ನವದೆಹಲಿ: ರೋಲ್ ಬಾಲ್ ವಿಶ್ವಕಪ್–2025ರ ಮಹಿಳಾ ವಿಭಾಗದ ಫೈನಲ್ ಪಂದ್ಯದಲ್ಲಿ ಭಾರತ ಮಹಿಳಾ ರೋಲ್ ಬಾಲ್ ತಂಡವು ಹಾಲಿ ವಿಶ್ವ ಚಾಂಪಿಯನ್ ಕೀನ್ಯಾ ತಂಡವನ್ನು 3–2 ಅಂತರದಿಂದ ಮಣಿಸಿ ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದುಕೊಂಡಿದೆ.
ರೋಚಕತೆಯಿಂದ ಕೂಡಿದ್ದ ಫೈನಲ್ ಪಂದ್ಯದಲ್ಲಿ ಆರಂಭದಿಂದಲೇ ಎರಡೂ ತಂಡಗಳು ಸಮಬಲದ ಹೋರಾಟ ನಡೆಸಿದರೂ, ಅಂತಿಮ ಕ್ಷಣಗಳಲ್ಲಿ ಭಾರತ ತಂಡ ತನ್ನ ಶ್ರೇಷ್ಠ ಪ್ರದರ್ಶನ ತೋರಿ ಗೆಲುವು ಸಾಧಿಸಿತು. ಹಾಲಿ ಚಾಂಪಿಯನ್ ತಂಡವನ್ನು ಸೋಲಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡಿರುವುದು ಭಾರತೀಯ ಮಹಿಳಾ ರೋಲ್ ಬಾಲ್ ತಂಡದ ಸಾಧನೆಯಲ್ಲಿ ಮತ್ತೊಂದು ಹೆಮ್ಮೆಯ ಕ್ಷಣವಾಗಿದೆ.
ಈ ಗೆಲುವಿನೊಂದಿಗೆ ಭಾರತ ಮಹಿಳಾ ತಂಡವು ಮೂರನೇ ಬಾರಿ ರೋಲ್ ಬಾಲ್ ವಿಶ್ವಕಪ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದು, ಇದಕ್ಕೂ ಮೊದಲು 2013 ಮತ್ತು 2017ರಲ್ಲಿ ವಿಶ್ವಕಪ್ ಗೆದ್ದಿತ್ತು.
ಭಾರತದ ಈ ಐತಿಹಾಸಿಕ ಸಾಧನೆಗೆ ದೇಶಾದ್ಯಂತ ಕ್ರೀಡಾಭಿಮಾನಿಗಳಿಂದ ಅಭಿನಂದನೆಗಳ ಮಹಾಪೂರ ಹರಿದುಬರುತ್ತಿದೆ. ಮಹಿಳಾ ಕ್ರೀಡಾಳುಗಳ ಈ ಯಶಸ್ಸು ಮುಂದಿನ ತಲೆಮಾರಿಗೆ ಪ್ರೇರಣೆಯಾಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
