ ಅಲೆಮಾರಿ, ಸರಿ ತಪ್ಪುಗಳ ನಡುವೆ. ಇಂತಹ ಗೂಂದಲದ ಅಲೆಮಾರಿಯನ್ನು ಸರಿಪಡಿಸದೇ ಹೋದರೆ ನಾವು ಸಾಯೋವರಿಗೂ ಈ ಅಲೆಮಾರಿಯೊಂದಿಗೆ ಬದುಕಬೇಕಾಗುತ್ತೆ. ಪ್ರಸ್ತುತದಲ್ಲಿ ಶುದ್ಧತನ ಮತ್ತು ಲಂಚತನ ನಡುವೆ, ಎಡ ಮತ್ತು ಬಲ ಪಂಥಿಯರ ನಡುವೆ, ಧರ್ಮ ಧರ್ಮಾಂಧತೆಗಳ ನಡುವೆ, ಆಸ್ತಿಕ ನಾಸ್ತಿಕರ ನಡುವೆ, ಹೀಗೆ ಇವರ ಮಧ್ಯೆ ನಾವೆಲ್ಲಾ ಅಲೆಮಾರಿಗಳೇ. ಇವರ ಸಿದ್ಧಾಂತಗಳು ನಡು ನೆಲ (neutral) ಕಂಡುಕೊಳ್ಳುವುದಿಲ್ಲವೋ ಅಲ್ಲಿಯವರೆಗೂ ನಮ್ಮ ಆತಂಕ ಕಡಿಮೆ ಆಗುವುದಿಲ್ಲ.
ಬ್ರಹ್ಮಾಂಡದಲ್ಲಿ ನಮ್ಮ ಭೂಮಿ ಸಸ್ಪೆಂಡೆಡ್ ಕಣ. ಪ್ರೋಟಾನ್ ಮತ್ತು ನ್ಯೂಟ್ರಾನುಗಳ ಅನಂತ ಸಮುದ್ರದಲ್ಲಿ ನಮ್ಮ ಭೂಮಿಯು ತೇಲುತ್ತಿದೆ. ಭೂಮಿ ಅಲೆಮಾರಿಯಲ್ಲ. ತನ್ನ ಸ್ಥಳದಲ್ಲಿ ಮತ್ತು ಪಥದಲ್ಲಿ ಸ್ಥಿರವಾಗಿ ನಿಂತಿದೆ. ವಿದ್ಯುತ್ಕಾಂತೀಯ ( electro magnetic force), ಸ್ಟ್ರಿಂಗ್ ಸಿದ್ಧಾಂತ ( string theory) ಮತ್ತು ಕೇಂದ್ರಾಭಿಮುಖ (centripetal) ಅಥವ ಕೇಂದ್ರಪಗಾಮಿ ( centrifugal) ಬಲಗಳಿಂದ ಗ್ರಹಗಳು ಮತ್ತು ನಕ್ಷತ್ರಗಳು ತಮ್ಮ ತಮ್ಮ ಸ್ಥಾನ ಮತ್ತು ಸ್ಥಿರತೆಗಳನ್ನು ಕಾಯ್ದುಕೊಂಡಿರಬಹುದೇ? ವಿಶ್ವ ಜಗದಲ್ಲಿ ಅನೇಕ ಅಲೆಮಾರಿಗಳು ಇವೆ. ಅವುಗಳು ಕ್ಷುದ್ರ ಗ್ರಹಗಳು, ಉಲ್ಕೆಗಳು, ಧೂಮಕೇತುಗಳು.
ಯಾವುದೇ ಕ್ಷಣದಲ್ಲಿ ನಮ್ಮ ಭೂಮಿಗೆ ಅಪ್ಪಳಿಸಿಬಹುದು. ಇದು ಆತಂಕವೇ. ಭಯ ಬೇಡ. ಬಂದು ಅಪ್ಪಳಿಸಲು ಸುಮಾರು ನೂರು ಮಿಲಿಯನ್ ವರ್ಷಗಳೇ ಬೇಕಾಗಬಹುದೇನೋ. ಇಂದು ಆಂತಹ ಕ್ಷುದ್ರಗ್ರಹಗಳನ್ನು ಸುಡಲು ನಮ್ಮ ವಿಜ್ಞಾನಿಗಳು ಸದಾ ಸಿದ್ಧ ಇರುತ್ತಾರೆ. ಆದರೇ ನಮ್ಮ ಭಯದ ಅಲೆಮಾರಿಯನ್ನು ನಾವೇ ಅಳಿಸಬೇಕು ಅಲ್ಲವೇ..
Our Earth is a speck when compared to Brahman. The tiny Earth actually is a suspended particle in the medium of proton and neutron sea. The time in which we are living is short when compared to the space and time around us. This may throw some knowledge on what exactly holds us and also what is that controls this Mega Brahman….
ಮುಂದುವರಿಯುವುದು….
-ಡಾ॥ ಎ.ಎಂ.ನಾಗೇಶ್
ಖ್ಯಾತ ಮನೋವೈದ್ಯ


“ಮನ ” ವನ್ನು ಕಾಣದ ಕಣ ವೆನ್ನಬಹುದೇ. ಭ್ರಮಲೋಕದಲ್ಲಿನ ಭ್ರಮೆ ಎನ್ನಬಹುದೇ?