ಬೆಂಗಳೂರು: ರಾಜ್ಯದ ಗ್ರಾಮೀಣ ಭಾಗದ ಜನತೆಗೆ ರಾಜ್ಯ ಸರ್ಕಾರ ಮಹತ್ವದ ಗುಡ್ ನ್ಯೂಸ್ ನೀಡಿದೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 1,200 ಚದರ ಅಡಿ ವಿಸ್ತೀರ್ಣದವರೆಗಿನ ನಿವೇಶನಗಳಲ್ಲಿ ನಕ್ಷೆ ಮಂಜೂರಾತಿ ಪಡೆಯದೆ ನಿರ್ಮಿಸಲಾಗಿರುವ ನೆಲ +2 ಅಂತಸ್ತು ಅಥವಾ ಸ್ಟಿಲ್ಟ್ +3 ಅಂತಸ್ತಿನವರೆಗಿನ ವಸತಿ ಕಟ್ಟಡಗಳಿಗೆ ಸ್ವಾಧೀನಾನುಭವ / ಅಧಿಭೋಗ ಪ್ರಮಾಣ ಪತ್ರ (Occupancy Certificate – OC) ಪಡೆಯುವ ಅಗತ್ಯವಿಲ್ಲ ಎಂದು ಸರ್ಕಾರ ಆದೇಶ ಹೊರಡಿಸಿದೆ.
ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ಕಟ್ಟಡಗಳ ನಿರ್ಮಾಣದ ಮೇಲೆ ಜಿಲ್ಲಾ ಪಂಚಾಯತಿಗಳು, ತಾಲ್ಲೂಕು ಪಂಚಾಯತಿಗಳು ಮತ್ತು ಗ್ರಾಮ ಪಂಚಾಯತಿಗಳ ನಿಯಂತ್ರಣ) (ಎರಡನೇ ತಿದ್ದುಪಡಿ) ಮಾದರಿ ಉಪ ವಿಧಿಗಳು, 2025ರ ಉಪ ವಿಧಿ 13ರಡಿ ಸರ್ಕಾರಕ್ಕೆ ಪ್ರದತ್ತವಾಗಿರುವ ಅಧಿಕಾರವನ್ನು ಬಳಸಿಕೊಂಡು ಈ ಆದೇಶ ಹೊರಡಿಸಲಾಗಿದೆ.
ಏನಿದೆ ಸರ್ಕಾರದ ಆದೇಶದಲ್ಲಿ?
ಇದುವರೆಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಟ್ಟಡ ಕಾಮಗಾರಿ ಪೂರ್ಣಗೊಂಡ ನಂತರ, ವಾಸ್ತುಶಿಲ್ಪಿ ಅಥವಾ ಪಟ್ಟಿಯಲ್ಲಿನ ಇಂಜಿನಿಯರ್ ನೀಡುವ ಪೂರ್ಣತಾ ಪ್ರಮಾಣ ಪತ್ರದ ಆಧಾರದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಸ್ಥಳ ಪರಿಶೀಲನೆ, ಅನುಮೋದಿತ ನಕ್ಷೆಯೊಂದಿಗೆ ಹೋಲಿಕೆ, ಸಂಬಂಧಿಸಿದ ಪ್ರಾಧಿಕಾರಗಳ ತಾಂತ್ರಿಕ ಅಭಿಪ್ರಾಯ ಪಡೆದು OC ವಿತರಿಸಬೇಕಿತ್ತು.
ಈ ಪ್ರಕ್ರಿಯೆಯಿಂದ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳಿಗೆ ಹೆಚ್ಚುವರಿ ಕೆಲಸದ ಒತ್ತಡ ಉಂಟಾಗುತ್ತಿದ್ದು, ಸಾರ್ವಜನಿಕರಿಗೆ ಸೇವೆ ನೀಡುವಲ್ಲಿ ವಿಳಂಬವಾಗುತ್ತಿರುವುದನ್ನು ಸರ್ಕಾರ ಗಮನಿಸಿದೆ. ಈ ಹಿನ್ನೆಲೆ ಸಾರ್ವಜನಿಕ ಅನುಕೂಲವನ್ನು ದೃಷ್ಟಿಯಲ್ಲಿ ಇಟ್ಟುಕೊಂಡು OC ಪಡೆಯುವ ಪ್ರಕ್ರಿಯೆಯಿಂದ ವಿನಾಯಿತಿ ನೀಡಲು ನಿರ್ಧರಿಸಲಾಗಿದೆ.
ಯಾರಿಗೆ ಅನ್ವಯ?
- ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಸತಿ ಕಟ್ಟಡಗಳು
- 1,200 ಚದರ ಅಡಿ ವಿಸ್ತೀರ್ಣದವರೆಗಿನ ನಿವೇಶನ
- ನಕ್ಷೆ ಮಂಜೂರಾತಿ ಪಡೆಯದೆ ನಿರ್ಮಿಸಿದ
- ನೆಲ +2 ಅಂತಸ್ತು ಅಥವಾ ಸ್ಟಿಲ್ಟ್ +3 ಅಂತಸ್ತಿನವರೆಗಿನ ಮನೆಗಳು
ಈ ವರ್ಗದ ಕಟ್ಟಡಗಳಿಗೆ Occupancy Certificate ಪಡೆಯುವ ಅಗತ್ಯವಿಲ್ಲ.
ಸಾರ್ವಜನಿಕರಿಗೆ ಲಾಭ
- ಗ್ರಾಮೀಣ ಜನರಿಗೆ ಸಕಾಲದಲ್ಲಿ ಸೇವೆ
- ಪಂಚಾಯಿತಿಗಳ ಮೇಲಿನ ಆಡಳಿತಾತ್ಮಕ ಹೊರೆ ಕಡಿಮೆ
- ಅನಗತ್ಯ ವಿಳಂಬ ಹಾಗೂ ತೊಂದರೆ ನಿವಾರಣೆ
- ಸಣ್ಣ ಮನೆ ನಿರ್ಮಿಸಿಕೊಂಡವರ ಮೇಲೆ ಕಾನೂನು ಒತ್ತಡ ಕಡಿತ
ಆದೇಶದ ವಿವರ
- ಆದೇಶ ಸಂಖ್ಯೆ: RDPR 856 GPA 2025
- ದಿನಾಂಕ: 31-12-2025
- ಸಚಿವ ಸಂಪುಟ ಅನುಮೋದನೆ: ಪ್ರಕರಣ ಸಂಖ್ಯೆ ಸಿ.1047/2025, ದಿನಾಂಕ 11-12-2025
ಈ ಆದೇಶದಿಂದ ಗ್ರಾಮೀಣ ಭಾಗದ ಸಾವಿರಾರು ಮನೆ ಮಾಲೀಕರಿಗೆ ನೇರ ಲಾಭವಾಗಲಿದ್ದು, ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಸೇವಾ ಸರಳೀಕರಣಕ್ಕೆ ಹೊಸ ದಾರಿ ತೆರೆದಂತಾಗಿದೆ.



