ಬೆಂಗಳೂರು, ಡಿ.29: ಹೊಸ ವರ್ಷದ ಸಂಭ್ರಮಾಚರಣೆಯ ಹಿನ್ನೆಲೆಯಲ್ಲಿ ಬೆಂಗಳೂರು ನಗರಾದ್ಯಂತ ಭದ್ರತೆ ಹೆಚ್ಚಿಸಲಾಗಿದ್ದು, ನಗರ ಪೊಲೀಸ್ ಇಲಾಖೆ ಹೈ ಅಲರ್ಟ್ ಘೋಷಿಸಿದೆ. ಡಿಸೆಂಬರ್ 31ರಂದು ರಾತ್ರಿ 10 ಗಂಟೆಯ ನಂತರ ನಗರದ ಪ್ರಮುಖ 50 ಫ್ಲೈಓವರ್ಗಳನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗುವುದು ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.
166 ಕಡೆ ಡ್ರಂಕ್ ಅಂಡ್ ಡ್ರೈವ್ ತಪಾಸಣೆ
ಹೊಸ ವರ್ಷದ ಆಚರಣೆಯ ವೇಳೆ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲು ನಗರದಲ್ಲಿ 166 ಸ್ಥಳಗಳಲ್ಲಿ ಡ್ರಂಕ್ ಅಂಡ್ ಡ್ರೈವ್ ತಪಾಸಣೆ ನಡೆಸಲಾಗುತ್ತದೆ. ವ್ಹೀಲಿಂಗ್ ಹಾಗೂ ಅಪಾಯಕಾರಿ ಸ್ಟಂಟ್ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದ್ದು, ಇಂತಹ ಕೃತ್ಯಗಳು ನಡೆಯುವ 92 ಸ್ಥಳಗಳನ್ನು ಗುರುತಿಸಿ ಅಲ್ಲಿ ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತದೆ ಎಂದು ಅವರು ಹೇಳಿದರು.
ಎಂಜಿ ರಸ್ತೆ ಮೆಟ್ರೋ ನಿಲ್ದಾಣ ಬಂದ್
ಡಿಸೆಂಬರ್ 31ರಂದು ರಾತ್ರಿ 10 ಗಂಟೆಯ ನಂತರ ಎಂಜಿ ರಸ್ತೆ ಮೆಟ್ರೋ ನಿಲ್ದಾಣವನ್ನು ಬಂದ್ ಮಾಡಲಾಗುವುದು. ನಿಗದಿತ ಸಮಯಕ್ಕೆ ಅನುಗುಣವಾಗಿ ಮೆಟ್ರೋ ಸೇವೆಗಳನ್ನು ನಿಯಂತ್ರಿಸುವಂತೆ ಸೂಚನೆ ನೀಡಲಾಗಿದೆ. ಮದ್ಯಪಾನ ಮಾಡಿ ಸಾರ್ವಜನಿಕವಾಗಿ ಗಲಾಟೆ, ಕಿರಿಕಿರಿ ಅಥವಾ ಅಶಾಂತಿ ಸೃಷ್ಟಿಸಿದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಆಯುಕ್ತರು ಎಚ್ಚರಿಕೆ ನೀಡಿದರು.
ಪಬ್, ಕ್ಲಬ್, ಡಿಜೆಗಳಿಗೆ ಸಮಯ ಮಿತಿ
ನಗರದ ಪಬ್, ರೆಸ್ಟೋರೆಂಟ್, ಕ್ಲಬ್ ಹಾಗೂ ರೆಸಾರ್ಟ್ಗಳಿಗೆ ಸಮಯ ಮಿತಿ ಕಡ್ಡಾಯಗೊಳಿಸಲಾಗಿದೆ. ಡಿಜೆ ಹಾಗೂ ಲೌಡ್ಸ್ಪೀಕರ್ ಬಳಕೆಗೆ ಅನುಮತಿ ಮತ್ತು ಸಮಯ ಮಿತಿಯನ್ನು ವಿಧಿಸಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಅಶ್ಲೀಲ ವರ್ತನೆ, ಶಬ್ದ ಮಾಲಿನ್ಯ, ಅಕ್ರಮ ಪಾರ್ಟಿಗಳು ಹಾಗೂ ಅಪಾಯಕಾರಿ ಚಟುವಟಿಕೆಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
20 ಸಾವಿರ ಪೊಲೀಸರ ನಿಯೋಜನೆ
ಹೊಸ ವರ್ಷಾಚರಣೆಯ ಭದ್ರತೆಗೆ ನಗರಾದ್ಯಂತ ಸುಮಾರು 20 ಸಾವಿರ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಸಿಸಿಟಿವಿ ಕ್ಯಾಮೆರಾ, ಡ್ರೋನ್ ಹಾಗೂ ಇತರೆ ತಾಂತ್ರಿಕ ಸಾಧನಗಳ ಮೂಲಕ ನಿರಂತರ ನಿಗಾವಹಿಸಲಾಗಿದೆ. ಯಾವುದೇ ಅಹಿತಕರ ಘಟನೆ ನಡೆದರೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡುವಂತೆ ಸಾರ್ವಜನಿಕರಿಗೆ ಆಯುಕ್ತರು ಮನವಿ ಮಾಡಿದ್ದಾರೆ.
ಹೆಚ್ಚುವರಿ ಭದ್ರತಾ ಕ್ರಮ
ನಗರದ ಹಲವೆಡೆ ವಾಚ್ ಟವರ್ಗಳ ನಿಯೋಜನೆ, ಸುರಕ್ಷಿತ ವಲಯಗಳ ಗುರುತಿಸುವಿಕೆ ಹಾಗೂ ಹೀಟ್ ಮ್ಯಾಪ್ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಮಹಿಳೆಯರ ಸುರಕ್ಷತೆಗಾಗಿ ಮಹಿಳಾ ಸಹಾಯ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ. ಜನಸಂದಣಿ ನಿಯಂತ್ರಣಕ್ಕಾಗಿ ಮೆಟ್ರೋ ರೈಲುಗಳ ಸಮಯಾವಧಿ ವಿಸ್ತರಣೆ, ಸಂಚಾರ ಸುಗಮಗೊಳಿಸಲು ಬಸ್ ಸೇವೆಗಳ ಸಮಯಾವಧಿ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಲಾಗಿದೆ.
ಹೋಟೆಲ್ಗಳು ಹಾಗೂ ಲಾಡ್ಜ್ಗಳಲ್ಲಿ ನಿಯಮ ಪಾಲನೆ ಕುರಿತು ಪರಿಶೀಲನೆ ನಡೆಸಲಾಗುತ್ತಿದ್ದು, ಸಮಾಜ ವಿರೋಧಿ ಅಂಶಗಳನ್ನು ತಡೆಗಟ್ಟಲು ಎಐ ಕ್ಯಾಮರಾಗಳ ಬಳಕೆ ಮಾಡಲಾಗುತ್ತದೆ. ಕ್ವಿಕ್ ರೆಸ್ಪಾನ್ಸ್ ಟೀಮ್ (QRT), ಚೆನ್ನಮ್ಮ ಪಡೆ ಸೇರಿದಂತೆ ವಿಶೇಷ ಪೊಲೀಸ್ ಪಡೆಯನ್ನೂ ನಿಯೋಜಿಸಲಾಗುತ್ತದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
