ತುಮಕೂರು: ಕನ್ನಡ ಸಾಂಸ್ಥಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ಅಧ್ಯಕ್ಷ ಸ್ಥಾನವನ್ನು ಅಧಿಕಾರವಾಗಿ ಸ್ವೀಕರಿಸುವ ಅಧಿಕಾರಿ ಬೇಡ, ಸೇವೆಯಾಗಿ ಸ್ವೀಕರಿಸುವ ಲೇಖಕ, ಕನ್ನಡಪರ ಹೋರಾಟಗಾರ, ಪ್ರಮಾಣಿಕ ವ್ಯಕ್ತಿ ಬೇಕು.ಅಧ್ಯಕ್ಷ ಸ್ಥಾನಕ್ಕೆ ಸಾಹಿತಿ, ಪತ್ರಕರ್ತ, ಹೋರಾಟಗಾರ, ನೈತಿಕ ಶುದ್ಧತೆ, ಪಾರದರ್ಶಕ ನಡೆಯ ಜಾಣಗೆರೆ ವೆಂಕಟರಾಮಯ್ಯನವರು ಸೂಕ್ತವಾದ ವ್ಯಕ್ತಿ. ಕನ್ನಡಿಗ ಇವರನ್ನು ಬೆಂಬಲಿಸಬೇಕು ಎಂದು ಹಿರಿಯ ಸಾಹಿತಿ ಪ್ರೊ.ಎಸ್.ಜಿ.ಸಿದ್ಧರಾಮಯ್ಯ ಮನವಿ ಮಾಡಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನದ ಚುನಾವಣೆ ಆಕಾಂಕ್ಷಿಯಾಗಿರುವ ಜಾಣಗೆರೆ ವೆಂಕಟರಾಮಯ್ಯ ಅವರನ್ನು ಬೆಂಬಲಿಸಿ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,ಕನ್ನಡ, ಕನ್ನಡಿಗರು, ಕರ್ನಾಟಕದ ಸಾಕ್ಷಿಪ್ರಜ್ಞೆಯಂತಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಚರಿತ್ರೆಯ ಅವಲೋಕನ ಮಾಡಿದಾಗ ಕಳೆದ ಹತ್ತು ವರ್ಷಗಳಿಂದ ಪರಿಷತ್ತಿನ ಮೂಲ ಉದ್ದೇಶ ವಿಫಲವಾಗಿದೆ. ಅದರ ಪುನರ್ ಸ್ಥಾಪನೆ ಆಗಬೇಕಾಗಿದೆ ಎಂದರು.
ಪರಿಷತ್ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಜಾಣಗೆರೆ ವೆಂಕಟರಾಮಯ್ಯ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ನ ಶುದ್ಧೀಕರಣ ಆಗಬೇಕಾಗಿದೆ.ಪರಿಷತ್ ಘನತೆ ಕಾಪಾಡುವ ಆಶಯದ ಸಮಾನ ಮನಸ್ಕರು ತಮ್ಮನ್ನು ಆಯ್ಕೆ ಮಾಡಿದ್ದಾರೆ.ಇದೇ ಸಂಕಲ್ಪದಲ್ಲಿ ಪ್ರಣಾಳಿಕೆ ಸಿದ್ಧಪಡಿಸಿ ಎಲ್ಲಾ ಜಿಲ್ಲೆಗಳ ಪ್ರವಾಸ ಮಾಡಿ, ಸಭೆ ನಡೆಸಿ ಪ್ರಚಾರ ಮಾಡುತ್ತಿರುವುದಾಗಿ ಹೇಳಿದರು.
ತಾವುಅಧ್ಯಕ್ಷರಾಗಿಆಯ್ಕೆಯಾದರೆ ಸ್ಥಗಿತಗೊಂಡಿರುವ ಕನ್ನಡ-ಕನ್ನಡ ನಿಘಂಟು ಯೋಜನೆಗೆ ಮರುಚಾಲನೆ ನೀಡಲಾಗುವುದು.ನಿಂತುಹೋಗಿರುವ ಪರಿಷತ್ ಮುಖವಾಣಿ ‘ಕನ್ನಡನುಡಿ’ ಪತ್ರಿಕೆಯ ಪ್ರಕಟಣೆ ಆರಂಭಿಸುವುದು.ಯುವ ಸಮೂಹಕ್ಕೆ ವಿಶಿಷ್ಟ ಸಾಹಿತ್ಯ ಶಿಬಿರ, ಕಮ್ಮಟ, ವಿಚಾರ ಸಂಕಿರಣ ಏರ್ಪಡಿಸಲಾಗುವುದು.ಸಾಹಿತ್ಯ ಸಮ್ಮೇಳನಾಧ್ಯಕ್ಷರನ್ನು ಉತ್ಸವಮೂರ್ತಿಯಾಗಿಸದೆ ವರ್ಷವಿಡೀ ಅವರ ಕ್ರಿಯಾಶೀಲತೆಯನ್ನು ಬಳಸಿಕೊಳ್ಳುವುದು.ಗ್ರಾಮೀಣ ಹಾಗೂ ನಗರ ಪ್ರದೇಶದ ಕನ್ನಡ ಶಾಲೆಗಳನ್ನು ಉಳಿಸಿ, ಅಭಿವೃದ್ಧಿಪಡಿಸಲು ಸರ್ಕಾರಕ್ಕೆಒತ್ತಡತರುವಕಾರ್ಯ ಮಾಡಲಾಗುವುದು, ಮುಂತಾದ ನಾಡುನುಡಿ ಉಳಿಸಿ ಬೆಳೆಸುವ ಕಾರ್ಯಕ್ರಮಗಳನ್ನು ರೂಪಿಸಲಾಗಿದೆಎಂದುಜಾಣಗೆರೆ ವೆಂಕಟರಾಮಯ್ಯ ಹೇಳಿದರು.
ಹಿರಿಯ ಸಾಹಿತಿಗಳಾದ ಪ್ರೊ.ಜಯಪ್ರಕಾಶಗೌಡ, ಡಾ.ಬಂಜಗೆರೆಜಯಪ್ರಕಾಶ್, ಬಾ.ಹ. ರಮಾಕುಮಾರಿ, ಎಂ.ಹೆಚ್.ನಾಗರಾಜು, ಹೋರಾಟಗಾರ ವೈ.ಕೆ.ಬಾಲಕೃಷ್ಣ ಮೊದಲಾದವರು ಜಾಣಗೆರೆ ವೆಂಕಟರಾಮಯ್ಯಅವರನ್ನು ಬೆಂಬಲಿಸಿ ಮಾತನಾಡಿದರು.
– ಚಂದ್ರಚೂಡ ಕೆ.ಬಿ.
