ಸ್ನೇಹಿತರೊಬ್ಬರು “ಡಾಕ್ಟ್ರೇ, ಮೆದುಳು ಮಹಾ ಮನೆ ಅಂತ ಹೇಳಿದಿರಾ. ಇದರ ವಿವರಣೆಯನ್ನು ಕೊಡುತ್ತೀರಾ” ಎಂದು ಕೇಳಿದರು.
ಈ ಪ್ರಶ್ನೆ ಮಾನಸಿಕ ವೈದ್ಯನಿಗೆ ಅತ್ಯಂತ ಅಮೂಲ್ಯವಾದ ಪ್ರಶ್ನೆ. ಮನೆ, ಚಿಕ್ಕ ಮನೆ, ದೊಡ್ಡ ಮನೆ ಮತ್ತು ಜಟಿಲ ಮನೆ. ಮನೆ ಎಂಬುದು ಸಂಕೀರ್ಣವೇ ಸರಿ. ಕೆಲವು ಮನೆ ಅರ್ಥವಾಗುತ್ತದೆ, ಉಳಿದವು ಅರ್ಥವಾಗುವುದಿಲ್ಲ. ಮಹಾ ನಗರಗಳಲ್ಲಿ ಮನೆಗಳು ಅರ್ಥ ರಹಿತವಾದದ್ದು. ಯಾರು ಮನೆಯಲ್ಲಿ ವಾಸವಾಗಿದ್ದಾರೆ, ಯಾರು ಮನೆ ಒಳಗೆ ಹೋಗುತ್ತಾರೆ ಮತ್ತು ಯಾರು ಮನೆಯಿಂದ ಹೊರ ಬರುತ್ತಾರೆ ಎಂಬುದು ಯಾರಿಗೂ ಗೊತ್ತಾಗುವುದೇ ಇಲ್ಲ. ಆದರೆ ಹಳ್ಳಿ ಪಟ್ಟಣಗಳಲ್ಲಿ ಇದು ತದ್ವಿರುದ್ದ. ಎಲ್ಲವೂ ಎಲ್ಲರಿಗೂ ಗೊತ್ತಾಗುತ್ತದೆ.
ಮನೆ ಕಟ್ಟಿಸಿದ ನನ್ನ ಸ್ನೇಹಿತ ತನ್ನ ಉದ್ಫಾಟನಾ ಸಮಾರಂಭಕ್ಕೆ ಕರೆಯಲಿಲ್ಲ. ಈತನ ಜಟಿಲ ಮನಸ್ಸು ನನಗೆ ಎಲ್ಲಿಯವರಿಗೂ ಅರ್ಥವಾಗುವುದಿಲ್ಲವೋ ಅಲ್ಲಿಯವರೆಗೂ ಅವನ ಮನೆಗೆ ನಾನು ಹೋಗಲು ಆಸಾಧ್ಯ. ಮತ್ತೊಬ್ಬ ಸ್ನೇಹಿತ ಮನೆಯನ್ನು ಕಟ್ಟಿಸಿದ. ನನ್ನನ್ನು ಆಮಂತ್ರಣಿಸಿದ್ದ. ಅದ್ಭುತವಾದ ಮನೆ. ತನ್ನದು ಚಿಕ್ಕ ಸಂಸಾರ. ಹಲವಾರು ಕೋಣೆಗಳು. ವಿಶಾಲವಾದ ಮುನ್ನಂಗಳ ಮತ್ತು ಬಹು ದೊಡ್ಡ ಹಾಲ್. ದೇವರ ಮನೆಯಂತೂ ದೇವಸ್ಥಾನ ಇದ್ದಂತೆ ಇದೆ. ಕೆಳ ಹಂತದಲ್ಲಿ ದೊಡ್ಡ ಸಿನಿಮಾ ಹಾಲ್. ಮಕ್ಕಳು ವಿದೇಶದಲ್ಲಿ ನೆಲೆಸಿರುವರು. ಈ ಸ್ನೇಹಿತ ಮತ್ತು ಶ್ರೀಮತಿ, ಇಬ್ಬರೂ ಡಾಕ್ಟರಗಳು. ಬೆಳಿಗ್ಗೆ ಎದ್ದರೆ ರಾತ್ರಿಯವರಿಗೂ ಆಸ್ಪತ್ರೆ ವಾಸ. ಊಟ ಆಸ್ಪತ್ರೆಯಲ್ಲೆ. ಯಾವಾಗಲು ಕಿಟಿಕಿ ಬಾಗಿಲು ಬಂದ್. ಮನೆಯಲ್ಲಿ ದುರ್ಬಿನ್ ಹಾಕಿ ನೋಡಿದರೂ ಎಲ್ಲೂ ಧೂಳು ಕಾಣುವುದಿಲ್ಲ. ಮನೆಯಲ್ಲಿ ಎಲ್ಲಿ ನೋಡಿದರೆ ಅಲ್ಲಿ ಬೆಲೆ ಬಾಳುವ ಉಪಕರಣಗಳು. ಇವುಗಳನ್ನು ಉಪಯೋಗಿಸಿರುವುದು ಕಮ್ಮಿ. ಎಲ್ಲವೂ ಸ್ವಚ್ಛ ಮತ್ತು ಹೋದವರು ಏನು ಮುಟ್ಟುವ ಹಾಗಿಲ್ಲ. ಸ್ನೇಹಿತ ಒಳ್ಳೆಯವನು ಅದರೆ ಮನೆ ಮಾತ್ರ ಸಂಕೀರ್ಣ. ಮನೆಯ ಕೋಣೆಗಳು ಬೆಳಕನ್ನು ನೋಡುವುದು ಬಂಧುಗಳು ಬಂದಾಗ ಮಾತ್ರ. ಈ ಮನೆಯನ್ನು ಕಾಯಲು ಕಾವಲುಗಾರನಿಗೆ ಔಟ್ ಹೌಸ್.
