ಛತ್ತೀಸ್ಗಢ : ರಾಜ್ಯದ ಬಲೋದ್ (Balod) ಜಿಲ್ಲೆ 2025ರಲ್ಲಿ ಅಧಿಕೃತವಾಗಿ ಭಾರತದ ಮೊದಲ ಬಾಲ್ಯವಿವಾಹ ಮುಕ್ತ ಜಿಲ್ಲೆ ಎಂಬ ಗೌರವವನ್ನು ಪಡೆದಿದೆ. ಇದು ಮಕ್ಕಳ ಹಕ್ಕುಗಳ ರಕ್ಷಣೆಯ ದಿಕ್ಕಿನಲ್ಲಿ ಸಾಧಿಸಿದ ಐತಿಹಾಸಿಕ ಮೈಲುಗಲ್ಲಾಗಿದೆ.
ಈ ಸಾಧನೆ ಕೇಂದ್ರ ಸರ್ಕಾರದ ‘ಬಾಲ್ ವಿವಾಹ ಮುಕ್ತ ಭಾರತ’ (Bal Vivah Mukt Bharat) ಅಭಿಯಾನದಡಿ ಸಾಧ್ಯವಾಗಿದ್ದು, ಸಮಾಜದ ಎಲ್ಲ ವರ್ಗಗಳ ಸಕ್ರಿಯ ಸಹಭಾಗಿತ್ವದ ಫಲವಾಗಿದೆ.
ಪ್ರಮುಖ ಅಂಶಗಳು:
ಕಳೆದ ಎರಡು ವರ್ಷಗಳಿಂದ ಸತತವಾಗಿ, ಜಿಲ್ಲೆಯ 436 ಗ್ರಾಮ ಪಂಚಾಯಿತಿಗಳು ಮತ್ತು 9 ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಒಂದೂ ಬಾಲ್ಯವಿವಾಹ ಪ್ರಕರಣ ವರದಿಯಾಗಿಲ್ಲ.
ಈ ಹಿನ್ನೆಲೆಯಲ್ಲಿ 2025ರ ಸೆಪ್ಟೆಂಬರ್ ಅಂತ್ಯದಲ್ಲಿ ಬಲೋದ್ ಜಿಲ್ಲೆಗೆ ಅಧಿಕೃತ ಪ್ರಮಾಣಪತ್ರ ನೀಡಿ ಬಾಲ್ಯವಿವಾಹ ಮುಕ್ತ ಜಿಲ್ಲೆಯಾಗಿ ಘೋಷಿಸಲಾಯಿತು.
ಈ ಅಭಿಯಾನವು ಪ್ರಧಾನಿ ನರೇಂದ್ರ ಮೋದಿ ಅವರು 2024ರಲ್ಲಿ ಆರಂಭಿಸಿದ ಮಹತ್ವಾಕಾಂಕ್ಷಿ ಯೋಜನೆಯ ಭಾಗವಾಗಿದ್ದು, 2030ರೊಳಗೆ ಇಡೀ ಭಾರತವನ್ನು ಬಾಲ್ಯವಿವಾಹ ಮುಕ್ತಗೊಳಿಸುವ ಗುರಿಯನ್ನು ಹೊಂದಿದೆ.
ಬಲೋದ್ ಜಿಲ್ಲೆಯ ಸಾಧನೆ ಇಡೀ ದೇಶಕ್ಕೆ ಮಾದರಿಯಾಗಿದ್ದು, ಬಾಲ್ಯವಿವಾಹದಂತಹ ಸಾಮಾಜಿಕ ಅನಿಷ್ಟಗಳನ್ನು ನಿರ್ಮೂಲನೆ ಮಾಡುವಲ್ಲಿ ಸಮುದಾಯದ ಜಾಗೃತಿ ಮತ್ತು ಆಡಳಿತಾತ್ಮಕ ಬದ್ಧತೆಯ ಮಹತ್ವವನ್ನು ಪ್ರತಿಪಾದಿಸುತ್ತದೆ.
