ಆಲೂರು : ಸಮಾಜ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಮಹತ್ತರವಾದದ್ದು, ಎಲ್ಲಾ ವೃತ್ತಿಗಳಲ್ಲಿ ಶಿಕ್ಷಕ ವೃತ್ತಿಯೇ ಶ್ರೇಷ್ಠವಾದ ವೃತ್ತಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಆಲೂರು ತಾಲ್ಲೂಕು ಅಧ್ಯಕ್ಷ ಡಿ. ಎಂ. ವರದರಾಜು ಅಭಿಪ್ರಾಯಪಟ್ಟರು.
ಅವರು ಪಟ್ಟಣದ ನೌಕರ ಭವನದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರ ಸಂಘ ಆಲೂರು ತಾಲೂಕು ಘಟಕದ ವತಿಯಿಂದ ನಿವೃತ್ತ ಶಿಕ್ಷಕರಿಗೆ ಹಮ್ಮಿಕೊಂಡಿದ್ದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ಶಿಕ್ಷಕರ ವೃತ್ತಿ ಬಹಳ ಶ್ರೇಷ್ಠವಾದದ್ದು ಸಮಾಜ ನಿರ್ಮಾತೃಗಳನ್ನು ನಿರ್ಮಿಸುವ ಬಹುದೊಡ್ಡ ಜವಾಬ್ದಾರಿ ಶಿಕ್ಷಕರ ಮೇಲಿದೆ. ತಂತ್ರಜ್ಞಾನಿಯೋಗದಲ್ಲಿ ಆಧುನಿಕತೆ ಮುಂದುವರೆದಂತೆ ಶಿಕ್ಷಕರು ಸಹ ತಂತ್ರಜ್ಞಾನವನ್ನು ರೂಡಿಸಿಕೊಂಡು ಬೋಧನಾ ಕೌಶಲ್ಯವನ್ನು ಹೆಚ್ಚಿಸಿಕೊಳ್ಳಬೇಕಾಗಿದೆ. ಸರ್ಕಾರಿ ಶಾಲೆ ಶಿಕ್ಷಕರು ನಿಷ್ಠೆಯಿಂದ ಹಾಗೂ ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸಿದರೆ ಮಕ್ಕಳ ಸರ್ವಾಂಗಿಣ ಪ್ರಗತಿಗೆ ಅನುಕೂಲವಾಗುತ್ತದೆ. ಶಿಕ್ಷಕಿ ಉಮಾದೇವಿಯವರು ಕಳೆದ ಮೂರು ದಶಕಗಳಿಂದ ಬೋಧನಾ ವೃತ್ತಿಯಲ್ಲಿ ತಮ್ಮದೇ ಆದ ಚಾಪನ್ನು ಮೂಡಿಸಿದ್ದಾರೆ. ಸಾವಿರಾರು ವಿದ್ಯಾರ್ಥಿಗಳಿಗೆ ಕಲಿಸಿದ್ದಾರೆ. ಇವರ ಸುಧೀರ್ಘ ಸೇವೆಯನ್ನು ಪರಿಗಣಿಸಿ ಇಂದು “ಜೀವಮಾನ ಶಿಕ್ಷಣ ಸಾಧನ ರತ್ನ ಪ್ರಶಸ್ತಿ”ಯನ್ನು ನೀಡಿ ಗೌರವಿಸಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಕ್ಷೇತ್ರ ಸಮನ್ವಯ ಅಧಿಕಾರಿ ವಿಜಯಕುಮಾರ್, ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ರಾಜ್ಯದ್ಯಕ್ಷ ಕೊಟ್ರೇಶ್ ಎಸ್ ಉಪ್ಪಾರ್, ರಾಜ್ಯ ಸರ್ಕಾರಿ ನೌಕರ ಸಂಘದ ತಾಲ್ಲೂಕು ನಿಕಟ ಪೂರ್ವ ಅಧ್ಯಕ್ಷರಾದ ನಯನ, ಗೌರವಾಧ್ಯಕ್ಷರಾದ ಬಿ. ಆರ್. ಧರ್ಮ, ತಾಲೂಕು ಪ್ರಾಥಮಿಕ ಶಾಲೆ ಶಿಕ್ಷಕರ ಸಂಘದ ಅಧ್ಯಕ್ಷ ಎಂ. ಆರ್. ಶ್ರೀನಿವಾಸ್, ಉಪಾಧ್ಯಕ್ಷ ಎಂ.ಆರ್. ವೇಣು ಗೋಪಾಲ್ ಹಾಗೂ ವಿ.ರವಿತ, ಶಿಕ್ಷಕರಾದ ಆರ್. ಶಿವರಾಂ, ನಾಗರಾಜು, ರೇಖಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.