ಆದರೆ ಹಳ್ಳಿಗಳಲ್ಲಿ ಇರುವ ಮನೆಗಳು? ಹಳೇ ಮನೆ, ಚಿಕ್ಕ ಮನೆ, ಎಲ್ಲವೂ ಇದೆ, ಎಲ್ಲರೂ ಇದ್ದಾರೆ. ನಂದ ಗೋಕುಲ. ಭಾವನೆ ಯೋಚನೆಗಳು ಸಮಾಸಮ. ತೆರಿದಿಟ್ಟ ಕೋಣೆಗಳು. ವಿಶ್ವಾಸ, ನಂಬಿಕೆ, ಬರವಸೆ ಮತ್ತು ಜವಾಬ್ದಾರಿ ಒಂದೇ ಸೂರಿನ ಅಡಿಯಲ್ಲಿ ಇವೆ. ಮನಸ್ತಾಪಗಳಿಲ್ಲ, ಜಗಳ ಇಲ್ಲ ಅದರೆ ಹಣ ಇಲ್ಲ. ಇಂದಿನ ಐಟಿ ಬಿಟಿ ಬೆಳವಣಿಗೆ ಮತ್ತು ಸ್ಪರ್ಧಾತ್ಮಕ ಪ್ರಪಂಚದಲ್ಲಿ ಮನೆಗಳು ಅರಮನೆಗಳು ಆಗಿವೆ, ಹಣ ಇದೆ, ಭಾವನೆಗಳು ಹಾರಿ ಹೋಗಿವೆ, ಯೋಚನೆಗಳು ಬರಿದಾಗಿವೆ. ಸಂಬಂಧ ಹಳಿಸಿ ಹೋಗಿವೆ, ಮಾನಸಿಕ ಒತ್ತಡಗಳಿಂದ ರೋಧನೆ ಇಮ್ಮಡಿಸಿವೆ.
ಇದನ್ನು ಓದಿ: ಮುಗ್ದನಾಗು, ಪೂರ್ಣತೆಯನ್ನು ಹೊಂದು…!
ನಮ್ಮ ಮೆದುಳು ಇಂತಾದೆ ಬೃಹತ್ತಾದ ಮನೆ. ಲೆಕ್ಕವಿಲ್ಲದಷ್ಟು ಅಡುಗೆ ಮನೆಗಳು, ಅಂಗಳಗಳು ಮತ್ತು ಕೋಣೆಗಳು. ಈ ಮನೆ ಬ್ರಹ್ಮಾಂಡದಷ್ಟು ವಿಸ್ತರಿಸಿದ್ದರೂ ಗಾತ್ರದಲ್ಲಿ ಮಾತ್ರ ಚಿಕ್ಕದು. ಇಲ್ಲಿ ವಿದ್ಯುತ್ ಹರಿವು ಸದಾ ಇರುತ್ತೆ. ಕೋಟ್ಯಾಂತರ ಕೋಣೆ ತೆರಿದಿದ್ದರೆ ಸಾವಿರಾರು ಮುಚ್ಚಿರುತ್ತವೆ. ಬಹುತೇಕ ಕೋಣೆಗಳಲ್ಲಿ ಬೆಳೆಕು ಇರುತ್ತದೆ. ಪಾಕಶಾಲೆ ಸದಾಕಾಲ ಕಾರ್ಯ ನಿರ್ವಹಿಸುತ್ತಿರುತ್ತೆ. ಇಲ್ಲಿ ವಾಸ ಮಾಡುವ ಮಂದಿ ನಾಲ್ವರು ಮಾತ್ರ. ಈ ನಾಲ್ವರಿಗೆ ಬ್ರಹ್ಮಾಂಡದಂತ ಅಗಲವಾದ ಸಿನಿಮಾ ಪರದೆ ಇರುತ್ತದೆ. ಈ ಸಿನಿಮಾದ ಪಾತ್ರದಾರಿಗಳು ನಾಲ್ವರು, ಈ ನಾಲ್ವರಲ್ಲದೆ ತರಾವರಿ ಜನಗಳ ಮಧ್ಯೆ ನಿರಂತರವಾಗಿ shooting ನೆಡೆಯುತ್ತಾ ಇರುತ್ತದೆ.
