ತುಮಕೂರು: ತುಮಕೂರು ಜಿಲ್ಲೆಯ ತುಮಕೂರು ನಗರದಲ್ಲಿ ನಾಗರೀಕರ ಹಿತಸಂರಕ್ಷಣಾ ಸಮಿತಿಯ ರಾಜ್ಯ ಘಟಕದ ಶಾಖೆಯನ್ನು ಉದ್ಘಾಟಿಸಲಾಯಿತು.
ಕಾರ್ಯಕ್ರಮದಲ್ಲಿ ರಾಜ್ಯಾಧ್ಯಕ್ಷರಾದ ಸೋಮಶೇಖರ್ , ಪ್ರಧಾನ ಕಾರ್ಯದರ್ಶಿಗಳಾದ ಚೇತನ್, ಉಪಕಾರ್ಯದರ್ಶಿಯಾದ ನವಾಜ್, ನಿರ್ದೇಶಕರಾದ ರಂಗಯ್ಯ ರವರುಗಳು ಉಪಸ್ಥಿತರಿದ್ದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ರಾಜ್ಯಾಧ್ಯಕ್ಷರಾದ ಸೋಮಶೇಖರ ರವರು ಪ್ರತಿ ಜಿಲ್ಲೆಯಲ್ಲಿ ಘಟಕ ಸ್ಥಾಪನೆ ಮಾಡಲು ಉದ್ದೇಶಿಸಲಾಗಿದ್ದು, ಅರ್ಹ ವ್ಯಕ್ತಿಗಳು ನಾಗರೀಕ ಸೇವೆ ಮಾಡಲು ಇಚ್ಚಿಸಿದವರು ಮುಂದೆ ಬಂದು ಸಕ್ರಿಯ ಸದಸ್ಯರಾಗಿ ಸಂಘದ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಸಾರ್ವಜನಿಕರಿಗೆ ಕರೆ ನೀಡಿದರು.
ರಾಜ್ಯವ್ಯಾಪಿ ಸಂಘಟನೆ ಮಾಡಿ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿ,ಪರಿಹಾರ ಕಂಡುಕೊಳ್ಳುವ ದೃಷ್ಟಿಯಲ್ಲಿ ಕಾರ್ಯಪ್ರವೃತ್ತರಾಗಲು, ನಾಗರೀಕರ ಜೀವನಶೈಲಿ ವೃದ್ಧಿ ಮಾಡಿ ಸಮಾಜದಲ್ಲಿ ಸ್ವಾಸ್ಥ್ಯ ಕಾಪಾಡುವ ಉದ್ದೇಶ ನಮ್ಮ ಸಂಘದ್ದಾಗಿದೆ ಎಂದು ತಿಳಿಸಿದರು.
ಪ್ರಧಾನ ಕಾರ್ಯದರ್ಶಿಗಳಾದ ಚೇತನ್ ರವರು ಮಾತನಾಡಿ ಸಮಾಜದಲ್ಲಿ ಹೆಚ್ಚಾಗುತ್ತಿರುವ ಭ್ರಷ್ಟಾಚಾರ, ಅಕ್ರಮ ಚಟುವಟಿಕೆಗಳು, ಏಕ ಪಕ್ಷೀಯ ಅಭಿವೃದ್ಧಿ, ರಾಜಕೀಯ ಅಸ್ಥಿರತೆ, ಜನರ ಸಮಸ್ಯೆಗಳ ಬಗೆಗಿನ ನಿರ್ಲಕ್ಷ್ಯ ಧೋರಣೆ ಎಲ್ಲವನ್ನೂ ಮನಗಂಡು ಪ್ರಸ್ತುತ ಸಮಯದಲ್ಲಿ ಸಮುದಾಯಗಳನ್ನು ಒಗ್ಗೂಡಿಸಿ, ನಾಗರೀಕರ ಸಬಲೀಕರಣ ಮಾಡಲು ನಾಗರೀಕರ ಧ್ವನಿಯಾಗಿ ಕೆಲಸ ಮಾಡುವ ಉದ್ದೇಶದಿಂದ ನಮ್ಮ ಸಂಘವನ್ನು ಸ್ಥಾಪಿಸಲಾಗಿದೆ.ನಮ್ಮ ಹೋರಾಟದ ರೂಪುರೇಷೆಗಳೆಲ್ಲವೂ ಸ್ಪಷ್ಟವಾಗಿದ್ದು, ಮುಂದಿನ ದಿನಗಳಲ್ಲಿ ಸಮಾಜದಲ್ಲಿ ಕ್ರಾಂತಿಕಾರಿ ಬದಲಾವಣೆ ತರಲು ಶ್ರಮಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ವಿಶೇಷ ಅತಿಥಿಗಳಾಗಿ ಡಾ||ರಕ್ಷಿತ್.ಎನ್.ಪಿ., ಉಚ್ಛ ನ್ಯಾಯಾಲಯದ ವಕೀಲರಾದ ಲತಾ, ಖ್ಯಾತ ಕೈಗಾರಿಕೋದ್ಯಮಿಗಳಾದ ಕಿರಣ್ ಹಾಗೂ ಇತರರು ಭಾಗವಹಿಸಿದ್ದರು.
ವರದಿ : ಕೆ ಬಿ ಚಂದ್ರಚೂಡ್
