ಬೆಂಗಳೂರು: ಮೊಟ್ಟೆಯಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆಯಾದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಆರೋಗ್ಯ ಇಲಾಖೆ ತೀವ್ರ ಎಚ್ಚರಿಕೆ ಘೋಷಿಸಿದೆ. ಈ ಸಂಬಂಧ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಅವರು ತಕ್ಷಣ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ರಾಜ್ಯದ ವಿವಿಧ ಭಾಗಗಳಲ್ಲಿ ಮಾರಾಟವಾಗುತ್ತಿರುವ ಮೊಟ್ಟೆಗಳ ಮಾದರಿಗಳನ್ನು ಸಂಗ್ರಹಿಸಿ ಲ್ಯಾಬ್ಗಳಲ್ಲಿ ಪರಿಶೀಲನೆ ನಡೆಸುವಂತೆ ಸಚಿವರು ನಿರ್ದೇಶನ ನೀಡಿದ್ದಾರೆ. ಪರೀಕ್ಷೆಯಲ್ಲಿ ಕ್ಯಾನ್ಸರ್ ಕಾರಕ ಅಂಶಗಳು ಪತ್ತೆಯಾದಲ್ಲಿ, ಸಂಬಂಧಿತ ಮೊಟ್ಟೆ ಉತ್ಪಾದಕರು ಹಾಗೂ ವಿತರಕರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ನಿಷೇಧಿತ ಔಷಧದ ಅಂಶ ಪತ್ತೆ
ಪರಿಶೀಲನೆಯ ವೇಳೆ ಮೊಟ್ಟೆಗಳಲ್ಲಿ ನೈಟ್ರೋಫ್ಯೂರನ್ ಎಂಬ ನಿಷೇಧಿತ ಔಷಧದ ಅಂಶ ಪತ್ತೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಈ ಅಂಶ ಮಾನವ ದೇಹದ ಜೀವಕೋಶಗಳಿಗೆ ಹಾನಿ ಉಂಟುಮಾಡುವ ಜೊತೆಗೆ ರೋಗನಿರೋಧಕ ಶಕ್ತಿಯನ್ನು ಕುಂದಿಸುತ್ತದೆ. ದೀರ್ಘಕಾಲ ಸೇವನೆಯಿಂದ ಕ್ಯಾನ್ಸರ್ನಂತಹ ಮಾರಣಾಂತಿಕ ಕಾಯಿಲೆಗಳಿಗೆ ಕಾರಣವಾಗುವ ಸಾಧ್ಯತೆ ಇದೆ ಎಂದು ಆಹಾರ ತಜ್ಞ ಡಾ. ಕೀರ್ತಿ ಹಿರೀಸಾವೆ ತಿಳಿಸಿದ್ದಾರೆ.
ಇದನ್ನು ಓದು: ಚಾಮರಾಜನಗರ– ಬೀದರ್ ‘ಕಲ್ಯಾಣ ಪಥ’ ಚತುಷ್ಪಥ ಹೆದ್ದಾರಿ ಯೋಜನೆಗೆ ಬಿಗ್ ಅಪ್ಡೇಟ್
ರಾಜ್ಯಾದ್ಯಂತ ಮಾದರಿ ಸಂಗ್ರಹ
ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಮೊಟ್ಟೆಗಳ ಮಾದರಿ ಸಂಗ್ರಹ ಕಾರ್ಯ ಆರಂಭಿಸುವಂತೆ ಆರೋಗ್ಯ ಇಲಾಖೆ ಸೂಚಿಸಿದೆ. ಸಾರ್ವಜನಿಕರ ಆರೋಗ್ಯ ರಕ್ಷಣೆಯೇ ಸರ್ಕಾರದ ಮೊದಲ ಆದ್ಯತೆಯಾಗಿದ್ದು, ಯಾವುದೇ ನಿರ್ಲಕ್ಷ್ಯಕ್ಕೆ ಅವಕಾಶ ನೀಡುವುದಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.
ಮೊಟ್ಟೆ ಉತ್ಪಾದನೆ ಹಾಗೂ ಪೂರೈಕೆಯಲ್ಲಿ ನಿಯಮ ಉಲ್ಲಂಘನೆ ಕಂಡುಬಂದಲ್ಲಿ ಸಂಬಂಧಿತ ಘಟಕಗಳನ್ನು ಬಂದ್ ಮಾಡುವುದರ ಜೊತೆಗೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