ಹಾಗಾದರೆ ಈ ನಾಲ್ವರು ಯಾರು? ಯೋಚನೆ, ಭಾವನೆ, ಇಚ್ಚೆ ಮತ್ತು ಕಾರ್ಯ. ಒಮ್ಮೆ ಊಹಿಸೋಣ, ಮನೆಯಲ್ಲಿ ಅಮ್ಮ, ಅಪ್ಪ, ಮಗ ಮತ್ತು ಮಗಳು ಇದ್ದಾರೆ ಎಂದು. ಅಂಗಳಕ್ಕೆ ಮಗ ಬಂದರೆ ಅಪ್ಪ ಬರುವುದಿಲ್ಲ, ಅಮ್ಮ ಬಂದ ಅಡುಗೆ ಮನೆಗೆ ಮಗಳು ಹೋಗುವುದಿಲ್ಲ. ಮಾತನಾಡಿದರೆ ಉದ್ವೇಗ ಹಾಗು ಸಿಟ್ಟು. ನಗು ಮುಖ ಇಲ್ಲವೇ ಇಲ್ಲ. ಸಂಬಂಧ ಇದ್ದು ಇಲ್ಲದಂತೆ ಆಗಿದೆ. ತಾಯಿ ಕೋಪಿಷ್ಟೆ ಎಂದು ಮಗಳು ರೂಮಿನಲ್ಲಿ ಏಕಾಂಗಿ, ಬಾಗಿಲು ಬಂದ್. ಮಗ ಕೇಳಿದ್ದನ್ನು ಅಪ್ಪ ಕೊಡಲಿಲ್ಲ ಎಂದು ರೂಮಿಗೆ ಹೋದ ಮಗ ಬಾಗಿಲನ್ನು ತೆರೆಯುವುದೇ ಇಲ್ಲ. ಅಪ್ಪ ಕುಡುಕ, ತಾಯಿ ಜಗಳಗಂಟಿ. ಏನಾಗಬಾರದು ಮನೆ. ಮನೆ ಒಂದು, ನಾಲ್ಕು ಬಾಗಿಲು. ಹೀಗಿರುವಾಗ ಮನೆಯ ಪರಿಸ್ಥಿತಿ, ಒಡಕು, ಕವಲು ಮತ್ತು ಅಯೋಮಯ.
