ರಾಮನಾಥಪುರ, ಜು.27: ಮಳೆ ಕೊರತೆಯಿಂದ ಜನಜೀವನ ತತ್ತರಿಸಿರುವ ಹಿನ್ನೆಲೆಯಲ್ಲಿ ಉತ್ತಮ ಮಳೆಯಾಗಲೆಂದು ಪ್ರಾರ್ಥಿಸಿ ರಾಮನಾಥಪುರದ ಐತಿಹಾಸಿಕ ಚತುರ್ಯುಗಮೂರ್ತಿ ಶ್ರೀ ರಾಮೇಶ್ವರ ದೇವಾಲಯದಲ್ಲಿ ಮೂರು ದಿನಗಳ ವಿಶೇಷ ಪರ್ಜನ್ಯ ಜಪ ಮತ್ತು ಸೋಮಸೂತ್ರ ಧಾರ್ಮಿಕ ಕಾರ್ಯಕ್ರಮಗಳು ಸೋಮವಾರದಿಂದ ಆರಂಭಗೊಂಡವು.
ಜುಲೈ 27, 28 ಹಾಗೂ 29ರಂದು ನಡೆಯಲಿರುವ ಈ ವಿಶೇಷ ಧಾರ್ಮಿಕ ವಿಧಿಗಳ ಅಂಗವಾಗಿ ಸೋಮವಾರ ಬೆಳಿಗ್ಗೆ ಶ್ರೀ ರಾಮೇಶ್ವರಸ್ವಾಮಿಗೆ ನಾಂದಿ ಪೂಜೆ, ಏಕಾದಶ ರುದ್ರಾಭಿಷೇಕ, ಪರ್ಜನ್ಯ ಜಪ, ನವಗ್ರಹ ಜಪ, ಗಣಪತಿ ಜಪ ಹಾಗೂ ಗಣಪತಿ ಹೋಮ ನೆರವೇರಿಸಿ ಉತ್ತಮ ಮಳೆಯಾಗಲೆಂದು ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಸಂಜೆ ಇಂದ್ರಾಕ್ಷಿ ಅಮ್ಮನವರಿಗೆ ಜಪ ಹಾಗೂ ಭಜನಾ ಕಾರ್ಯಕ್ರಮಗಳು ನಡೆದವು.

ವೈದಿಕ ಸೋಮನಹಳ್ಳಿ ಪ್ರಕಾಶ್ ಅವರ ನೇತೃತ್ವದಲ್ಲಿ ಸುಮಾರು 40 ಯಜ್ಞಕರ್ತರು ಹಾಗೂ ವೈದಿಕರು ವಿಶೇಷ ಧಾರ್ಮಿಕ ಕೈಂಕರ್ಯಗಳಲ್ಲಿ ಭಾಗವಹಿಸಿದರು.

ಬರಗಾಲದ ಸಂದರ್ಭದಲ್ಲಿ ಶ್ರೀ ರಾಮೇಶ್ವರನಿಗೆ ಸೋಮಸೂತ್ರ ಕಟ್ಟಿದರೆ ಉತ್ತಮ ಮಳೆಯಾಗುತ್ತದೆ ಎಂಬ ಪೂರ್ವಿಕರ ನಂಬಿಕೆಯ ಹಿನ್ನೆಲೆಯಲ್ಲಿ ಗ್ರಾಮಸ್ಥರು ಹಾಗೂ ಭಕ್ತರು ಈ ವಿಶೇಷ ಧಾರ್ಮಿಕ ಆಚರಣೆಯಲ್ಲಿ ಪಾಲ್ಗೊಂಡಿದ್ದಾರೆ. ಸೋಮಸೂತ್ರದ ಆಚರಣೆಯ ಭಾಗವಾಗಿ ಕಾವೇರಿ ನದಿಯಿಂದ ಪವಿತ್ರ ಜಲ ತಂದು ಶ್ರೀ ರಾಮೇಶ್ವರಸ್ವಾಮಿಗೆ ರುದ್ರಾಭಿಷೇಕ ನೆರವೇರಿಸಲಾಗುತ್ತಿದೆ.

ಮೂರು ದಿನಗಳ ಕಾಲ ನಡೆಯಲಿರುವ ಈ ವಿಶೇಷ ಧಾರ್ಮಿಕ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿ, ರಾಜ್ಯದಲ್ಲಿ ಸಮೃದ್ಧ ಮಳೆಯಾಗಲೆಂದು ಪ್ರಾರ್ಥಿಸಿದರು.
– ಕುಮಾರಸ್ವಾಮಿ ಎಂ.ಎನ್.
