ಚನ್ನರಾಯಪಟ್ಟಣ: ಶ್ರವಣಬೆಳಗೊಳ ಜೈನ ಮಠ ಹಾಗೂ ಚನ್ನರಾಯಪಟ್ಟಣ ನ್ಯಾಷನಲ್ ಕ್ಲಾಸಿಕಲ್ ಡ್ಯಾನ್ಸ್ ಅಕಾಡೆಮಿಯ ಸಂಯುಕ್ತ ಆಶಯದಲ್ಲಿ, ಶ್ರೀ ಕ್ಷೇತ್ರ ಶ್ರವಣಬೆಳಗೊಳದ ಪಂಪ ವೇದಿಕೆಯಲ್ಲಿ ಶನಿವಾರ ನಡೆದ ಕುಮಾರಿ ಹಿತನ್ಯ ಅವರ ಭರತನಾಟ್ಯ ರಂಗಪ್ರವೇಶ ಕಾರ್ಯಕ್ರಮವನ್ನು ಶ್ರೀ ಕ್ಷೇತ್ರ ಶ್ರವಣಬೆಳಗೊಳ ಜೈನ ಮಠದ ಶ್ರೀ ಶ್ರೀ ಅಭಿನವ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸ್ವಾಮೀಜಿ, ಪ್ರಾಚೀನ ಕಾಲದ ಕಲೆಗಳನ್ನು ಉಳಿಸಿ ಬೆಳೆಸುವಲ್ಲಿ ಜಿಲ್ಲೆಯ ಹೆಸರಾಂತ ನೃತ್ಯಪಟು ವಿದುಷಿ ಸ್ವಾತಿ ಪಿ. ಭಾರದ್ವಾಜ್ ಅವರ ಕೊಡುಗೆ ಅಪಾರವಾಗಿದೆ ಎಂದು ಶ್ಲಾಘಿಸಿದರು. ಗ್ರಾಮೀಣ ಪ್ರದೇಶದ ಮಕ್ಕಳಲ್ಲಿ ಭಾರತೀಯ ಸಂಸ್ಕೃತಿಯ ಕಲೆಗಳ ಮೇಲಿನ ಆಸಕ್ತಿಯನ್ನು ಮೂಡಿಸುವ ಉದ್ದೇಶದಿಂದ ಕೇವಲ 10 ವರ್ಷದ ಕುಮಾರಿ ಹಿತನ್ಯ ಅವರಿಗೆ ರಂಗಪ್ರವೇಶ ಕಲ್ಪಿಸಿರುವುದು ಅತ್ಯಂತ ಶ್ಲಾಘನೀಯ ಕಾರ್ಯ ಎಂದು ಹೇಳಿದರು. ಕಲೆಯನ್ನು ಉಳಿಸಿ ಬೆಳೆಸುವಲ್ಲಿ ಪೋಷಕರ ಪಾತ್ರ ಮಹತ್ವದದ್ದು ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಹಿರಿಯ ಪತ್ರಕರ್ತ ರವಿ ನಾಕಲಗೂಡು ಮಾತನಾಡಿ, “ನೃತ್ಯವನ್ನು ಕೇವಲ ಡ್ಯಾನ್ಸ್ ಎಂದು ತಿಳಿಯಬಾರದು. ಭರತನಾಟ್ಯವನ್ನು ಕಲಿಯಲು ಮತ್ತು ಪ್ರದರ್ಶಿಸಲು ಒಂದು ತಪಸ್ಸು ಅಗತ್ಯ. ಆ ತಪಸ್ಸಿನ ಹಿಂದೆ ಶ್ರೇಷ್ಠ ಪ್ರತಿಫಲ ದೊರಕುತ್ತದೆ” ಎಂದರು.

ಇದನ್ನು ಓದಿ: ಚನ್ನರಾಯಪಟ್ಟಣ: ತಾಲೂಕಿನ ದಂಡಿಗನಹಳ್ಳಿ ಹೋಬಳಿಯ ಕಾಚೇನಹಳ್ಳಿ ಏತನೀರಾವರಿಯಿಂದ ದಂಡಿಗನಹಳ್ಳಿ ಹೋಬಳಿ ಸಂಪನ್ನಗೊಂಡಿದೆ- ಕುಂದೂರು ಗ್ರಾಮ ಪಂಚಾಯತಿಯ ಅಧ್ಯಕ್ಷ ಕರಡೇವು ಮಧು
ಸ್ವಾತಿ ಭಾರದ್ವಾಜ್ ನಮ್ಮ ಜಿಲ್ಲೆಯ ಅಮೂಲ್ಯ ಆಸ್ತಿಯಾಗಿದ್ದು, ಶಾಸ್ತ್ರೀಯ ನೃತ್ಯವನ್ನು ಚಿಕ್ಕ ವಯಸ್ಸಿನಿಂದಲೇ ಮೈಗೂಡಿಸಿಕೊಂಡು ತಮ್ಮದೇ ಆದ ವೈಶಿಷ್ಟ್ಯತೆಯೊಂದಿಗೆ ಅನೇಕ ಕಲಾವಿದರನ್ನು ಸಮಾಜಕ್ಕೆ ಪರಿಚಯಿಸುತ್ತಿರುವ ಅವರ ಶ್ರಮ ಅಪಾರವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಹಾಸನ ಜಿಲ್ಲೆಯಲ್ಲಿಯೇ ಪ್ರಪ್ರಥಮವಾಗಿ 10 ವರ್ಷದ ಕುಮಾರಿ ಹಿತನ್ಯ ಅವರು ನಿರಂತರ 2 ಗಂಟೆ 30 ನಿಮಿಷಗಳ ಕಾಲ ಪಕ್ಕ ವಾದ್ಯದೊಂದಿಗೆ ಭರತನಾಟ್ಯ ಪ್ರದರ್ಶನ ನೀಡುತ್ತಿರುವುದು ವಿಶೇಷ ಸಾಧನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಭರತನಾಟ್ಯ ರಂಗಪ್ರವೇಶದ ಆಯೋಜಕರು ಹಾಗೂ ಗುರುಗಳಾದ ವಿದುಷಿ ಸ್ವಾತಿ ಪಿ. ಭಾರದ್ವಾಜ್, ಪತ್ರಕರ್ತರ ಸಂಘದ ಮಾಜಿ ಜಿಲ್ಲಾಧ್ಯಕ್ಷ ರವಿನಾಕಲಗೂಡು, ಪೂರ್ಣಚಂದ್ರ ಪಬ್ಲಿಕ್ ಶಾಲೆಯ ಕಾರ್ಯದರ್ಶಿ ಆಶಾ ವಿಜಯಕುಮಾರ್, ರಾಯರ ರಂಗಮಂದಿರದ ಮುಖ್ಯಸ್ಥೆ ಶ್ರೀಮತಿ ಅನಿತಾ ಪ್ರಕಾಶ್, ಎಂ.ಕೆ. ಪ್ರಕಾಶ್, ಕೆಪಿಟಿಸಿಎಲ್ ನೌಕರರ ಸಂಘದ ಪದಾಧಿಕಾರಿಗಳಾದ ಬಲರಾಮ್, ಶಿವರಾಂ, ವರದರಾಜು, ಯೋಗೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
– ಮಂಜುನಾಥ್ ಐ.ಕೆ
