ಶ್ಲೋಕ – 28
ವೇದೇಷು ಯಜ್ಞೇಷು ತಪಸ್ಸು ಚೈವ ದಾನೇಷು ಯತ್ ಪುಣ್ಯಫಲಂ ಪ್ರದಿಷ್ಟಮ್ ।
ಅತ್ಯೇತಿ ತತ್ ಸರ್ವಮಿದಂ ವಿದಿತ್ವಾಯೋಗೀ ಪರಂ ಸ್ಥಾನಮುಪೈತಿ ಚಾSದ್ಯಮ್ ॥೨೮॥
ವೇದೇಷು ಯಜ್ಞೇಷು ತಪಸ್ಸು ಚ ಏವ ದಾನೇಷು ಯತ್ ಪುಣ್ಯಫಲಮ್ ಪ್ರದಿಷ್ಟಮ್ ।
ಅತ್ಯೇತಿ ತತ್ ಸರ್ವಮ್ ಇದಮ್ ವಿದಿತ್ವಾ ಯೋಗೀ ಪರಮ್ ಸ್ಥಾನಮ್ ಉಪೈತಿ ಚ ಆದ್ಯಮ್ –ವೇದವನ್ನು ಓದಿದರೆ, ಯಜ್ಞಗಳನ್ನು ಮಾಡಿದರೆ, ತಪಗಳನ್ನು ಆಚರಿಸಿದರೆ, ದಾನಗಳನ್ನು ನೀಡಿದರೆ ಏನು ಪುಣ್ಯಫಲ ಹೇಳಲಾಗಿದೆ ಅದನ್ನೆಲ್ಲ ಮೀರಿ ನಿಲ್ಲುತ್ತಾನೆ ಇದನ್ನು ಬಲ್ಲ ಸಾಧಕ; ಎಲ್ಲಕ್ಕೂ ಮೊದಲ ಹಿರಿಯ ತಾಣವನ್ನು ಸೇರುತ್ತಾನೆ.
ಉಪಸಂಹಾರ ಮಾಡುತ್ತಾ ಕೃಷ್ಣ ಹೇಳುತ್ತಾನೆ-ಎಲ್ಲಕ್ಕಿಂತ ಮಿಗಿಲಾದ ತಿಳಿವು ಅಂದರೆ ಈ ಅಂತ್ಯ ಕಾಲದ ಅರಿವು ಎಂದು . ಸಮಸ್ತ ಶಾಸ್ತ್ರದಲ್ಲಿ ಯಜ್ಞ-ದಾನ-ತಪಸ್ಸುಗಳ ಮೂಲಕ ಏನು ಪುಣ್ಯ ಹೇಳಿದ್ದಾರೆ, ಈ ಅಂತ್ಯ ಕಾಲದ ಸಾವಿನ ರಹಸ್ಯದ ಅರಿವು ಈ ಎಲ್ಲಾ ಪುಣ್ಯ ಫಲವನ್ನು ಮೀರಿ ನಿಲ್ಲುತ್ತದೆ. ಆದ್ದರಿಂದ ಎಲ್ಲಕ್ಕಿಂತ ದೊಡ್ಡ ಸಾಧನೆ ಅಂತ್ಯ ಕಾಲದ ಚಿಂತನೆ. ಈ ಕಾರಣದಿಂದ ಬದುಕಿಗಿಂತ ಸಾವಿನ ಬಗ್ಗೆ ಹೆಚ್ಚು ಚಿಂತನೆಯ ಅಗತ್ಯವಿದೆ.
ಸಾವು ಅಮಂಗಳವಲ್ಲ. ಸಾವು ದುಃಖದ ಅನುಭವ ಎನ್ನುವುದು ನಮ್ಮ ಭ್ರಮೆ. ದೇಹದ ಒಳಗಿರುವಾಗ ಬೌತಿಕ ಶರೀರದ ಎಲ್ಲಾ ಯಾತನೆ ಜೀವಕ್ಕೆ ಅಂಟಿಕೊಂಡಿರುತ್ತದೆ. ಸಾವು ಎಂದರೆ ಈ ಸ್ಥೂಲ ಶರೀರದಿಂದ ಬಿಡುಗಡೆ. ಆದ್ದರಿಂದ ಸೂಕ್ಷ್ಮ ಶರೀರದಲ್ಲಿರುವ ಜೀವ ಪಂಜರದಿಂದ ಹೊರ ಬಂದು ಮುಕ್ತವಾಗಿ ಆಕಾಶದಲ್ಲಿ ಹಾರಾಡುವ ಪಕ್ಷಿಯಂತೆ. ಈ ಕಾರಣದಿಂದ ಸಾವಿನ ಭಯ ಬಿಟ್ಟು ಕೊನೇ ಕ್ಷಣದಲ್ಲಿ ಮಾಂಗಲಿಕವಾಗಿ ಎತ್ತರಕ್ಕೇರುವ ದೇವತಾ ಅನುಸಂಧಾನ ನಿರಂತರವಾಗಿ ನಮ್ಮ ಬದುಕಿನಲ್ಲಿರಬೇಕು.
ಇತಿ ಅಷ್ಟಮೋಧ್ಯಾಯಃ
ಎಂಟನೆಯ ಅಧ್ಯಾಯ ಮುಗಿಯಿತು
