ಚನ್ನರಾಯಪಟ್ಟಣ – ಹಿರಿಯೂರು ಸಮೀಪ ನಡೆದ ಭೀಕರ ಬಸ್ ಅಪಘಾತದಲ್ಲಿ ಸಾವನ್ನಪ್ಪಿದ್ದ ಹಾಸನ ಮೂಲದ ಇಬ್ಬರು ಯುವತಿಯರ ಮೃತದೇಹಗಳನ್ನು ಡಿಎನ್ಎ ಪರೀಕ್ಷೆಯ ನಂತರ ಇಂದು ಪೋಷಕರಿಗೆ ಹಸ್ತಾಂತರಿಸಲಾಗಿದೆ.
ಚನ್ನರಾಯಪಟ್ಟಣ ತಾಲ್ಲೂಕಿನ ನವ್ಯ ಮತ್ತು ಮಾನಸ ಅಪಘಾತದಲ್ಲಿ ಪ್ರಾಣ ಕಳೆದುಕೊಂಡ ಯುವತಿಯರು. ಅಪಘಾತದ ವೇಳೆ ಬಸ್ಗೆ ಬೆಂಕಿ ತಗುಲಿ ಇಬ್ಬರೂ ಯುವತಿಯರು ಸುಟ್ಟು ಕರಕಲಾಗಿದ್ದರಿಂದ ಗುರುತಿಸುವುದು ಅಸಾಧ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ವೈದ್ಯರು ಡಿಎನ್ಎ ಪರೀಕ್ಷೆ ನಡೆಸಿ ಮೃತದೇಹಗಳ ಗುರುತನ್ನು ದೃಢಪಡಿಸಿದ್ದರು.
ಮಾನಸ ಅವರ ಮನೆಯ ಮುಂದೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಮೃತದೇಹದ ಮುಂದೆ ಮಾನಸ ಅವರ ಫೋಟೋ ಇಟ್ಟು ಕುಟುಂಬಸ್ಥರು ಹಾಗೂ ಬಂಧುಗಳಿಗೆ ಅಂತಿಮ ನಮನ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಗುರುತೇ ಸಿಗದ ಸ್ಥಿತಿಯಲ್ಲಿದ್ದ ಕಾರಣ ವೈದ್ಯರು ಮೃತದೇಹಗಳನ್ನು ಬಿಳಿ ಬಟ್ಟೆಯಲ್ಲಿ ಸುತ್ತಿ ಸಂಪೂರ್ಣ ಮುಚ್ಚಿದ್ದರು.
ನವ್ಯ ಅವರ ಮೃತದೇಹವನ್ನು ಪೋಷಕರು ಪ್ರತ್ಯೇಕವಾಗಿ ಅಂತ್ಯಕ್ರಿಯೆ ನಡೆಸಲು ತೆಗೆದುಕೊಂಡು ಹೋಗಿದ್ದು, ಎ. ಅಂಕನಹಳ್ಳಿಯಲ್ಲಿ ನವ್ಯ ಅವರ ಅಂತ್ಯಕ್ರಿಯೆ ನಡೆಯಲಿದೆ. ಮಾನಸ ಅವರ ಅಂತ್ಯಕ್ರಿಯೆ ಕಾಳೇನಹಳ್ಳಿ ಸ್ಮಶಾನದಲ್ಲಿ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
ಮಗಳ ಮೃತದೇಹಗಳ ಮುಂದೆ ಪೋಷಕರ ಆಕ್ರಂದನ ಮುಗಿಲು ಮುಟ್ಟಿದ್ದು, ಈ ದುರ್ಘಟನೆ ಇಡೀ ಹಾಸನ ಜಿಲ್ಲೆಯಲ್ಲೇ ತೀವ್ರ ಶೋಕದ ವಾತಾವರಣ ನಿರ್ಮಿಸಿದೆ. ಸಾರ್ವಜನಿಕರು ಹಾಗೂ ವಿವಿಧ ಸಂಘಟನೆಗಳು ಮೃತರ ಕುಟುಂಬಗಳಿಗೆ ಸಾಂತ್ವನ ಸೂಚಿಸಿದ್ದು, ದುರಂತಕ್ಕೆ ಕಾರಣವಾದ ಅಂಶಗಳ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ.
