ತುಮಕೂರು: ದತ್ತಾಂಶ ವಿಶ್ಲೇಷಣೆಯು ಇಂದಿನ ಜಾಗತಿಕ ಮಾರುಕಟ್ಟೆಯ ಚಾಲನಾ ಶಕ್ತಿಯಾಗಿದೆ. ವಿದ್ಯಾರ್ಥಿಗಳು ಇಂತಹ ಕಾರ್ಯಾಗಾರಗಳ ಮೂಲಕ ಸಿಗುವ ತಾಂತ್ರಿಕ ಪರಿಣತಿಯನ್ನು ಬಳಸಿಕೊಂಡು ಉದ್ಯಮದ ಸವಾಲುಗಳನ್ನು ಎದುರಿಸಬೇಕು. ನೈಜ ಜಗತ್ತಿನ ಸಮಸ್ಯೆಗಳಿಗೆ ದತ್ತಾಂಶಗಳ ಮೂಲಕ ಪರಿಹಾರ ಕಂಡುಕೊಳ್ಳುವ ಸಾಮರ್ಥ್ಯ ಬೆಳೆಸಿಕೊಳ್ಳಿ ಎಂದು ವಿ-ಟೆಕ್ ಸೊಲ್ಯುಷನ್ಸ್ನ ವ್ಯವಸ್ಥಾಪಕ ನಿರ್ದೇಶಕಿ ನಾಗಪ್ರಿಯಾ ಕೆ.ಜೆ. ಹೇಳಿದರು.
ನಗರದ ವೈಸಿರಿ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಅಂಡ್ ಟೆಕ್ನಾಲಜಿಯ ಎಂಬಿಎ ವಿಭಾಗವು ಭಾರತೀಯ ರಿಸರ್ವ್ ಬ್ಯಾಂಕ್ ಬೆಂಬಲದೊಂದಿಗೆ ಆಯೋಜಿಸಿದ್ದ ‘ಹಣಕಾಸು ದತ್ತಾಂಶ ವಿಶ್ಲೇಷಣೆಯ ಅಡಿಪಾಯ’ ಕುರಿತ ಐದು ದಿನಗಳ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಶನಿವಾರ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಿ ಮಾತನಾಡಿದರು.
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕೇವಲ ಶೈಕ್ಷಣಿಕ ಪದವಿಗಳು ಸಾಲದು, ಉದ್ಯಮದ ಬೇಡಿಕೆಗೆ ತಕ್ಕಂತೆ ಪ್ರಾಯೋಗಿಕ ಕೌಶಲ್ಯಗಳನ್ನು ಬೆಳೆಸಿಕೊಳ್ಳುವುದು ಅನಿವಾರ್ಯ. ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಸಿಕೊಂಡಾಗ ಮಾತ್ರ ನೀವು ಜಾಗತಿಕ ಮಟ್ಟದ ಸವಾಲುಗಳನ್ನು ಎದುರಿಸಲು ಸಾಧ್ಯ ಎಂದ ಅವರು, ವಿದ್ಯಾರ್ಥಿಗಳು ನಿರಂತರವಾಗಿ ಕೌಶಲ್ಯಗಳನ್ನು ನವೀಕರಿಸಿಕೊಳ್ಳುವ ಮೂಲಕ ಉದ್ಯಮಕ್ಕೆ ಸಿದ್ಧರಾಗಬೇಕು ಎಂದು ಕರೆ ನೀಡಿದರು.
ಅಹಮದಾಬಾದ್ ಐಐಎಂನ ಬ್ಯಾಂಕಿಂಗ್ ಮತ್ತು ಹಣಕಾಸು ಸೇವೆಗಳ ತಜ್ಞರಾದ ಶ್ರೀಧರ್ ಕುಬಸದ ಅವರು ಮಾತನಾಡಿ, ಇಂದು ಬ್ಯಾಂಕಿಂಗ್ ಕ್ಷೇತ್ರವು ಕೇವಲ ಹಣಕಾಸಿನ ವಹಿವಾಟಿಗೆ ಸೀಮಿತವಾಗಿಲ್ಲ; ಅದು ಸಂಪೂರ್ಣವಾಗಿ ಡಿಜಿಟಲ್ ರೂಪಾಂತರಕ್ಕೆ ಒಳಗಾಗಿದೆ. ಸಾಂಪ್ರದಾಯಿಕ ಬ್ಯಾಂಕಿಂಗ್ ವ್ಯವಸ್ಥೆಯು ಕಣ್ಮರೆಯಾಗಿ, ದತ್ತಾಂಶ ಆಧಾರಿತ ನಿರ್ವಹಣೆಯು ಮುನ್ನೆಲೆಗೆ ಬಂದಿದೆ ಎಂದರು.
ಎಂಬಿಎ ವಿದ್ಯಾರ್ಥಿಯಾಗಿ ನೀವು ಮಾರುಕಟ್ಟೆಗೆ ಸಿದ್ಧರಾಗಬೇಕಾದರೆ, ಕೇವಲ ಸೈದ್ಧಾಂತಿಕ ಜ್ಞಾನ ಸಾಲದು. ಬದಲಿಗೆ, ಹಣಕಾಸಿನ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಡಿಜಿಟಲ್ ಪರಿಕರಗಳು ಮತ್ತು ದತ್ತಾಂಶ ವಿಶ್ಲೇಷಣೆಯನ್ನು ಹೇಗೆ ಅನ್ವಯಿಸಬೇಕು ಎಂಬ ಪ್ರಾಯೋಗಿಕ ಜ್ಞಾನವಿರಬೇಕು. ಫಿನ್ಟೆಕ್ ಕ್ಷೇತ್ರದಲ್ಲಿ ಮೂಡಿಬರುತ್ತಿರುವ ಹೊಸ ಟ್ರೆಂಡ್ಗಳು ಉದ್ಯೋಗ ಮಾರುಕಟ್ಟೆಯನ್ನು ಬದಲಿಸುತ್ತಿವೆ. ಯಾರು ಡಿಜಿಟಲ್ ಕೌಶಲ್ಯಗಳನ್ನು ಮೈಗೂಡಿಸಿಕೊಳ್ಳುತ್ತಾರೋ ಅವರಿಗೆ ಮಾತ್ರ ಈ ವಲಯದಲ್ಲಿ ಉಜ್ವಲ ಭವಿಷ್ಯವಿದೆ ಎಂದು ಅವರು ವಿವರಿಸಿದರು.
ಎಂ.ಬಿ.ಎ ವಿಭಾಗದ ನಿರ್ದೇಶಕ ಡಾ.ಪ್ರಸನ್ನಕುಮಾರ್ ಟಿ.ಎಂ. ಬೋಧಕ-ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
– ಕೆ.ಬಿ.ಚಂದ್ರಚೂಡ
