ಕಣ್ಣೂರು/ಕೇರಳ: ಕೇರಳ ಸರ್ಕಾರವು ಅರಳಂ ವನ್ಯಜೀವಿ ಅಭಯಾರಣ್ಯವನ್ನು ಅಧಿಕೃತವಾಗಿ ‘ಅರಳಂ ಚಿಟ್ಟೆ ಅಭಯಾರಣ್ಯ’ (Aralam Butterfly Sanctuary) ಎಂದು ಮರುನಾಮಕರಣ ಮಾಡಿದೆ. ಈ ಮೂಲಕ ಇದು ಕೇರಳದ ಮೊದಲ ಚಿಟ್ಟೆ ಅಭಯಾರಣ್ಯವಾಗಿದ್ದು, ದೇಶದಲ್ಲಿಯೇ ಮೊದಲ ಚಿಟ್ಟೆ-ಕೇಂದ್ರಿತ ಸಂರಕ್ಷಿತ ಪ್ರದೇಶ ಎಂಬ ವಿಶೇಷ ಹೆಗ್ಗಳಿಕೆಗೆ ಪಾತ್ರವಾಗಿದೆ.
ಈ ಕುರಿತು ಡಿಸೆಂಬರ್ 2025ರಲ್ಲಿ ಅಧಿಸೂಚನೆ ಹೊರಡಿಸಲಾಗಿದ್ದು, ವನ್ಯಜೀವಿ ರಕ್ಷಣಾ ಕಾಯ್ದೆ–1972ರ ಸೆಕ್ಷನ್ 18(1) ಅಡಿಯಲ್ಲಿ SRO No. 1407/2025 ಮೂಲಕ ಹೆಸರು ಬದಲಾವಣೆಗೆ ಅಧಿಕೃತ ಅನುಮೋದನೆ ನೀಡಲಾಗಿದೆ. 1984ರಲ್ಲಿ ಸ್ಥಾಪಿತವಾಗಿದ್ದ ಅರಳಂ ವನ್ಯಜೀವಿ ಅಭಯಾರಣ್ಯ ಇದೀಗ ಚಿಟ್ಟೆ ಸಂರಕ್ಷಣೆಗೆ ಮೀಸಲಾದ ಅಭಯಾರಣ್ಯವಾಗಿ ಹೊಸ ಗುರುತನ್ನು ಪಡೆದುಕೊಂಡಿದೆ.
ಪಶ್ಚಿಮಘಟ್ಟ ಪ್ರದೇಶದಲ್ಲಿರುವ ಅರಳಂ ಅಭಯಾರಣ್ಯವು ಚಿಟ್ಟೆಗಳ ಅಪಾರ ವೈವಿಧ್ಯತೆಗೆ ಹೆಸರುವಾಸಿಯಾಗಿದೆ. ಇಲ್ಲಿ 250ಕ್ಕೂ ಹೆಚ್ಚು ಚಿಟ್ಟೆ ಪ್ರಜಾತಿಗಳು ಕಂಡುಬರುತ್ತಿದ್ದು, ಪ್ರತಿವರ್ಷ ದೊಡ್ಡ ಪ್ರಮಾಣದಲ್ಲಿ ಚಿಟ್ಟೆಗಳ ಸ್ಥಳಾಂತರ (Butterfly Migration) ನಡೆಯುತ್ತದೆ. ಈ ಸ್ಥಳಾಂತರವು ಪರಾಗಸ್ಪರ್ಶ, ಜೀವವೈವಿಧ್ಯ ಸಂರಕ್ಷಣೆ ಹಾಗೂ ಪರಿಸರ ಸಮತೋಲನಕ್ಕೆ ಅತ್ಯಂತ ಮಹತ್ವದ್ದಾಗಿದೆ ಎಂದು ತಜ್ಞರು ತಿಳಿಸಿದ್ದಾರೆ.
ಚಿಟ್ಟೆಗಳ ಸಂರಕ್ಷಣೆ, ಸಂಶೋಧನೆ ಹಾಗೂ ಪರಿಸರ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ಈ ಮರುನಾಮಕರಣ ಮಾಡಲಾಗಿದೆ. ಇದರಿಂದ ಪರಿಸರ ಜಾಗೃತಿ ಹೆಚ್ಚುವುದರ ಜೊತೆಗೆ ಪಶ್ಚಿಮಘಟ್ಟಗಳ ಜೀವವೈವಿಧ್ಯ ಸಂರಕ್ಷಣೆಗೆ ಹೊಸ ದಿಕ್ಕು ಸಿಗಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.