ಮೆದುಳಿನ ಮನೆಯಲ್ಲಿ ಇಂತಹದೇ ಸಮಸ್ಯೆ ಆದಾಗ ಏನಾಗಬಹುದು? ಮತ್ತೊಮ್ಮೆ ಯೋಚಿಸೋಣ. ಯೋಚನೆ, ಭಾವನೆ ಜೊತೆ ಬಾಂಧವ್ಯ ಸರಿಯಿಲ್ಲ ಅಥವ ಸಂಪರ್ಕ ಕಳೆದುಕೊಂಡಿದೆ ಎಂದುಕೊಳ್ಳೊಣ. ಆಗ ಮನಸ್ಸಿನ ಯೋಚನೆಗೆ ಭಾವನೆ ಇಲ್ಲದಿದ್ದಾಗ ಮಾತನಾಡಲು ಪದಗಳೇ ಹೊಮ್ಮುವುದಿಲ್ಲ (poverty of thoughts). ಆದರೆ ಭಾವನೆಗೆ ಆಗುವ ನೋವೇ ಬೇರೆ. ಮಾನಸಿಕವಾಗಿ ಕುಗ್ಗಿ ಗಾಬರಿ, ತಳಮಳ, ಆತಂಕ, ಚಡಪಡಿಕೆ, ಹೃದಯ ಬಡಿತ, ಸುಸ್ತು, ಬೇಸರ ಇತ್ಯಾದಿಗಳಿಂದ ಮನೋಬೇನೆ ಕಾಣಿಸಿಕೊಳ್ಳುವುದು. ಕೆಲವೊಮ್ಮೆ ಪರಿಸ್ಥಿತಿ ಸರಿಯಿಲ್ಲ ಅಂದಾಗ ಆತ್ಮಹತ್ಯೆಗೆ ಪ್ರಯತ್ನ ಅಥವಾ ಆತ್ಮಹತ್ಯೆ ಮಾಡಿಕೊಳ್ಳಬಹುದು. ಹೀಗೆಯೇ ಇಚ್ಚೆ ಮತ್ತು ಕಾರ್ಯದ ನಡುವೆ ಅನೋನ್ಯತೆ ಇಲ್ಲ ಎಂದಾಗ ನಿಜವಾದ ಕವಲೊಡೆಯುತ್ತೆ. ಇದನ್ನೆ ನಾವು split ಅಥವ schiz ಎನ್ನುವುದು. Schizophrenia ಅಂದರೆ split mindedness ಅಂತ. ಇಚ್ಚೆ ಮುಂದುವರಿಯುದೇ ಇದ್ದರೆ ಮುಖ ತೊಳೆಯುವುದಿಲ್ಲ, ಹಲ್ಲು ಉಜ್ಜುವುದಿಲ್ಲ, ಕ್ಷೌರ ಮಾಡಿಕೊಳ್ಳಬೇಕೆಂಬ ಆಸೆ ಇರುವುದಿಲ್ಲ, ಅಸೆ ಮತ್ತು ದುಡಿಯುವ ಹಂಬಲ ಕಾಣುವುದಿಲ್ಲ ಮತ್ತು ಜವಾಬ್ದಾರಿಯಿಂದ ನೆಡೆದುಕೊಳ್ಳುವುದಿಲ್ಲ. ಇದರಿಂದ ಕಾರ್ಯ ಅಥವಾ ಕೆಲಸ ನಿಂತು ಹೋಗಿಬಿಡುತ್ತದೆ.
ಈಗ ಈ ನಾಲ್ವರಲ್ಲೂ ಸಮಂಜಸವಾದ ಹೊಂದಾಣಿಕೆ ಇಲ್ಲ ಎಂದು ಕೊಳ್ಳೋಣ, ಹೀಗೆ ಇದ್ದಾಗ ಇವುರುಗಳು ಬಾಧಿತರಾಗಿರುವುದಿಲ್ಲ, ಗೌರವಿಸುವುದಿಲ್ಲ, ಪೂರ್ವಾಗ್ರಹ ಅನುಮಾನಗಳು ಇರುತ್ತದೆ. ಈ ಕಾರಣದಿಂದ ಮೆದುಳಿನ ಪಾಕಶಾಲೆಗಳಲ್ಲಿ ರಸಾಯನಿಕ ತಯಾರು ಆಗದೆ ಅಥವಾ ಕಮ್ಮಿ ಆಗಿ ನರಗಳ ಸಂವೇದನೆಗಳು ಎರುಪೇರಾಗಿ ಹಲವಾರು ಮಾನಸಿಕ ಕಾಯಿಲೆಗಳು ಬರಬಹುದು.
ಆದುದರಿಂದ ಈ ನಾಲ್ವರು ಮೆದುಳಿನ ಬ್ರಹ್ಮಾಂಡ ಮನೆಯಲ್ಲಿ harmonious ಆಗಿ ಕೆಲಸ ಮಾಡಿದರೆ ಮಾನವ upright ಆಗಿ ಇರುತ್ತಾನೆ. ಇದು ಇದ್ದಾಗ ಅವನ ಮುಖದಲ್ಲಿ ಮುಗುಳ್ನಗೆ ಕಾಣಬಹುದು. ಈ ಮುಗುಳ್ನಗೆ ಹೃದಯದಿಂದ ಬಂದಿದ್ದೇ ಆಗಿದ್ದರೆ Home Sweet Home ಹೇಳಿಕೆಯು ಮೌಲ್ಯದಿಂದ ಕೂಡಿದ್ದಾಗಿರುತ್ತದೆ ಅಲ್ಲವೇ…
ಮುಂದುವರಿಯುವುದು….
-ಡಾ॥ ಎ.ಎಂ.ನಾಗೇಶ್
ಖ್ಯಾತ ಮನೋವೈದ್ಯ


[…] […]