Bhagavad Gita
ಶ್ಲೋಕ – 25
ಧೂಮೋ ರಾತ್ರಿಸ್ತಥಾ ಕೃಷ್ಣಃ ಷಣ್ಮಾಸಾ ದಕ್ಷಿಣಾಯನಮ್ ।
ತತ್ರ ಚಾಂದ್ರಮಸಂ ಜ್ಯೋತಿರ್ಯೋಗೀ ಪ್ರಾಪ್ಯ ನಿವರ್ತತೇ ॥೨೫॥
ಧೂಮಃ ರಾತ್ರಿಃ ತದಾ ಕೃಷ್ಣಃ ಷಟ್ ಮಾಸಾ ದಕ್ಷಿಣಾಯನಮ್ ।
ತತ್ರ ಚಾಂದ್ರಮಸಮ್ ಜ್ಯೋತಿಃ ಯೋಗೀ ಪ್ರಾಪ್ಯ ನಿವರ್ತತೇ –
ಹೊಗೆಯ ದೇವತೆ, ಇರುಳ ದೇವತೆ, ಕೃಷ್ಣಪಕ್ಷದ ದೇವತೆ, ದಕ್ಷಿಣಾಯನದ ಆರು ತಿಂಗಳ ದೇವತೆಗಳು,
ಮತ್ತು ದಕ್ಷಿಣಾಯನದ ದೇವತೆ-ಈ ದಾರಿಯಲ್ಲಿ ಸಾಗಿದ ಸಾಧಕ ಚಂದ್ರನ ಬೆಳಕಿನ ಲೋಕವನ್ನು ಸೇರಿ ಮರಳಿ ಬರುತ್ತಾನೆ.
ಮೋಕ್ಷ ಯೋಗ್ಯವಲ್ಲದ ಜೀವ ದೇಹದಿಂದ ಹೊರ ಬಂದಾಗ ಆತನನ್ನು ಸ್ವಾಗತಿಸುವ ದೇವತೆ ಹೊಗೆಯ ಮತ್ತು ಕತ್ತಲಿನ ದೇವತೆ.
ಆ ನಂತರ ಕೃಷ್ಣಪಕ್ಷದ ದೇವತೆ; ನಂತರ ದಕ್ಷಿಣಾಯನದ ಮತ್ತು ‘ದಕ್ಷಿಣಾಯನದ ಆರು ತಿಂಗಳ’ ದೇವತೆಗಳು ಜೀವನನ್ನು ಸೋಮಲೋಕಕ್ಕೆ ತಲುಪಿಸುತ್ತಾರೆ.
ಜೀವ ಇಲ್ಲಿ ತನ್ನ ಪುಣ್ಯ ಕ್ಷಯವಾಗುವ ತನಕ ಸುಖವನ್ನು ಅನುಭವಿಸಿ, ಮರಳಿ ಮೋಡದಲ್ಲಿ ಸೇರಿ,
ಮಳೆಯ ಮೂಲಕ ಭೂಮಿಯನ್ನು ತಲುಪಿ, ಒಂದು ಗಂಡಿನ ದೇಹದ ಮೂಲಕ ಹೆಣ್ಣಿನ ಗರ್ಭವನ್ನು ಪ್ರವೇಶಿಸಿ, ಮರಳಿ ಭೂಮಿಯಲ್ಲಿ ಹುಟ್ಟುತ್ತದೆ.
